ಬಂಧಿತ ಮಾನ್ಸಿಂಗ್ ಸೆಖೋನ್ ಮತ್ತು ಕಪಿಲ್ ಶರ್ಮಾ
ನವದೆಹಲಿ: ಕೆನಾಡದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ ಮೇಲೆ ಇತ್ತೀಚಿಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡಿ ಧಿಲ್ಲೋನ್ ಗ್ಯಾಂಗ್ನ ಸದಸ್ಯ ಮಾನ್ಸಿಂಗ್ ಸೆಖೋನ್ ಎಂಬುವವನ್ನು ಬಂಧಿಸಿದ್ದಾರೆ(Arrest) ಎಂದು ಶುಕ್ರವಾರ(ನ. 28) ವರದಿಯಾಗಿದೆ.
ಬಂಧಿತ ಆರೋಪಿ ಮಾನ್ಸಿಂಗ್ ಸೆಖೋನ್, ಕೆಫೆ ಮೇಲಿನ ಗುಂಡಿನ ದಾಳಿಯ ಹಿಂದಿನ ಪಿತೂರಿಯ ಭಾಗವಾಗಿದ್ದಾನೆ ಎನ್ನಲಾಗಿದೆ. ಸರ್ರೆಯ ಕ್ಯಾಪ್ಸ್ ಕೆಫೆಯ ಮೇಲೆ ಜುಲೈ ಮತ್ತು ಅಕ್ಟೋಬರ್ ನಡುವೆ ಕನಿಷ್ಠ ಮೂರು ಬಾರಿ ದಾಳಿ ನಡೆದಿದೆ. ಆದರೂ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಜು. 10ರಂದು ಮೊದಲ ಗುಂಡು ಹಾರಿಸಿದ ಶೂಟರ್‌ಗಳಿಗೆ ಸೆಖೋನ್ ಶಸ್ತ್ರಾಸ್ತ್ರಗಳು ಮತ್ತು ವಾಹನವನ್ನು ಒದಗಿಸಿದ್ದಾನೆ ಎಂದು ಆರೋಪಿಸಲಾಗಿದೆ. ಶೂಟರ್‌ಗಳು ಬಳಸಿದ್ದ ವಾಹನವನ್ನು ಕೆನಡಾದ ಪೊಲೀಸರು ಗುರುತಿಸಿದ್ದಾರೆ. ಆಗಸ್ಟ್‌ನಲ್ಲಿ ಕೆನಡಾದಿಂದ ಭಾರತಕ್ಕೆ ಪಲಾಯನ ಮಾಡಿದ್ದ ಎನ್ನಲಾಗಿದೆ.
ಇತ್ತೀಚಿಕೆಗೆ ಶಸ್ತ್ರಾಸ್ತ್ರ ಕಳ್ಳಸಾಗಾಣೆ ಗುಂಪಿನ ಕೆಲವರನ್ನು ಬಂಧಿಸಿದ್ದು, ಈ ವೇಳೆ ಸೆಖೋಯ್ಗೆ ಶಸ್ತ್ರಾಸ್ತ್ರ ಪೂರೈಸಿದ್ದೇವೆ ಎಂದು ಹೇಳಿದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಚೀನಾ ನಿರ್ಮಿತ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆಖೋನ್ ದರೋಡೆಕೋರ ಗೋಲ್ಡಿ ಧಿಲ್ಲೋನ್‌ನ ಸಹಚರನಾಗಿದ್ದು, ಅವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಗೋಲ್ಡಿ ಧಿಲ್ಲೋನ್ ಮತ್ತು ಮತ್ತೊಬ್ಬ ದರೋಡೆಕೋರ ಕುಲದೀಪ್ ಸಿಧು ಇಬ್ಬರೂ ಮಾಬ್ ಬಾಸ್ ಲಾರೆನ್ಸ್ ಬಿಷ್ಣೋಯ್ ಕಾರ್ಯಾಚರಣೆಗಳ ಭಾಗವಾಗಿದ್ದರು. ಹಲವು ಗುಂಡಿನ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು ಎಂದು ತಿಳಿದು ಬಂದಿದೆ (ಏಜೆನ್ಸೀಸ್).