- ಪ್ರಚಾರ ರ್ಯಾಲಿ ಮುಂದುವರಿಸಲು ಕೋರಿದ್ದ ಅನುಮತಿ
- ತಮಿಳುನಾಡು ಖಾಕಿ ಪಡೆಯಿಂದ ತಿರಸ್ಕಾರ
- ನಿರಾಕರಿಸಲು ಪೊಲೀಸರು ನೀಡಿರುವ ಕಾರಣ ಹೀಗಿದೆ
ಚೆನ್ನೈ: ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರಿಗೆ ತಮಿಳುನಾಡಿನ ಪೊಲೀಸರು ಶಾಕ್ ನೀಡಿದ್ದಾರೆ. ಕರೂರ್ ಕಾಲ್ತುಳಿತ ದುರಂತ ಬಳಿಕ ಪ್ರಚಾರ ರ್ಯಾಲಿ ಮುಂದುವರಿಸಲು ಕೋರಿದ್ದ ಅನುಮತಿಯನ್ನು ಖಾಕಿ ಪಡೆ ತಿರಸ್ಕರಿಸಿದೆ.
ಇದೇ ಡಿಸೆಂಬರ್ 4ರಂದು ಸೇಲಂನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಜಯ್ ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಪತ್ರವನ್ನು ನೋಡಿದ ತಮಿಳುನಾಡು ಪೊಲೀಸರು, ಅನುಮತಿ ನೀಡುವ ಬದಲಿಗೆ ತಿರಸ್ಕರಿಸಿದ್ದಾರೆ.
ನಿರಾಕರಿಸಲು ಕಾರಣ?
ಡಿಸೆಂಬರ್ 4ರಂದು ಟಿವಿಕೆ ಪಕ್ಷದ ನಾಯಕ ವಿಜಯ್ ನೇತೃತ್ವದಲ್ಲಿ ಸೇಲಂನಲ್ಲಿ ನಡೆಯಲಿರುವ ಪ್ರಚಾರ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಆ ದಿನಾಂಕಗಳಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಆರಂಭದಲ್ಲಿಯೇ ಹೇಳಿದ್ದರು. ಆದಾಗ್ಯೂ, ಟಿವಿಕೆ ನೀಡಿದ ಪತ್ರದಲ್ಲಿ, ಭದ್ರತಾ ಸಿಬ್ಬಂದಿ ಕೊರತೆ ಮತ್ತು ಎಷ್ಟು ಜನರು ಹಾಜರಾಗುತ್ತಾರೆ ಎಂಬುದರ ನಿಖರವಾದ ವಿವರಗಳ ಕೊರತೆಯೇ ಅನುಮತಿ ನಿರಾಕರಿಸಲು ಮುಖ್ಯ ಕಾರಣ ಎನ್ನಲಾಗಿದೆ.
ಟಿವಿಕೆ ನಾಯಕ ವಿಜಯ್ ಭವಿಷ್ಯದಲ್ಲಿ ಸಾರ್ವಜನಿಕ ಸಭೆಗಳಿಗೆ ಅನುಮತಿ ಕೋರಿದರೆ, ಕಾರ್ಯಕ್ರಮದ ದಿನಾಂಕಕ್ಕಿಂತ ಕನಿಷ್ಠ ನಾಲ್ಕು ವಾರಗಳ ಮುಂಚಿತವಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಈ ಮಧ್ಯೆ, ಪಕ್ಷವು ತಮ್ಮ ಪ್ರಚಾರವನ್ನು ಪರ್ಯಾಯ ದಿನಾಂಕಗಳಲ್ಲಿ ನಡೆಸಲು ಶೀಘ್ರದಲ್ಲೇ ಅನುಮತಿಗಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ. ಸೇಲಂ ನಂತರ ಈರೋಡ್, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಪಕ್ಷದ ನಾಯಕ ವಿಜಯ್ ಅವರ ಪ್ರಚಾರವನ್ನು ನಡೆಸಲು ಪಕ್ಷದ ಮೂಲಗಳು ಪ್ಲಾನ್ಗಳನ್ನು ಹಾಕಿಕೊಂಡಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ಕರೂರ್ ಕಾಲ್ತುಳಿತ ಪ್ರಕರಣ
ಸೆಪ್ಟೆಂಬರ್ 27ರ ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ಪ್ರಚಾರ ರ್ಯಾಲಿಯ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತಮಿಳನ ವೆಟ್ರಿ ಕಳಗಂ ಸಂಸ್ಥಾಪಕ, ನಟ ವಿಜಯ್ ವಿರುದ್ಧ ದೂರುಗಳು ದಾಖಲಾಯಿತು. ದುರಂತದಲ್ಲಿ ಮೃತಪಟ್ಟವರಿಗೆ ತಲಾ 20 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಹೇಳಿದರೆ, ತಮಿಳುನಾಡು ಸರ್ಕಾರ 10 ಲಕ್ಷ ರೂ. ಘೋಷಿಸಿತು.