ಬಂಗಾಳದಲ್ಲಿ ದೀದಿಗೆ ಶಾಕ್! ಟಿಎಂಸಿ ಮಾಜಿ ಸಚಿವ ಉದಯನ್ ಗುಹಾ ಬಂಧನ: ಕೋಲ್ಕತ್ತಾ ಫ್ಲಾಟ್ ಮೇಲೆ ಮುಂಜಾನೆ ಪೊಲೀಸ್ ದಾಳಿ!
ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ವಿರೋಧ ಪಕ್ಷದ ನಾಯಕರ ಕೈ-ಕಾಲು ಮುರಿಯುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿ ಸದಾ ವಿವಾದಗಳ ಕೇಂದ್ರಬಿಂದುವಾಗಿದ್ದ ಟಿಎಂಸಿ ಹಿರಿಯ ನಾಯಕ, ಮಾಜಿ ಸಚಿವ ಉದಯನ್ ಗುಹಾ(Udayan Guha) ಅವರನ್ನು ಪೊಲೀಸರು ನಾಟಕೀಯವಾಗಿ ಬಂಧಿಸಿದ್ದಾರೆ.
ಬುಧವಾರ ಮುಂಜಾನೆ ಕೋಲ್ಕತಾದ ಫುಲ್‌ಬಾಗನ್ ಪ್ರದೇಶದಲ್ಲಿರುವ ಅವರ ಐಷಾರಾಮಿ ಫ್ಲಾಟ್ ಮೇಲೆ ದಾಳಿ ನಡೆಸಿದ ಕೂಚ್ ಬೆಹಾರ್ ಜಿಲ್ಲಾ ಪೊಲೀಸರು ಈ ಹೈಪ್ರೊಫೈಲ್ ಬಂಧನ ಪ್ರಕ್ರಿಯೆ ನಡೆಸಿದ್ದಾರೆ. ಉತ್ತರ ಬಂಗಾಳ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ದಬಾಳಿಕೆಯ ನಾಯಕ ಎಂದೇ ಗುರುತಿಸಿಕೊಂಡಿರುವ ಉದಯನ್ ಗುಹಾ ಅವರ ದಿಢೀರ್ ಬಂಧನವು ಇಡೀ ಬಂಗಾಳ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಕೋಲ್ಕತಾ ಫ್ಲಾಟ್ ಮೇಲೆ ಮುಂಜಾನೆ ದಾಳಿ!
ಕಳೆದ ಕೆಲವು ದಿನಗಳಿಂದ ಮಾಜಿ ಸಚಿವ ಉದಯನ್ ಗುಹಾ ಅವರು ಕೋಲ್ಕತಾದ ಫುಲ್‌ಬಾಗನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಫ್ಲಾಟ್‌ನಲ್ಲಿ ವಾಸವಿದ್ದರು. ಅವರ ವಿರುದ್ಧ ದಾಖಲಾಗಿದ್ದ ಸಾಲು ಸಾಲು ಜಾಮೀನು ರಹಿತ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅವರ ಮೇಲೆ ನಿರಂತರ ನಿಗಾ ಇಟ್ಟಿತ್ತು. ಬುಧವಾರ ಮುಂಜಾನೆ ಕೂಚ್ ಬೆಹಾರ್ ಜಿಲ್ಲಾ ಪೊಲೀಸರ ವಿಶೇಷ ತಂಡವು ಫುಲ್‌ಬಾಗನ್ ಫ್ಲಾಟ್‌ಗೆ ನುಗ್ಗಿ, ಕೆಲಕಾಲ ತೀವ್ರ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲು ನಿರ್ಧರಿಸಿತು. ಬಂಧನದ ನಂತರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ, ಅವರನ್ನು ಉತ್ತರ ಬಂಗಾಳಕ್ಕೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಭಾಷಣಗಳಿಂದಲೇ ವಿವಾದ ಸೃಷ್ಟಿಸುತ್ತಿದ್ದ ‘ದೊರೆ’
ಮುಂಚೆ ಫಾರ್ವರ್ಡ್ ಬ್ಲಾಕ್ ಪಕ್ಷದಲ್ಲಿದ್ದ ಉದಯನ್ ಗುಹಾ, ನಂತರ ಟಿಎಂಸಿ ಸೇರಿ ಉತ್ತರ ಬಂಗಾಳದ ಪ್ರಮುಖ ಮುಖಂಡರಾಗಿ ಬೆಳೆದಿದ್ದರು. ಮಮತಾ ಸಂಪುಟದಲ್ಲಿ ಉತ್ತರ ಬಂಗಾಳ ಅಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಆದರೆ, ರಾಜಕಾರಣಕ್ಕಿಂತ ಹೆಚ್ಚಾಗಿ ತಮ್ಮ ಪ್ರಚೋದನಾಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಅವರು ಸುದ್ದಿಯಲ್ಲಿದ್ದರು. ವಿರೋಧ ಪಕ್ಷದವರ ಕೈ-ಕಾಲುಗಳನ್ನು ಮುರಿಯಿರಿ ಹಾಗೂ ಅವರನ್ನು ಊರೊಳಗೆ ಬಿಡಬೇಡಿ, ಪ್ರದೇಶ ಬಿಟ್ಟು ಓಡಿಸಿ ಎಂಬಂತಹ ಇವರ ಹಿಂಸಾತ್ಮಕ ಹೇಳಿಕೆಗಳು ಹಲವು ಬಾರಿ ಟಿಎಂಸಿಯನ್ನು ಮುಜುಗರಕ್ಕೆ ಈಡುಮಾಡಿದ್ದವು. ಈ ಹಿಂದೆ ಇವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ FIR ಕೂಡ ದಾಖಲಾಗಿತ್ತು.
ಬಂಧನಕ್ಕೆ ಅಸಲಿ ಕಾರಣವೇನು?
ಪೊಲೀಸ್ ಮೂಲಗಳ ಪ್ರಕಾರ, ಉದಯನ್ ಗುಹಾ ವಿರುದ್ಧ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವುದು, ಗಲಭೆಗೆ ಪ್ರಚೋದನೆ ನೀಡಿರುವುದು ಮತ್ತು ಚುನಾವಣಾ ಹಿಂಸಾಚಾರಕ್ಕೆ ಪ್ರೇರೇಪಿಸಿರುವ ಕೃತ್ಯಗಳಡಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ದಿನ್ಹಾಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಳೆಯ ಹಾಗೂ ನಿರ್ದಿಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆಯಾದರೂ, ಕೂಚ್ ಬೆಹಾರ್ ಜಿಲ್ಲಾ ಪೊಲೀಸರು ತನಿಖೆಯ ಹಿತದೃಷ್ಟಿಯಿಂದ ನಿಖರವಾದ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ. ಟಿಎಂಸಿ ಆಡಳಿತದ ಒಳಗೆ ದಂಗೆಯೆದ್ದು ನಾಯಕರು ಜೈಲು ಸೇರುತ್ತಿರುವುದು ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕೃತ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ,(ಏಜೆನ್ಸೀಸ್).