ರಾಹುಲ್ ಗಾಂಧಿ ಮತ್ತು ಸಿಎಂ ಹೇಮಂತ್ ಸೊರೆನ್
ರಾಂಚಿ: ಜಾರ್ಖಂಡ್‌ನಲ್ಲಿ(Jharkhand) ಇಂಡಿಯಾ ಮೈತ್ರಿಕೂಟ ವಿಘಟನೆಯಾಗುವ ಸಾಧ್ಯತೆಯಿದ್ದು, ರಾಜ್ಯದಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಂದು ಸ್ಥಾನಕ್ಕೆ ಕಾಂಗ್ರೆಸ್ ನಿರೀಕ್ಷಿಸಿದ್ದು, ಅಭ್ಯರ್ಥಿಯನ್ನು ಘೋಷಿಸಿದೆ. ಆದ್ರೆ ಆಡಳಿತರೂಢ ಜೆಎಂಎಂ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ ಎಂದು ಶುಕ್ರವಾರ(ಜೂ. 05) ವರದಿಯಾಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಜೆಎಂಎಂ ಶಾಸಕರು, ಸಚಿವರು, ಸಂಸದರು ಮತ್ತು ಹಿರಿಯ ನಾಯಕರು ಇಂದು ಸಭೆ ನಡೆಸಿದರು. ಸಭೆಯಲ್ಲಿ ಎರಡೂ ಸ್ಥಾನಗಳಲ್ಲಿ ಜೆಎಂಎಂ ಅಭ್ಯರ್ಥಿಗಳು ಸ್ಪರ್ಧಿಸಲು ಒತ್ತಾಯಿಸಲಾಗಿದೆ ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಯೋಗೇಂದ್ರ ಮೆಹ್ತೋ, ಖಾಲಿ ಇರುವ ಎರಡೂ ಸ್ಥಾನಗಳಲ್ಲಿ ಜೆಎಂಎಂ ಸ್ಪರ್ಧಿಸಬೇಕು ಎಂದು ಸಭೆಯಲ್ಲಿ ಒಮ್ಮತ ಮೂಡಿ ಬಂದಿದೆ. ಆದಾಗ್ಯೂ, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಿಎಂ ಹೇಮಂತ್ ಸೊರೆನ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿಎಂ ಸೊರೆನ್ ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಈಗಾಗಲೇ ಜಾರ್ಖಂಡ್‌ನ ಅಭ್ಯರ್ಥಿ ಸೇರಿದಂತೆ ಏಳು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಜೆಎಂಎಂ ಒಂದು ಸ್ಥಾನವನ್ನು ತನಗೆ ಹಂಚಿಕೆ ಮಾಡುತ್ತದೆ ಎಂದು ಭಾವಿಸಿದೆ.
ಜೆಎಂಎಂ ಮತ್ತು ಕಾಂಗ್ರೆಸ್ ಜಾರ್ಖಂಡ್‌ನಲ್ಲಿ ಬಹಳ ವರ್ಷಗಳಿಂದ ಮೈತ್ರಿ ಪಾಲುದಾರರಾಗಿದ್ದಾರೆ. ಒಂದು ವೇಳೆ ಜೆಎಂಎಂ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ರೆ, ಎರಡೂ ಪಕ್ಷಗಳ ನಡುವೆ ತೀವ್ರ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಇನ್ನೂ ವಿವಿಧ ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ (ಏಜೆನ್ಸೀಸ್).