ಚೀನಾ-ಪಾಕ್‌ಗೆ ಶಾಕ್: ಅಮೆರಿಕ ರಿಲೀಸ್​ ಮಾಡಿದ ಇಂಡಿಯಾ ಮ್ಯಾಪ್​ನಲ್ಲಿ ಭಾರತೀಯರಿಗೆ ಖುಷಿ ಸುದ್ದಿ..! 
ದೇಶ

ಚೀನಾ-ಪಾಕ್‌ಗೆ ಶಾಕ್: ಅಮೆರಿಕ ರಿಲೀಸ್​ ಮಾಡಿದ ಇಂಡಿಯಾ ಮ್ಯಾಪ್​ನಲ್ಲಿ ಭಾರತೀಯರಿಗೆ ಖುಷಿ ಸುದ್ದಿ..! America

ವಾಷಿಂಗ್ಟನ್: ಭಾರತದ ಸಾರ್ವಭೌಮತ್ವಕ್ಕೆ ಅಮೆರಿಕದಿಂದ(America) ಅತಿದೊಡ್ಡ ರಾಜತಾಂತ್ರಿಕ ಬೆಂಬಲ ಸಿಕ್ಕಿದೆ. ಶನಿವಾರ ನಡೆದ ಐತಿಹಾಸಿಕ ವ್ಯಾಪಾರ ಒಪ್ಪಂದದ ಸಂದರ್ಭದಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಕಚೇರಿಯು ಬಿಡುಗಡೆ ಮಾಡಿದ ಅಧಿಕೃತ ನಕ್ಷೆಯು ಇಡೀ ವಿಶ್ವದ ಗಮನ ಸೆಳೆದಿದೆ. ದಶಕಗಳಿಂದ ವಿವಾದಿತ ಪ್ರದೇಶಗಳೆಂದು ಕರೆಯಲ್ಪಡುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಅಕ್ಷಯ್ ಚಿನ್ ಪ್ರದೇಶಗಳನ್ನು ಅಮೆರಿಕವು ಅಧಿಕೃತವಾಗಿ ಭಾರತದ ಭೂಪಟದೊಳಗೆ ಸೇರಿಸಿ ತೋರಿಸಿದೆ.
ವ್ಯಾಪಾರ ಒಪ್ಪಂದದ ನಡುವೆ 'ನಕ್ಷೆ' ಸಂಚಲನ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆಯ ನಂತರ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಈ ಒಪ್ಪಂದದ ವಿವರಗಳನ್ನು ಹಂಚಿಕೊಳ್ಳುವಾಗ ಅಮೆರಿಕ ಸರ್ಕಾರದ ಅಧಿಕೃತ ಹ್ಯಾಂಡಲ್ ಹಂಚಿಕೊಂಡ ಗ್ರಾಫಿಕ್‌ನಲ್ಲಿ ಭಾರತದ ಸಂಪೂರ್ಣ ನಕ್ಷೆಯನ್ನು ಬಳಸಲಾಗಿದೆ. ಇದು ಕೇವಲ ತಾಂತ್ರಿಕ ತಪ್ಪಲ್ಲ, ಬದಲಿಗೆ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಮೆರಿಕ ನೀಡಿದ ಮೌನ ಸಮ್ಮತಿ ಎಂದು ಭೂರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಪಾಕಿಸ್ತಾನ ಮತ್ತು ಚೀನಾಕ್ಕೆ ಮುಖಭಂಗ

ಈ ಹಿಂದಿನ ಅಮೆರಿಕದ ಆಡಳಿತಗಳು ಭಾರತದ ನಕ್ಷೆಯನ್ನು ತೋರಿಸುವಾಗ PoK ಭಾಗವನ್ನು ವಿವಾದಿತ ಎಂದು ಗುರುತಿಸುತ್ತಿದ್ದವು. ಆದರೆ 2026ರ ಈ ನಕ್ಷೆಯಲ್ಲಿ ಅಂತಹ ಯಾವುದೇ ಗುರುತುಗಳಿಲ್ಲದೆ, ಇಡೀ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದ ಭಾಗವಾಗಿ ತೋರಿಸಿರುವುದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಅತ್ತ ಅಕ್ಷಯ್ ಚಿನ್ ವಿಚಾರದಲ್ಲಿ ಚೀನಾಕ್ಕೂ ಅಮೆರಿಕ ಖಡಕ್ ಸಂದೇಶ ರವಾನಿಸಿದೆ.

ಒಪ್ಪಂದದ ಪ್ರಮುಖಾಂಶಗಳು

ಸುಂಕ ಕಡಿತ: ಭಾರತೀಯ ರಫ್ತುಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ಶೇ. 50ರಷ್ಟು ದಂಡನಾತ್ಮಕ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ.
ಶೂನ್ಯ ಸುಂಕ: ಕೃಷಿ ಉತ್ಪನ್ನಗಳು, ಕಾಫಿ ಮತ್ತು ಸಾಂಬಾರ ಪದಾರ್ಥಗಳಿಗೆ ವಿಶೇಷ ರಿಯಾಯಿತಿ ಸಿಗಲಿದೆ.
ಇಂಧನ ಡೀಲ್: ಬದಲಾಗಿ ಭಾರತವು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಮತ್ತು ತಂತ್ರಜ್ಞಾನವನ್ನು ಖರೀದಿಸಲು ಒಪ್ಪಿದೆ.
ಈ ನಕ್ಷೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ನೆಟ್ಟಿಗರು ಅಮೆರಿಕ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ ಎಂದು ಸಂಭ್ರಮಿಸುತ್ತಿದ್ದಾರೆ,(ಏಜೆನ್ಸೀಸ್).