Abdul Sattar  
ದೇಶ

ಮಹಾಯುತಿಯಲ್ಲಿ ಬಿರುಕು...? ಬಿಜೆಪಿಯ ವಿಸ್ತರಣೆಯ ಆಸೆಗೆ ಶಿವಸೇನೆ ಬಲಿಯಾಗುತ್ತಿದೆ ಎಂದ ಶಿಂಧೆ ಬಣದ ನಾಯಕ! | Abdul Sattar

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಭಾರಿ ರಾಜಕೀಯ ಸಂಚಲನ ಸೃಷ್ಟಿಯಾಗಿದ್ದು, ಶಿವಸೇನೆಯ ಮಾಜಿ ಸಚಿವ ಅಬ್ದುಲ್ ಸತ್ತಾರ್ ಅವರು ತಮ್ಮದೇ ಮಿತ್ರಪಕ್ಷವಾದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಳಮಟ್ಟದಲ್ಲಿ ಶಿವಸೇನೆಯನ್ನು ವ್ಯವಸ್ಥಿತವಾಗಿ ದಮನ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ಈಗಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೈತ್ರಿಕೂಟದ ಭವಿಷ್ಯಕ್ಕೆ ಅಪಾಯ ಕಾದಿದೆ ಎಂದು ಎಚ್ಚರಿಸಿದ್ದಾರೆ.
ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸತ್ತಾರ್, ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಮಿತ್ರಪಕ್ಷಗಳನ್ನೇ ಬಲಿ ನೀಡುತ್ತಿದೆ ಮತ್ತು ಈ ಪ್ರಕ್ರಿಯೆಯು ಶಿವಸೇನೆಯ ಸಾಂಸ್ಥಿಕ ನೆಲೆಗೆ ಮಾರಕವಾಗಿರುವ ಸ್ಲೋ ಪಾಯ್ಸನ್ ಇದ್ದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸದ್ಯದ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ವಿರೋಧ ಪಕ್ಷಗಳು ನಮ್ಮ ಜಾಗವನ್ನು ಕಬಳಿಸಿದರೆ ಅದನ್ನು ಅವರ ಸಾಮರ್ಥ್ಯ ಎನ್ನಬಹುದು, ಆದರೆ ನಮ್ಮದೇ ಮೈತ್ರಿಕೂಟದ ದೊಡ್ಡಣ್ಣನಾದ ಬಿಜೆಪಿ ನಮಗೇ ಇಂತಹ ದ್ರೋಹ ಮಾಡುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಅಸಮಾಧಾನಕ್ಕೆ ಕಾರಣವೇನು..?

ವಿಧಾನ ಪರಿಷತ್ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಮೈತ್ರಿಕೂಟದೊಳಗೆ ಮೂಡಿದ್ದ ಭಿನ್ನಾಭಿಪ್ರಾಯವೇ ಈ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ವಿಶೇಷವಾಗಿ ಶಿವಸೇನೆಯ ಗಟ್ಟಿ ಕೋಟೆಯಾಗಿದ್ದ ಛತ್ರಪತಿ ಸಂಭಾಜಿನಗರ-ಜಾಲ್ನಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವುದಕ್ಕೆ ಸತ್ತಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಅಸಮಾಧಾನ ಎಷ್ಟು ತಾರಕಕ್ಕೇರಿತ್ತೆಂದರೆ ಸತ್ತಾರ್ ಅವರ ಪುತ್ರ ಸಮೀರ್ ಸತ್ತಾರ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಥಾಣೆಯಲ್ಲಿ ನಡೆದ ಮೂರು ಗಂಟೆಗಳ ಸುದೀರ್ಘ ಸಂಧಾನ ಸಭೆಯ ಬಳಿಕ ಬಂಡಾಯ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಸಮೀರ್ ಸತ್ತಾರ್ ತಮ್ಮ ನಾಮಪತ್ರವನ್ನು ಹಿಂಪಡೆಯುವ ಸಾಧ್ಯತೆಯಿದೆ. ಜಿಲ್ಲಾ ಮಟ್ಟದಲ್ಲಿ ಶಿವಸೇನೆಯ ನಾಯಕರ ರಾಜಕೀಯ ವೈರಿಗಳನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಸತ್ತಾರ್ ದೂರಿದ್ದಾರೆ.
ಇದೇ ವೇಳೆ, ಶಿವಸೇನೆಯ ಎರಡೂ ಬಣಗಳ (ಶಿಂಧೆ ಮತ್ತು ಉದ್ಧವ್ ಠಾಕ್ರೆ) ಮರುಸೇರ್ಪಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಇಬ್ಬರೂ ಒಂದಾಗಲು ನಿರ್ಧರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತೀಚೆಗೆ ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ಸತ್ತಾರ್ ಮತ್ತು ಉದ್ಧವ್ ಬಣದ ನಾಯಕ ಅಂಬಾದಾಸ್ ದಾನ್ವೆ ಸಾರ್ವಜನಿಕವಾಗಿ ಆಲಂಗಿಸಿಕೊಂಡಿದ್ದ ಫೋಟೋಗಳು ಈ ಚರ್ಚೆಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿವೆ. ಪಕ್ಷವನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದಿರುವ ಸತ್ತಾರ್​, ಮುಂಬರುವ ದಿನಗಳಲ್ಲಿ ಏಕನಾಥ್ ಶಿಂಧೆ ಅವರೇ ಮುಖ್ಯಮಂತ್ರಿಯಾಗಬೇಕು, ಬಿಹಾರದಲ್ಲಿ ನಿತೀಶ್ ಕುಮಾರ್​​ಗೆ ಸಿಗುವ ಅವಕಾಶ ಶಿಂಧೆ ಅವರಿಗೆ ಏಕೆ ಸಿಗಬಾರದು ಎಂದು ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).