Next Education Minister | ಶಿಕ್ಷಣ ಸಚಿವಾಲಯದ ಚುಕ್ಕಾಣಿ ಹಿಡಿಯಲಿದ್ದಾರಾ ಮಹಾ ಸಂಸದ..?  
ದೇಶ

ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಫಡ್ನವಿಸ್-ಶಿಂಧೆ ದೆಹಲಿಗೆ ದೌಡು!...ಶಿಕ್ಷಣ ಸಚಿವಾಲಯದ ಚುಕ್ಕಾಣಿ ಹಿಡಿಯಲಿದ್ದಾರಾ ಮಹಾ ಸಂಸದ..? | Next Education Minister

ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಬೃಹತ್ ಪ್ರತಿಭಟನೆಯ ನಡುವೆ, ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಬಳಿಕ ಶಿವಸೇನೆಯ ಸಂಸದ ಶ್ರೀಕಾಂತ್ ಶಿಂಧೆ ಮುಂದಿನ ಶಿಕ್ಷಣ ಸಚಿವರಾಗಿ (Next Education Minister) ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ, ಮಹಾರಾಷ್ಟ್ರದ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಮೂಲಗಳ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಏಕನಾಥ್ ಶಿಂಧೆ ದೆಹಲಿಗೆ ತೆರಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಶ್ರೀಕಾಂತ್ ಶಿಂಧೆಯನ್ನು ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಆಪರೇಷನ್ ಟೈಗರ್​ಗೆ ಪ್ರತಿಫಲವಾ..?

ಇತ್ತೀಚಿನ ದಿನಗಳಲ್ಲಿ ಶ್ರೀಕಾಂತ್ ಶಿಂಧೆ ರಾಜಕೀಯ ಪ್ರಾಬಲ್ಯ ಹೆಚ್ಚಾಗಿದ್ದು, ವರದಿಗಳ ಪ್ರಕಾರ, ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಲೋಕಸಭಾ ಸಂಸದರು ಪಕ್ಷ ತೊರೆದು ಶಿಂಧೆ ಬಣಕ್ಕೆ ಸೇರ್ಪಡೆಯಾದ ಆಪರೇಷನ್ ಟೈಗರ್ ಕಾರ್ಯಾಚರಣೆಯಲ್ಲಿ ಇವರದ್ದೇ ಪ್ರಮುಖ ಪಾತ್ರ ಎಂದು ತಿಳಿದುಬಂದಿದೆ. ಇದರಿಂದಾಗಿ ಲೋಕಸಭೆಯಲ್ಲಿ ಶಿಂಧೆ ಬಣದ ಬಲ 13ಕ್ಕೆ ಏರಿಕೆಯಾಗಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಸರ್ಕಾರ ಮತ್ತು ಕಾಕ್ರೋಚ್​​ ಜನತಾ ಪಾರ್ಟಿ ನಡುವಿನ ಮೂರನೇ ಹಂತದ ಮಾತುಕತೆಗೆ ಕೆಲವು ಗಂಟೆಗಳ ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಎರಡು ಪುಟಗಳ ಸುದೀರ್ಘ ಹೇಳಿಕೆಯನ್ನು ಹಂಚಿಕೊಂಡಿರುವ ಪ್ರಧಾನ್, ಕಳೆದ ಹತ್ತು ದಿನಗಳಲ್ಲಿ ನಡೆದ ಘಟನೆಗಳಿಂದ ತಮಗೆ ತೀವ್ರ ಬೇಸರವಾಗಿದೆ ಎಂದಿದ್ದಾರೆ.
ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ ಎಂದು ಪ್ರಧಾನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಮೇ 3, 2026 ರಂದು ನಡೆದು, ಪೇಪರ್ ಸೋರಿಕೆಯ ಕಾರಣದಿಂದ ಜೂನ್ 21 ಕ್ಕೆ ಮರುಪರಿಶೀಲನೆಗೊಂಡ ನೀಟ್-ಯುಜಿ (NEET-UG) ಪರೀಕ್ಷೆಯ ಅಕ್ರಮಗಳ ಕುರಿತು ಮಾತನಾಡಿದ ಅವರು, ಮೊದಲ ದಿನದಿಂದಲೂ ನಾನು ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದೇನೆ ಮತ್ತು ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿದಿಲ್ಲ. ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಪರೀಕ್ಷಾ ಮಾಫಿಯಾದಿಂದ ಹಾಳಾಗಲು ಬಿಡುವುದಿಲ್ಲ ಅಥವಾ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನಾನು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಹೇಳಿದ್ದೇನು...?

ಪ್ರಧಾನ್ ರಾಜೀನಾಮೆ ಸಲ್ಲಿಸಿದ ತಕ್ಷಣ ಕಾಕ್ರೋಚ್​ ಜನತಾ ಪಾರ್ಟಿ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ ಎಂದು ಪೋಸ್ಟ್ ಮಾಡಿದೆ. ಅಲ್ಲದೆ, ಪ್ರಧಾನ್ ರಾಜೀನಾಮೆಯ ಸುದ್ದಿ ತಿಳಿಯುತ್ತಿದ್ದಂತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋವನ್ನು ಪೋಸ್ಟ್​​ ಮಾಡಿದೆ. ಇದೇ ಪ್ರಜಾಪ್ರಭುತ್ವ. ಅವರು ರಾಜೀನಾಮೆ ನೀಡಿದ್ದಾರೆ. ನೆನಪಿಡಿ, ಕಾಕ್ರೋಚ್ ಜೊತೆ ಎಂದಿಗೂ ಆಟವಾಡಬೇಡಿ ಎಂದಿದ್ದು, ತಮ್ಮ ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳು ಇನ್ನೂ ಈಡೇರದೆ ಉಳಿದಿರುವುದರಿಂದ ಕಾಕ್ರೋಚ್​​ಗಳು (ಪ್ರತಿಭಟನಾಕಾರರು) ತಕ್ಷಣವೇ ನಿರ್ಗಮಿಸುವುದಿಲ್ಲ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

ಸಿಜೆಪಿಯ ಬಾಕಿ ಇರುವ ಬೇಡಿಕೆಗಳು

1. ನೀಟ್​ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವುದು.
2. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡುವುದು(ಏಜೆನ್ಸೀಸ್​).