ಮುಂಬೈ: ಬಾಂಗ್ಲಾದೇಶದಲ್ಲಿ ಹಿಂದೂಗಳ ನಿರಂತರ ಹತ್ಯೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಶಾರುಖ್ ಖಾನ್ (Shah Rukh Khan) ಅವರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026 ಗಾಗಿ 9.2 ಕೋಟಿ ರೂ.ಗಳಿಗೆ ಖರೀದಿಸಿದ್ದು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರು ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಮತ್ತು ಐಸಿಸಿ ಮುಖ್ಯಸ್ಥರಾದ ಜಯ್ ಶಾ ಅವರನ್ನು ಪ್ರಶ್ನಿಸಿ, ಆಟಗಾರರನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಐಪಿಎಲ್ ಹರಾಜಿನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಯಾರು ಸೇರಿಸಿದ್ದಾರೆಂದು ನಾನು ಕೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಐಸಿಸಿ ಮುಖ್ಯಸ್ಥರಾಗಿ ಜಯ್ ಶಾ ಅವರು ವಿಶ್ವ ಕ್ರಿಕೆಟ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬಿಸಿಸಿಐ ಮತ್ತು ಐಸಿಸಿ ಎರಡನ್ನೂ ಗುರಿಯಾಗಿಟ್ಟುಕೊಂಡು ಗೃಹ ಸಚಿವರ ಮಗ ಈ ಪ್ರಶ್ನೆಗೆ ಉತ್ತರಿಸಬೇಕು ಎಂದು ಸುಪ್ರಿಯಾ ಶ್ರೀನಾಟೆ ಹೇಳಿದರು.
ಶಿವಸೇನಾ (ಶಿಂಧೆ ಬಣ) ನಾಯಕ ಸಂಜಯ್ ನಿರುಪಮ್ ಅವರು ಶಾರುಖ್ ಖಾನ್ ಅವರನ್ನು ತಂಡದಿಂದ ರೆಹಮಾನ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಶಾರುಖ್ ದೇಶದ ಹಿತದೃಷ್ಟಿಯಿಂದ ಆ ಆಟಗಾರನನ್ನು ಹೊರಬೀಡುವುದು ಉತ್ತಮ ಎಂದು ಹೇಳಿದ್ದಾರೆ.
ಶಾರುಖ್ ಒಬ್ಬ ದೇಶದ್ರೋಹಿ : ಬಿಜೆಪಿ ನಾಯಕ
ಗುರುವಾರ ಯುಪಿ ಬಿಜೆಪಿ ನಾಯಕ ಸಂಗೀತ್ ಸೋಮ್ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದ್ದಿದ್ದಾರೆ. ಶಾರುಖ್ ಹಿಂದೂಗಳನ್ನು ದಮನಿಸುವ ದೇಶವನ್ನು ಬೆಂಬಲಿಸುತ್ತಾರೆ, ಐಪಿಎಲ್ನಲ್ಲಿ ಪಾಕಿಸ್ತಾನಿ ಆಟಗಾರರಿಗೆ ಹೇರಿರುವ ನಿರ್ಬಂಧವನ್ನು ಇನ್ನೂ ಬಾಂಗ್ಲಾದೇಶದ ಆಟಗಾರರಿಗೂ ಹೇರಬೇಕೆಂದು ಹೇಳಿದರು,(ಏಜನ್ಸೀಸ್).