ಮೊಹಮ್ಮದ್ ಯೂನಸ್ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ 
ದೇಶ

ಕೊಲೆಗಾರ, ಫ್ಯಾಸಿಸ್ಟ್; ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ವಿರುದ್ಧ ಮಾಜಿ ಪ್ರಧಾನಿ ಶೇಖ್ ಹಸೀನಾ ವಾಗ್ದಾಳಿ | Sheikh Hasina

ನವದೆಹಲಿ: ಬಾಂಗ್ಲಾದೇಶದಿಂದ ಗಡಿಪಾರಾಗಿ ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು ಕೊಲೆಗಾರ, ಫ್ಯಾಸಿಸ್ಟ್ ಎಂದು ಕಿಡಿಕಾರಿದ್ದಾರೆ.
ದೆಹಲಿಯ ವಿದೇಶಿ ವರದಿಗಾರರ ಪ್ರೆಸ್​ಕ್ಲಬ್​ನಲ್ಲಿ ಬಾಂಗ್ಲಾ ದೇಶ ಅಡ್ಡದಾರಿಯಲ್ಲಿ ಎಂಬ ವಿಷಯದ ಕುರಿತಾದ ವಿಚಾರಣ ಸಂಕೀರ್ಣದಲ್ಲಿ ಆಡಿಯೋ ಮೂಲಕ ಇದೇ ಮೊದಲ ಬಾರಿಗೆ ಶುಕ್ರವಾರ(ಜ. 23) ಸಾರ್ವಜನಿಕರನ್ನುದ್ದೇಶಿ ಶೇಖ್ ಹಸೀನಾ ಮಾತನಾಡಿದ್ದಾರೆ.
ಬಾಂಗ್ಲಾದ ಪ್ರಸ್ತುತ ಯೂನಸ್ ನೇತೃತ್ವದ ಮಧ್ಯಂತರ ಆಡಳಿತವು ದೇಶವನ್ನು ಭಯೋತ್ಪಾದನೆ, ಕಾನೂನುಬಾಹಿರತೆ ಹಾಗೂ ಪ್ರಜಾಪ್ರಭುತ್ವದ ಗಡಿಪಾರು ಯುಗಕ್ಕೆ ತಳ್ಳುತ್ತಿದ ಎಂದು ಆರೋಪಿಸಿದ್ದು,  ವಿದೇಶಿ ಸೇವೆ ಸಲ್ಲಿಸುವ ಕೈಗೊಂಬೆ ಆಡಳಿತವನ್ನು ಉರುಳಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ.
ಬಾಂಗ್ಲಾದೇಶ ಇಂದು ಪ್ರಪಾತದ ಅಂಚಿನಲ್ಲಿ ನಿಂತಿದೆ, ಜರ್ಜರಿತ ಮತ್ತು ರಕ್ತಸ್ರಾವದಿಂದ ಕೂಡಿದ ರಾಷ್ಟ್ರವಾಗಿದೆ. ಬಾಂಗ್ಲಾದಲ್ಲೀಗ ಪ್ರಜಾಪ್ರಭುತ್ವ ದೇಶಭ್ರಷ್ಟವಾಗಿದೆ. ಯೂನಸ್ ಆಡಳಿತದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗಳು ಮುಕ್ತ ಅಥವಾ ನ್ಯಾಯಯುತವಾಗಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಬಾಂಗ್ಲಾ ಹುತಾತ್ಮರ ರಕ್ತದಲ್ಲಿ ಬರೆಯಲ್ಪಟ್ಟ ಸಂವಿಧಾನವನ್ನು ರಕ್ಷಿಸಿ, ಅದನ್ನು ಪುನಃ ಸ್ಥಾಪಿಸಬೇಕು. ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವವನ್ನು ಕಾಪಾಡಿಕೊಂಡು ನಮ್ಮ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಬೇಕು ಎಂದು ದೇಶದ ಪ್ರಜೆಗಳಿಗೆ ಕರೆ ನೀಡಿದ್ದಾರೆ.
2024ರ ಆಗಸ್ಟ್​ನಲ್ಲಿ ನಡೆದ ವಿದ್ಯಾರ್ಥಿಗಳ ದಂಗೆಯು ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ, ಅಲ್ಲಿಂದ ಭಾರತಕ್ಕೆ ಪಲಾಯನ ಮಾಡುವಂತೆ ಮಾಡಿತು. ಕಳೆದ ಒಂದೂವರೆಎ ವರ್ಷದಿಂದ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ನವೆಂಬರ್‌ನಲ್ಲಿ, ಢಾಕಾ ನ್ಯಾಯಾಲಯವು ಪ್ರಚೋದನೆ, ಕೊಲ್ಲಲು ಆದೇಶ ಹಾಗೂ ದೌರ್ಜನ್ಯಗಳನ್ನು ತಡೆಯಲು ನಿಷ್ಕ್ರಿಯತೆಗಾಗಿ ತಪ್ಪಿತಸ್ಥರೆಂದು ಘೋಷಿಸಿ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಮತ್ತು ದೇಶದಲ್ಲಿ ಅವರ ಪಕ್ಷವಾದ ಅವಾಮಿ ಲೀಗ್​ನ ಚಟುವಟಿಕೆಗಳನ್ನು ನಿಷೇಧಿಸಿದೆ (ಏಜೆನ್ಸೀಸ್).