- ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಬಿಜೆಪಿ ಆಯೋಜಿಸಿದ್ದ 'ಜನ್ ಆಕ್ರೋಶ್ ಮೋರ್ಚಾ' ಮೆರವಣಿಗೆ
- ಮೆರವಣಿಗೆಯ ವೇಳೆ ಉಂಟಾದ ಟ್ರಾಫಿಕ್ ಜಂಜಾಟಕ್ಕೆ ಸಂಬಂಧಿಸಿದಂತೆ ಸಚಿವರ ಮೇಲೆ ಹರಿಹೈದ ಮಹಿಳೆ
- ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುವಾಗ ರಸ್ತೆಗಳು ಅನಿವಾರ್ಯವಾಗಿ ನಿರ್ಬಂಧಿಸಲ್ಪಡುವುದು ಸಹಜ
ಮುಂಬೈ: ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಬಿಜೆಪಿ ಆಯೋಜಿಸಿದ್ದ 'ಜನ್ ಆಕ್ರೋಶ್ ಮೋರ್ಚಾ' ಮೆರವಣಿಗೆಯ ವೇಳೆ ಉಂಟಾದ ಟ್ರಾಫಿಕ್ ಜಂಜಾಟ ಮತ್ತು ಅದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಸಚಿವ ಗಿರೀಶ್ ಮಹಾಜನ್ ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಘಟನೆ ನಡೆದ ಒಂದು ದಿನದ ನಂತರ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾಜನ್, ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದ್ದನ್ನು ಖಂಡಿಸಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಲು ಆಗಮಿಸಿದ್ದರು. ಈ ವೇಳೆ ಮೆರವಣಿಗೆಯು ವರ್ಲಿಯ ಕಡೆಗೆ ಸಾಗುತ್ತಿತ್ತು. ಆದಾಗ್ಯೂ, ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುವಾಗ ರಸ್ತೆಗಳು ಅನಿವಾರ್ಯವಾಗಿ ನಿರ್ಬಂಧಿಸಲ್ಪಡುವುದು ಸಹಜ ಎಂದರು.
ಆದರೆ, ಈ ಸಂದರ್ಭದಲ್ಲಿ ಮಹಿಳೆ ಮಾಡಿದ ವರ್ತನೆಯನ್ನು ನಾನು ಒಪ್ಪುವುದಿಲ್ಲ. ರ‍್ಯಾಲಿ ಸಮಯದಲ್ಲಿ ರಸ್ತೆ ಸಂಚಾರದಿಂದ ಅನಾನುಕೂಲವಾಗಿರಬಹುದು. ತಮಗಾದ ಅಸಮಾಧಾನವನ್ನು ವ್ಯಕ್ತಪಡಿಸಲು ಬೇರೆ ಮಾರ್ಗವಿದೆ. ಆದರೆ, ಘರ್ಷಣೆಯ ಸಮಯದಲ್ಲಿ ಮಹಿಳೆ ಬಳಸಿದ ಪದಗಳು ಅನುಚಿತವಾಗಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ.
10 ನಿಮಿಷಗಳಲ್ಲಿ ರಸ್ತೆ ತೆರವುಗೊಳಿಸುವ ಭರವಸೆ ನೀಡಿದ್ದೆ
ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಅವರು ಪೊಲೀಸರನ್ನು ಸಂಪರ್ಕಿಸಬಹುದಿತ್ತು. ಪ್ರತಿಭಟನೆಗೆ ಈಗಾಗಲೇ ಪೂರ್ವಾನುಮತಿಯನ್ನು ಪಡೆಯಲಾಗಿತ್ತು. ಆದಾಗ್ಯೂ, 10 ನಿಮಿಷಗಳಲ್ಲಿ ರಸ್ತೆಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದೆ. ಅಲ್ಲದೆ, ಪ್ರತಿಭಟನೆಯಿಂದ ಉಂಟಾದ ಅನಾನುಕೂಲಕ್ಕಾಗಿ ನಾನು ಕ್ಷಮೆಯನ್ನೂ ಯಾಚಿಸಿದ್ದೆ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂಬ ಭರವಸೆಯನ್ನೂ ನೀಡಿದ್ದೆ ಎಂದು ಹೇಳಿದರು.
ವೈರಲ್ ಆದ ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ ತನ್ನ ಕಾರಿನಿಂದ ಕೆಳಗಿಳಿದು ಬಂದ ಮಹಿಳೆಯು ಅಲ್ಲಿ ಒಂದು ಖಾಲಿ ಮೈದಾನವಿದೆ. ನೂರಾರು ಜನರು ಕಾಯುತ್ತಿದ್ದಾರೆ ಅಲ್ಲೋಗಿ ಪ್ರತಿಭಟಿಸಿ ದಯವಿಟ್ಟು ಇಲ್ಲಿಂದ ಹೊರಡಿ ಎಂದು ಸಚಿವರಿಗೆ ಹೇಳುವುದು ಕೇಳಿಸುತ್ತದೆ.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಮಹಿಳೆಯ ಧ್ವನಿ ಮತ್ತು ಭಾಷೆಯ ಮೇಲೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈಗಾಗಲೇ ಜನದಟ್ಟಣೆಯಿಂದ ಕೂಡಿರುವ ನಗರದ ರಸ್ತೆಗಳಲ್ಲಿ ರಾಜಕೀಯ ಪ್ರತಿಭಟನೆಗಳಿಂದ ಉಂಟಾದ ಸಾರ್ವಜನಿಕ ಅನಾನುಕೂಲತೆಯ ಬಗ್ಗೆ ಅವರ ಹತಾಶೆಯನ್ನು ಹೊರಹಾಕಿದ್ದಾರೆ (ಏಜೆನ್ಸೀಸ್).