BSF Jawan kills wifeHoshiarpur Punjab
- ಪತ್ನಿ ಕೊಂದು ತಾರಸಿಯಿಂದ ಬಿದ್ದಳು ಎಂದು ಕತೆ ಕಟ್ಟಿದ ಬಿಎಸ್‌ಎಫ್ ಯೋಧ.
- ಬಿಎಸ್‌ಎಫ್ ಯೋಧ ಅಮರ್ಜಿತ್ ಸಿಂಗ್ ಬಂಧನ, ಇನ್ನಿಬ್ಬರಿಗಾಗಿ ಹುಡುಕಾಟ.
- ಮದುವೆಯಾದ ದಿನಗಳಿಂದ ಮಗಳ ಮೇಲೆ ನಿರಂತರ ಹಲ್ಲೆ ಮಾಡಲಾಗುತ್ತಿದೆ ಎಂದು ದೂರು ಕೊಟ್ಟ ರಮಾ ತಂದೆ.
ಚಂಡೀಗಢ: ಪತ್ನಿ ಮೇಲೆ ಹಲ್ಲೆ ಮಾಡಿ ಕೊಂದ ಬಳಿಕ ಆಕೆಯ ಕುಟುಂಬಸ್ಥರಿಗೆ, ಆಕೆ ತಾರಸಿ ಮೇಲಿನಿಂದ ಬಿದ್ದು ಮೃತಪಟ್ಟಳು ಎಂದು ಕತೆ ಕಟ್ಟಿದ್ದ ಆರೋಪದ ಮೇರೆಗೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ನಿವಾಸಿ ಹಾಗೂ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧ ಅಮರ್ಜಿತ್ ಸಿಂಗ್ ಆತನ ಪತ್ನಿ ರಮಾ ಮೃತರು ಎಂದು ಗುರುತಿಸಾಲಗಿದೆ. ಅಮರ್ಜಿತ್ ಸಿಂಗ್ ಮತ್ತು ರಮಾ 12 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ.
ಪತಿ ಅರೆಸ್ಟ್..ಮತ್ತಿಬ್ಬರಿಗಾಗಿ ಹುಡುಕಾಟ
ಮೃತ ರಮಾಳ ಪೋಷಕರು ಕೊಟ್ಟ ದೂರಿನ ಮೇರೆಗೆ ಪತಿ ಅಮರ್ಜಿತ್ ಸಿಂಗ್, ಅವರ ಚಿಕ್ಕಪ್ಪ ಕುಲದೀಪ್ ಕುಕಿ ಮತ್ತು ಚಿಕ್ಕಮ್ಮ ಸೋನಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಅಮರ್ಜಿತ್ ಸಿಂಗ್ ಪೊಲೀಸರ ವಶದಲ್ಲಿದ್ದು, ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಏನಾಗಿತ್ತು?
'ಆಗಸ್ಟ್ 14ರ ಬೆಳಗ್ಗಿನ ಜಾವ ನಮಗೆ ಕರೆ ಬಂತು. ರಮಾ 4:00 ಗಂಟೆ ಸುಮಾರಿಗೆ ತಾರಸಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ' ಎಂದರು. ಆನಂತರ, ಆಕೆ ಆಸ್ಪತ್ರೆ ಬಳಿಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದರು'.
ದೇಹದ ಮೇಲಿತ್ತು ತೀವ್ರ ಗಾಯ
'ನಾವು ರಮಾ ದೇಹದ ಮೇಲೆ ಸಾಕಷ್ಟು ಗಾಯವಾಗಿರೋದನ್ನು ಗಮನಿಸಿದ್ದೇವೆ. ಆಕೆ ಸಾಯುವ ಮುನ್ನ, ಪತಿಯಿಂದ ಹಲ್ಲೆಯಾಗಿದೆ ಎಂದು ಕಾಣುತ್ತದೆ. ನಮ್ಮ ಅನುಮಾನಗಳನ್ನು ಬೇರೆಡೆಗೆ ಸೆಳೆಯುವ ಸಲುವಾಗಿ, ಆಕೆ ತಾರಸಿಯಿಂದ ಕೆಳಕ್ಕೆ ಬಿದ್ದಿದ್ದಾಳೆ ಎನ್ನುವ ಕತೆ ಕಟ್ಟುತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ' ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ
ನಿರಂತರ ಹಲ್ಲೆ ಆರೋಪ
'ಮದುವೆಯಾದಾಗಿನಿಂದ ಮಗಳು ತನ್ನ ಪತಿಯಿಂದ ಕಿರುಕುಳ ಮತ್ತು ದೈಹಿಕ ಹಲ್ಲೆಯನ್ನು ಎದುರಿಸುತ್ತಿದ್ದಾಳೆ. ಆಕೆ ಮೃತ ಪಡುವ ಹಿಂದಿನ ದಿನವೂ ಆತ ಕ್ರೂರವಾಗಿ ನಡೆಸಿಕೊಂಡಿರಬಹುದು ಎಂದು ರಮಾಳ ತಂದೆ ರಾಮ್ ಚಂದ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ' ಎನ್ನಲಾಗಿದೆ.
ಕೇಸ್ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ಹರ್‌ಪ್ರೇಮ್ ಸಿಂಗ್, 'ರಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಆಕಸ್ಮಿಕವಾಗಿ ತಾರಸಿಯಿಂದ ಬಿದ್ದಿದ್ದ, ಇಲ್ಲವೇ ಪತಿಯಿಂದ ಹಲ್ಲೆಯಾಗಿ ಈ ದುರಂತ ಸಂಭವಿಸಿದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ರಮಾಳ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ನಂತರ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆಕೆಯ ಅಂತ್ಯಕ್ರಿಯೆಯನ್ನು ಆಕೆಯ ಸ್ವಂತ ಗ್ರಾಮದಲ್ಲಿ ನಡೆಸಲಾಗುವುದು' ಎಂದು ಮಾಹಿತಿ ಹಂಚಿಕೊಂಡರು,( ಏಜೆನ್ಸೀಸ್).