ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಹುನಿರೀಕ್ಷಿತಾ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವು ಮಂಗಳವಾರ(ನ. 10) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪುಸ್ತಕದಲ್ಲಿ ನೆಹರೂ-ಗಾಂಧಿ ಕುಟುಂಬ ಮತ್ತು ರಾಜಕೀಯದ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರಮುಖವಾಗಿ ರಾಜಕೀಯಕ್ಕೆ ಪ್ರವೇಶಿಸದಂತೆ ತಮ್ಮ ಪತಿ ರಾಜೀವ್ ಗಾಂಧಿಯವರನ್ನು ಸೋನಿಯಾ ಗಾಂಧಿ ಅವರು ವಿರೋಧಿಸಿದ್ದರು ಎನ್ನಲಾಗಿದೆ. ಆದರೆ, ಅವರ ಪುತ್ರ ರಾಹುಲ್ ಗಾಂಧಿ ರಾಜಕೀಯಕ್ಕೆ ಧುಮುಕುವ ಸಮಯ ಬಂದಾಗ ಅದನ್ನು ಯಾಕೆ ವಿರೋಧಿಸಲಿಲ್ಲ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ರಾಹುಲ್ಗೆ ರಾಜಕೀಯದಲ್ಲಿ ದೀರ್ಘಕಾಲದಿಂದಲೂ ಆಸಕ್ತಿ ಇತ್ತು ಎಂದಿರುವ ಅವರು, ರಾಜೀವ್ ಗಾಂಧಿಯವರು ರಾಹುಲ್ ಶಾಲಾ ವಿದ್ಯಾರ್ಥಿಯಾಗಿದ್ದಾಗ ರಜೆ ದಿನಗಳಲ್ಲಿ ಹಲವು ಬಾರಿ ತಮ್ಮ ಜೊತೆ ಅಮೇಥಿಗೆ ಕರೆದೊಯ್ಯುತ್ತಿದ್ದರು. ಗ್ರಾಮೀಣ ಜೀವನದ ಕಠಿಣ ವಾಸ್ತವದ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಅಮೇಥಿಯಲ್ಲಿ ನಡೆದ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಅಲ್ಲಿಯೇ ಇದ್ದರು ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಜನರ ಮನಗೆದ್ದಿದ್ದರು ಎಂದು ಹೇಳಿದ್ದಾರೆ. ರಾಹುಲ್ ಭಾರತಕ್ಕೆ ಮರಳಿದಾಗಲೆಲ್ಲಾ, ನನ್ನೊಂದಿಗೆ ಅಥವಾ ತಮ್ಮ ಸಹೋದರಿ ಪ್ರಿಯಾಂಕಾ ಜೊತೆ ಅಮೇಥಿಗೆ ಹೋಗುತ್ತಿದ್ದರು. ಹೀಗಾಗಿ, ಆ ಕ್ಷೇತ್ರದಲ್ಲಿ ಅವರಿಬ್ಬರೂ ಎಲ್ಲರಿಗೂ ಪರಿಚಿತ ಮುಖಗಳಾಗಿದ್ದರು. ಅಂತಹ ಭೇಟಿಗಳ ಸಂದರ್ಭದಲ್ಲೇ, ಅಂತಿಮವಾಗಿ ಭಾರತಕ್ಕೆ ಮರಳಿದ ರಾಹುಲ್, ಜನರ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡುವತ್ತ ಆಕರ್ಷಿತರಾದರು ಎಂದು ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಕೇಂಬ್ರಿಡ್ಜ್ನಲ್ಲಿ ರಾಹುಲ್ ಅವರು 'ಡೆವಲಪ್ಮೆಂಟ್ ಸ್ಟಡೀಸ್' (ಅಭಿವೃದ್ಧಿ ಅಧ್ಯಯನ) ವಿಷಯದಲ್ಲಿ ಎಂ.ಫಿಲ್ (MPhil) ಪದವಿ ಪಡೆದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದಾಗಲೂ ಅವರು ಭಾರತದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪಕ್ಷವು ಸಕ್ರಿಯವಾಗಿ ರಾಹುಲ್ನನ್ನು ತೊಡಗಿಸಿಕೊಳ್ಳುವಂತೆ ಬಲವಾಗಿ ಒತ್ತಾಯಿಸುತ್ತಿತ್ತು ಎಂದು ಸೋನಿಯಾ ತಿಳಿಸಿದ್ದಾರೆ.
ಪ್ರಿಯಾಂಕಾ ಮತ್ತು ನನ್ನೊಂದಿಗೆ ನಡೆಸಿದ ಚರ್ಚೆಗಳು ಹಾಗೂ ಅವರ ಸ್ವಂತ ಆಳವಾದ ಚಿಂತನೆಯ ಬಳಿಕ ರಾಹುಲ್ ಚುನಾವಣಾ ರಾಜಕೀಯಕ್ಕೆ ಬರಲು ನಿರ್ಧರಿಸಿದ್ರು, 2004 ಮಾರ್ಚ್ನಲ್ಲಿ ಅಮೇಠಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದರು. ಬಳಿಕ ಸೋನಿಯಾ ಗಾಂಧಿಯವರು ಅಮೇಥಿಯಿಂದ ರಾಯ್ ಬರೇಲಿಗೆ ಸ್ಥಳಾಂತರಗೊಂಡರು.
ಎರಡು ದಶಕಗಳ ಹಿಂದೆ, ರಾಜೀವ್ ಅವರು ರಾಜಕೀಯಕ್ಕೆ ಪ್ರವೇಶಿಸದಂತೆ, ತಮ್ಮನ್ನು ಮತ್ತು ನಮ್ಮೆಲ್ಲರನ್ನೂ ಆ ಅಪಾಯಕಾರಿ ಜಗತ್ತಿಗೆ ತಳ್ಳದಂತೆ ನಾನು ಬೇಡಿಕೊಂಡಿದ್ದೆ. ಈಗ, ನನ್ನ ಮಗನ ಸರದಿ ಬಂದಿತ್ತು, ಆದರೆ ಈ ಬಾರಿ ನಾನು ಅದನ್ನು ವಿರೋಧಿಸಲಿಲ್ಲ. ರಾಹುಲ್ ತನ್ನ ತಂದೆಯ ಅಂತ್ಯವನ್ನು ಮೊದಲೇ ಊಹಿಸಿದ್ದರು. ಆ ವಿಷಯವಾಗಿ ಅವರು ತಮ್ಮ ತಂದೆಯೊಂದಿಗೆ ವಾದವನ್ನೂ ಮಾಡಿದ್ದರು. ಆದರೂ, ತಮ್ಮ ತಂದೆಯ ಮೌಲ್ಯಗಳೊಂದಿಗೆ ಆಳವಾದ ಬಾಂಧವ್ಯವನ್ನು ಮತ್ತು ಎದುರಾಗಿದ್ದ ಬೆದರಿಕೆಗಳ ನಡುವೆಯೂ ಅವರು ತೋರಿದ ಧೈರ್ಯದ ಬಗ್ಗೆ ಅಪಾರ ಗೌರವವನ್ನು ರಾಹುಲ್ ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.
ರಾಹುಲ್ ತಮ್ಮ ಮೊದಲ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದರು ಎಂದು ಬರೆಯುವ ಸೋನಿಯಾ ಗಾಂಧಿ, ಅವರು ಹೊಸ ಜವಾಬ್ದಾರಿಯನ್ನು ಉತ್ಸಾಹದಿಂದ ಸ್ವೀಕರಿಸಿದರು. ಮತ್ತು ರಾಜೀವ್ ಅವರಂತೆಯೇ ಅಮೇಠಿಯ ಗ್ರಾಮೀಣ ಪ್ರದೇಶಕ್ಕೆ ಉದ್ಯಮಗಳು ಹಾಗೂ ಕೈಗಾರಿಕೆಗಳನ್ನು ತಂದರು ಎಂದು ಹೇಳಿದ್ದಾರೆ (ಏಜೆನ್ಸೀಸ್).