Shashi Tharoor | ಕಾಂಗ್ರೆಸ್​​ ಸಂಸದ ತರೂರ್  
ದೇಶ

ಶಶಿ ತರೂರ್ ಬೆಂಗಾವಲು ಪಡೆ ಮೇಲೆ ದಾಳಿ.. ಸಂಸದರ ಕಾರು ತಡೆದು ಗನ್‌ಮ್ಯಾನ್ ಮೇಲೆ ಹಲ್ಲೆ!; ಐವರ ವಿರುದ್ಧ ಪ್ರಕರಣ ದಾಖಲು | Shashi Tharoor

ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ ರಾತ್ರಿ ಸಂಸದ ಶಶಿ ತರೂರ್ ಅವರ ಬೆಂಗಾವಲು ಪಡೆಯ ಮೇಲೆ ಜನರ ಗುಂಪೊಂದು ದಾಳಿ ನಡೆಸಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪಕ್ಷದ ಅಭ್ಯರ್ಥಿ ಎಪಿ ಅನಿಲ್ ಕುಮಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸಲು ವಂದೂರಿಗೆ ತರೂರ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಸಂಜೆ 7 ಗಂಟೆ ಸುಮಾರಿಗೆ ವಂದೂರಿನ ಚೆಲ್ಲಿತೋಡ್ ಬಳಿ ಸಂಸದರ ವಾಹನವನ್ನು ತಡೆದ ಗುಂಪು, ಗನ್‌ಮ್ಯಾನ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ದಾಳಿಕೋರರು ಮೊದಲು ತರೂರ್ ಬೆಂಗಾವಲು ಪಡೆಯನ್ನು ಬೆನ್ನಟ್ಟಿ, ಅವರ ಕಾರನ್ನು ತಡೆದು ದಾಂಧಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಗುಂಪು ಸಂಸದರನ್ನು ನಿಂದಿಸಿ ಹಲ್ಲೆ ಮಾಡಲು ಮುಂದಾದಾಗ, ಅವರ ಭದ್ರತೆಯಲ್ಲಿದ್ದ ಗನ್​ಮ್ಯಾನ್​ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ಕಿಡಿಗೇಡಿಗಳು ಗನ್​ಮ್ಯಾನ್​​ ಮೇಲೆಯೇ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ.
ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಶಶಿ ತರೂರ್ ಕಾರನ್ನು ತಡೆದ ಪ್ರಮುಖ ಆರೋಪಿ ಕಾಳಿಕಾವು ನಿವಾಸಿ ಉಮರ್ ಎಂಬಾತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಮತ್ತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿಕೋರರು ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ದಾಳಿಯ ಹಿಂದೆ ರಾಜಕೀಯ ದ್ವೇಷ ಅಥವಾ ಪೂರ್ವಯೋಜಿತ ಪಿತೂರಿ ಇದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದ್ದು, ದಾಳಿಕೋರರು ತೊಂದರೆ ಉಂಟುಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಎಲ್ಲಾ ಆರೋಪಿಗಳ ವಿವರವಾದ ವಿಚಾರಣೆಯ ನಂತರವೇ ಈ ದಾಳಿಯ ಹಿಂದಿನ ನೈಜ ಉದ್ದೇಶ ಸ್ಪಷ್ಟವಾಗಲಿದೆ.

ಗೆಲುವಿನ ವಿಶ್ವಾಸ..

ಮಲಪ್ಪುರಂನ ವಂದೂರಿನಲ್ಲಿ ಎಪಿ ಅನಿಲ್ ಕುಮಾರ್ ಪರ ಚುನಾವಣಾ ಪ್ರಚಾರ ನಡೆಸಿದ ಸಂಸದ ಶಶಿ ತರೂರ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ತರೂರ್, ಮುಖ್ಯಮಂತ್ರಿಯನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ. ಚುನಾಯಿತ ಶಾಸಕರ ಅಭಿಪ್ರಾಯಗಳನ್ನು ಪಡೆದ ನಂತರ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ, ಯುಡಿಎಫ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಶಶಿ ತರೂರ್ ಕಟುವಾಗಿ ಟೀಕಿಸಿದ ತರೂರ್​, ಈ ಮಸೂದೆಯನ್ನು ಭಯಾನಕ ಎಂದು ವಿಶ್ಲೇಷಿಸಿದ್ದಾರೆ. ಚರ್ಚ್ ಗುಂಪುಗಳು ನಡೆಸುತ್ತಿರುವ ಶಾಲೆಗಳು, ಆಸ್ಪತ್ರೆಗಳು ಮತ್ತು ಅನಾಥಾಶ್ರಮಗಳನ್ನು ವಶಪಡಿಸಿಕೊಳ್ಳುವ ಯಾವುದೇ ಹಕ್ಕು ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರು. ಈ ಮಸೂದೆಯನ್ನು ಜಾರಿಗೆ ತರುವ ಮೊದಲು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಬೇಕು ಎಂದು ಒತ್ತಾಯಿಸಿದರು.
ಕೇರಳದಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).