ಸಂಸದ ಶಶಿ ತರೂರ್  
ದೇಶ

Shashi Tharoor | ಕಾಂಗ್ರೆಸ್​ ಸಭೆಗೆ ಸತತ 3ನೇ ಬಾರಿ ಸಂಸದ ಶಶಿ ತರೂರ್​ ಗೈರು

ದೆಹಲಿ: ಸಂಸದ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕರ ಸಂಬಂಧ ಹದಗೆಡುತ್ತಿವೆ ಎನ್ನುವ ಚರ್ಚೆಗಳ ಮಧ್ಯೆ, ರಾಹುಲ್ ಗಾಂಧಿ ಕರೆದಿದ್ದ ಕಾಂಗ್ರೆಸ್ ಲೋಕಸಭಾ ಸದಸ್ಯರ ಸಭೆಗೆ ತರೂರ್​ ಮತ್ತೊಮ್ಮೆ ಗೈರಾಗಿದ್ದಾರೆ.
ಇದು ಕಳೆದ ಮೂರು ವಾರಗಳಲ್ಲಿ ತರೂರ್ ಭಾಗವಹಿಸದ ಮೂರನೇ ಕಾಂಗ್ರೆಸ್ ಸಭೆಯಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಗೊಳ್ಳುವ ಮೊದಲು, ಇಲ್ಲಿಯವರೆಗಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಮತ್ತು ಮುಂದಿನ ರೂಪರೇಷೆಗಳನ್ನು ಸಿದ್ಧಪಡಿಸಲು ಈ ಸಭೆಯನ್ನು ಕರೆಯಲಾಗಿದೆ ಎನ್ನುವುದು ಮೂಲಗಳ ಮಾಹಿತಿ. ಶುಕ್ರವಾರ ಬೆಳಿಗ್ಗೆ ಕಾಂಗ್ರೆಸ್‌ನ 99 ಸಂಸದರು ಚರ್ಚೆ ನಡೆಸಿದರು.

ತರೂರ್ ಗೈರಿಗೆ ಕಾರಣವೇನು..?

ಕೋಲ್ಕತ್ತಾದಲ್ಲಿ ತರೂರ್​ ಅವರ ದೀರ್ಘಕಾಲದ ಸಹಾಯಕ ಜಾನ್ ಕೋಶಿ ಮದುವೆ ಮತ್ತು ಅವರ ಸಹೋದರಿ ಸ್ಮಿತಾ ತರೂರ್​​ರ ಜನ್ಮದಿನದ ಸಲುವಾಗಿ ಸಭೆಗೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಚಂಡೀಗಢ ಸಂಸದ ಮನೀಶ್ ತಿವಾರಿ ಕೂಡ ಈ ಸಭೆಗೆ ಗೈರುಹಾಜರಾಗಿದ್ದರು ಎನ್ನಲಾಗಿದೆ.

ಕಾಂಗ್ರೆಸ್ ಅಧಿವೇಶನಗಳಿಗೆ ತರೂರ್ ಗೈರು

ತರೂರ್ ಈ ಹಿಂದೆ ನವೆಂಬರ್‌ನಲ್ಲಿ ನಡೆದ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯತಂತ್ರದ ಸಭೆಯಾಗಿತ್ತು. ಆಗಸ್ಟ್ 2020 ರಲ್ಲಿ ಸೋನಿಯಾ ಗಾಂಧಿ ನಾಯಕತ್ವವನ್ನು ಪ್ರಶ್ನಿಸಿದ್ದ ಅನೇಕ ಪ್ರಮುಖ ನಾಯಕರಲ್ಲಿ ತರೂರ್ ಕೂಡ ಒಬ್ಬರು​. ಇದಾದ ಬಳಿಕ ಸುದ್ದಿಗಾರರಿಗೆ ಮಾತನಾಡಿದ್ದ ಸಂಸದರು, ಸಭೆಯನ್ನು ತಪ್ಪಿಸಿಕೊಂಡಿಲ್ಲ, ಆ ಸಮಯದಲ್ಲಿ ಕೇರಳದಿಂದ ದೆಹಲಿಗೆ ತೆರಳುತ್ತಿರುವುದಾಗಿ ಸ್ಪಷ್ಟನೆ ನೀಡಿದರು.
ಎರಡನೇ ಸಭೆ ನವೆಂಬರ್ 18 ರಂದು ನಡೆದಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವಿಷಯವಾಗಿ ನಡೆದ ಸಭೆಯಾಗಿತ್ತು. ಆ ಸಭೆಯ ನೇತೃತ್ವವನ್ನು ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದರು. ತರೂರ್ ತಮ್ಮ ಅನುಪಸ್ಥಿತಿಗೆ ಅನಾರೋಗ್ಯದ ಕಾರಣ ನೀಡಿದ್ದರು. ಆದರೆ ಒಂದು ದಿನದ ಹಿಂದೆ ಪ್ರಧಾನಿ ಮಾತನಾಡಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಭಾಷಣವನ್ನು ಶ್ಲಾಘಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಮತ್ತೊಂದು ಸುತ್ತಿನ ವಿವಾದಕ್ಕೆ ಆಹಾರವಾದರು.

ತರೂರ್ ಮತ್ತು ಕಾಂಗ್ರೆಸ್ ನಡುವಿನ ಉದ್ವಿಗ್ನತೆ

ಪ್ರಧಾನಿ ಮೋದಿ ಭಾಷಣವನ್ನು ಶ್ಲಾಘಿಸಿದ್ದಕ್ಕಾಗಿ ಸ್ವಕ್ಷೀಯ ನಾಯಕರುಗಳಿಂದ ತರೂರ್​ ಟೀಕೆ ಎದುರಿಸಬೇಕಾಯಿತು. ವಕ್ತಾರೆ ಸುಪ್ರಿಯಾ ಶ್ರೀನಾಟೆ ಮತ್ತು ಸಂದೀಪ್ ದೀಕ್ಷಿತ್ ತರೂರ್ ನಡೆಯನ್ನು ಟೀಕಿಸಿದ್ದಷ್ಟೆ ಅಲ್ಲದೇ, ತರೂರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದು ಉತ್ತಮ ಎಂದು ದೀಕ್ಷಿತ್ ಸಲಹೆ ನೀಡಿದರು(ಏಜೆನ್ಸೀಸ್​).