Shashi Tharoor | ಸಂಸದ ಶಶಿ ತರೂರ್ 
ದೇಶ

ಪ್ರಧಾನಿ ಮೋದಿ ಭೇಟಿಗಾಗಿ ಕಾಂಗ್ರೆಸ್​​ ಸಭೆಗೆ ತರೂರ್ ಚಕ್ಕರ್​​..? ಪಕ್ಷದ ಮೂಲಗಳು ಹೇಳಿದ್ದಿಷ್ಟು! | Shashi Tharoor

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಸಭೆಯಿಂದ ಅಂತರ ಕಾಯ್ದುಕೊಂಡಿದ್ದ ಸಂಸದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ರಾಜ್ಯದಲ್ಲೇ ಉಳಿದಿದ್ದರು ಎಂದು ವರದಿಯಾಗಿದೆ.
ರಾಜ್ಯದಲ್ಲಿ ಅನೇಕ ಯೋಜನೆಗಳಿಗೆ ಚಾಲನೆ ನೀಡಲು ಮತ್ತು ಮುಂಬರುವ ಚುನಾವಣೆ ಪ್ರಚಾರ ಆರಂಭಿಸಲು ಕೇರಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶುಕ್ರವಾರ ತಿರುವನಂತಪುರಂನಲ್ಲಿ ರೋಡ್ ಶೋ ಮತ್ತು ಸಭೆ ನಡೆಸಿದರು. ಈ ಭೇಟಿಯ ವೇಳೆ ತಮ್ಮ ಕ್ಷೇತ್ರದಲ್ಲಿರಲು ತರೂರ್ ಮೊದಲೇ ಹೈಕಮಾಂಡ್ ಅನುಮತಿ ಕೋರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತರೂರ್​ಗೆ ಅವಮಾನ

ಇತ್ತೀಚೆಗೆ ಎರ್ನಾಕುಲಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು, ಈ ಸಭೆಯಲ್ಲಿ ಸಂಸದ ತರೂರ್​ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇದರಿಂದ ಬೇಸರಗೊಂಡಿರುವ ಅವರು ಪಕ್ಷದ ನಾಯಕರುಗಳ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯ ನಾಯಕರು ಮತ್ತು ಹೈಕಮಾಂಡ್​​ನ ವರಿಷ್ಠರು ಸಂಪರ್ಕಿಸಲು ಪ್ರಯತ್ನಿಸಿದರೂ, ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯ ಬಗ್ಗೆ ತರೂರ್ ಆಪ್ತ ನಾಯಕರು ಪ್ರತಿಕ್ರಿಯೆ ನೀಡಿದ್ದು, ಇತ್ತೀಚಿನ ಬೆಳವಣಿಗೆಗಳು ಅನಗತ್ಯ ಎಂದಿದ್ದಾರೆ. ಸಂಸದರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇರಲಿಲ್ಲ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾಯಕತ್ವಕ್ಕೆ ತಿಳಿಸಿದ್ದರು. ಈ ಘಟನೆಯು ಪಕ್ಷದ ಆಂತರಿಕ ಶಿಸ್ತು ಮತ್ತು ಹಿರಿಯ ನಾಯಕರ ಮೇಲಿನ ಗೌರವದ ಬಗ್ಗೆ ಕಾರ್ಯಕರ್ತರಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದ್ದು, ಎರ್ನಾಕುಲಂನಲ್ಲಿನ ಭಾಷಣದ ಸಮಯದಲ್ಲಿ ರಾಹುಲ್ ಗಾಂಧಿ ತರೂರ್ ಹೆಸರನ್ನು ಉಲ್ಲೇಖಿಸಲಿಲ್ಲ ಎಂದು ತಿಳಿದುಬಂದಿದೆ. ಪಕ್ಷ ಮತ್ತು ರಾಜ್ಯದಲ್ಲಿ ತರೂರ್ ಪ್ರಭಾವವನ್ನು ಗಮನಿಸಿದರೆ ಇದು ದೊಡ್ಡಮಟ್ಟದ ಲೋಪವಾಗಿದೆ
ಈ ಬೆಳವಣಿಗೆ ತರೂರ್ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಷಯವಾಗಿ ಕಾಂಗ್ರೆಸ್ ಪಕ್ಷವು ಯಾವುದೇ ರೀತಿಯ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ತರೂರ್ ಅವರು ಪ್ರಧಾನ ಮಂತ್ರಿಯವರ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಾಗಲು ಸಾಧ್ಯವಾಗುವಂತೆ ಸಭೆಗೆ ಗೈರಾಗಲು ಪಕ್ಷದ ಹೈಕಮಾಂಡ್‌ನಿಂದ ಸೂಕ್ತ ಅನುಮತಿಯನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).