ಪಶ್ಚಿಮ ಬಂಗಾಳ: ಪತ್ನಿಯ ಒಪ್ಪಿಗೆ ಇಲ್ಲದೆ ಆಕೆಯ ಮೇಲೆ ಅತ್ಯಾಚಾರ (Marital Rape) ಎಸಗುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವ ವಿಶ್ವದ ಕೆಲವೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಮ್ಮ ದೇಶವು ಒಂದು ಎಂದು ತಿಳಿದು ಆಘಾತವಾಗಿದೆ ಎಂದು ಸಂಸದ ಶಶಿ ತರೂರ್ ತಿಳಿಸಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತರೂರ್, ಪ್ರಸ್ತುತ ಕಾನೂನಿನ ಸಡಿಲತೆಯು ಮಹಿಳೆಯರಿಗೆ ನ್ಯಾಯ ಒದಗಿಸಲು ನಿರಾಕರಿಸುತ್ತದೆ. ಮತ್ತು ವಿವಾಹದ ನೆಪದಲ್ಲಿ ನಡೆಯುವ ಹಿಂಸಾಚಾರಕ್ಕೆ ರಕ್ಷಣೆಯನ್ನು ನೀಡುತ್ತಿದೆ ಎಂದು ಎಚ್ಚರಿಸಿದರು.
ಗಂಡಂದಿರು ತಮ್ಮ ಹೆಂಡತಿಯ ಮೇಲೆ ದಾಳಿ ಮಾಡಿದಾಗಲೂ ಅವರನ್ನು ರಕ್ಷಿಸುವ ಕಾನೂನು ವಿನಾಯಿತಿ ಭಾರತದ ಅತ್ಯಾಚಾರ ವಿರೋಧಿ ಕಾನೂನುಗಳ ಅಡಿಪಾಯವನ್ನು ಹಾಳು ಮಾಡುತ್ತಿದೆ. ಅವರಿಗೆ ವಿನಾಯಿತಿಯನ್ನು ಏಕೆ ನೀಡಬೇಕು? ವೈವಾಹಿಕ ಸಂಬಂಧಗಳು ಹಿಂಸೆಯನ್ನು ಸಮರ್ಥಿಸುವುದಿಲ್ಲ ಎಂದು ಕಿಡಿಕಾರಿದರು.
ಮದುವೆ ಎಂಬುದು ಪವಿತ್ರ ಕ್ರಿಯೆ ಮತ್ತು ಅದರೊಳಗೆ ಏನಾಗುತ್ತದೆಯೋ ಅದನ್ನು ಬೇರೆ ಯಾವುದೇ ರೀತಿಯಲ್ಲೂ ವರ್ಗೀಕರಿಸಲಾಗುವುದಿಲ್ಲ ಎಂಬ ಹಳೆಯ ಕಲ್ಪನೆಯನ್ನು ಪ್ರಸ್ತುತ ಕಾನೂನು ಅವಲಂಬಿಸಿದೆ ಎಂದರು.
ಈ ವಿನಾಯಿತಿಯನ್ನು "ಕಾನೂನು ವಿಚ್ಛೇದನ" ಎಂದು ಬಣ್ಣಿಸಿದ ತರೂರ್, ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ನಂತರ ದಂಪತಿ ನಡುವಿನ ಪ್ರಕರಣಗಳಲ್ಲಿ ಶಿಕ್ಷೆಯಿಂದ ವಿನಾಯಿತಿ ದೊರೆಯುತ್ತದೆ. ಆದರೆ, ಬೇರ್ಪಟ್ಟ ದಂಪತಿಗಳಲ್ಲಿಯೂ ಸಹ ಸಾಕಷ್ಟು ವೈವಾಹಿಕ ಅತ್ಯಾಚಾರಗಳು ನಡೆಯುತ್ತಿವೆ. ಗಂಡ ಬಯಸಿದಾಗಲೆಲ್ಲಾ ಹಿಂತಿರುಗಿ ತನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಾನೆ. ಆದರೆ, ಕಾನೂನು ಬೇರ್ಪಟ್ಟವರನ್ನು ದಂಪತಿ ಎಂದು ಪರಿಗಣಿಸುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಹೇಳಿದರು.
ಇದು ಹಿಂಸೆ, ದಾಂಪತ್ಯದಲ್ಲಿನ ಪ್ರೀತಿ ಅಲ್ಲ: ಶಶಿ ತರೂರ್
ವೈವಾಹಿಕ ಅತ್ಯಾಚಾರವನ್ನು ವಿವಾಹದ ಭಾಗವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇದು ವೈವಾಹಿಕ ಪ್ರೇಮವಲ್ಲ, ಬದಲಿಗೆ ಹಿಂಸೆ ಎಂದು ತರೂರ್ ಒತ್ತಾಯಿಸಿದರು.
ಭಾರತಕ್ಕೆ ತುರ್ತಾಗಿ ಕೌಟುಂಬಿಕ ಅತ್ಯಾಚಾರದ ವಿರುದ್ಧ ಸರಿಯಾದ ಕಾನೂನು ಅಗತ್ಯವಿದೆ. ಅದರ ಪ್ರಾಮುಖ್ಯತೆಯ ಹೊರತಾಗಿಯೂ ಯಾವುದೇ ಮಹಿಳಾ ಮಂತ್ರಿಗಳು ಈ ವಿಷಯದ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಿದರು (ಏಜೆನ್ಸೀಸ್).