Shashi Tharoor | ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸಂಸದ ತರೂರ್ ಫಿದಾ
ನವದೆಹಲಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ (Unified Payments Interface) ಇಂದು ಕೇವಲ ಒಂದು ತಾಂತ್ರಿಕ ಸೌಲಭ್ಯವಾಗಿ ಉಳಿದಿಲ್ಲ, ಬದಲಿಗೆ ಅದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ವಿಸ್ತರಿಸುವ ಬಲಿಷ್ಠ ರಾಜತಾಂತ್ರಿಕ ಅಸ್ತ್ರವಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬಣ್ಣಿಸಿದ್ದಾರೆ.
ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ ಆಯೋಜಿಸಿದ್ದ ಜಾಗತಿಕ ಸಂಗಮ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವನ್ನು ತಂತ್ರಜ್ಞಾನ-ರಾಜತಾಂತ್ರಿಕ ನಾಯಕ (Techno-Diplomacy Leader) ಎಂದು ಕರೆದಿದ್ದಾರೆ.
ನಾವು ಭಾರತದಲ್ಲಿ ಅಭಿವೃದ್ಧಿಪಡಿಸಿದ ತಾಂತ್ರಿಕ ಕೌಶಲ್ಯವನ್ನು ಇತರ ದೇಶಗಳಿಗೆ ನಮ್ಮ ಪ್ರಭಾವವನ್ನು ವಿಸ್ತರಿಸುತ್ತಿದ್ದೇವೆ, ಇದು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಇರುವ ಗ್ರಹಿಕೆಯನ್ನು ಬದಲಿಸಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸ್ಥಳೀಯ ತಾಂತ್ರಿಕ ಆವಿಷ್ಕಾರವಾದ ಯುಪಿಐ ಈಗ ವಿಶ್ವದ 19 ಪ್ರಮುಖ ದೇಶಗಳಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಿದ್ದು, ಫ್ರಾನ್ಸ್, ಯುಎಇ, ಸಿಂಗಾಪುರ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ ಮತ್ತು ಕತಾರ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತೀಯರು ತಮ್ಮ ಸ್ಮಾರ್ಟ್‌ಫೋನ್ ಮೂಲಕ ಕೇವಲ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸ್ಥಳೀಯವಾಗಿ ಪಾವತಿ ಮಾಡಬಹುದಾಗಿದೆ ಎಂದು ಸಂಸದ ತರೂರ್ ತಿಳಿಸಿದ್ದಾರೆ.
ಜಾಗತಿಕ ಮಾನದಂಡಗಳೆಂದು ಪರಿಗಣಿಸಲ್ಪಟ್ಟಿರುವ ಅಮೆರಿಕದ ಪಾವತಿ ವ್ಯವಸ್ಥೆಗಳಿಗಿಂತಲೂ ಭಾರತದ ಯುಪಿಐ ಹೆಚ್ಚು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದಿರುವ ತರೂರ್, ರಸ್ತೆಯ ಬದಿಯ ಸಾಮಾನ್ಯ ಚಾಯ್‌ವಾಲಾ ಬಳಿ ಇರುವ QR ಕೋಡ್ನ್ನು ವಿದೇಶಿಯರು ಅಚ್ಚರಿಯಿಂದ ನೋಡುತ್ತಿದ್ದಾರೆ. ಅವರು ನಮ್ಮಂತೆಯೇ ಕಾಣುತ್ತಾರೆ, ವರ್ತಿಸುತ್ತಾರೆ, ಆದರೆ ಅವರ ತಾಂತ್ರಿಕ ಪ್ರಗತಿ ಅಗಾಧವಾಗಿದೆ ಎಂದು ಜಗತ್ತು ಮಾತನಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಭಾರತೀಯ ಪ್ರಯಾಣಿಕರಿಗೆ ವರವಾದ ಯುಪಿಐ
ವಿದೇಶ ಪ್ರವಾಸ ಮಾಡುವ ಭಾರತೀಯರಿಗೆ ಯುಪಿಐ ದೊಡ್ಡ ವರದಾನವಾಗಿದ್ದು, ವಿದೇಶಿ ಕರೆನ್ಸಿ ವಿನಿಮಯದ ಜಂಜಾಟವಿಲ್ಲದೆ ಮತ್ತು ಹೆಚ್ಚುವರಿ ಶುಲ್ಕಗಳಿಲ್ಲದೆ ತಕ್ಷಣವೇ ಹಣ ಪಾವತಿಸಲು ಇದು ಸಹಕಾರಿಯಾಗಿದೆ. ಇದು ಭಾರತದ ಆರ್ಥಿಕತೆಯನ್ನು ನಗದು ರಹಿತ ವ್ಯವಸ್ಥೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಏನಿದು ಯುಪಿಐ..?
ಏಕೀಕೃತ ಪಾವತಿ ಇಂಟರ್ಫೇಸ್ (Unified Payments Interface) ಒಂದು ಆಧುನಿಕ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಬ್ಯಾಂಕ್ ಖಾತೆ ಮತ್ತು ಸ್ಮಾರ್ಟ್‌ಫೋನ್ ಹೊಂದಿರುವ ಯಾರಿಗಾದರೂ ನಗದು ರಹಿತ ವಹಿವಾಟುಗಳನ್ನು ಅತ್ಯಂತ ಸರಳವಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲಿ ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವಾಗಿದೆ.
UPI ಅನ್ನು IMPS (ತಕ್ಷಣದ ಪಾವತಿ ಸೇವೆ) ಚೌಕಟ್ಟಿನ ಮೇಲೆ ನಿರ್ಮಿಸಲಾಗಿದ್ದು, ಇದು ಹೆಚ್ಚು ಬಳಕೆದಾರ ತುಂಬಾ ಅನುಕೂಲಕರವಾಗಿದೆ. ಸಾಂಪ್ರದಾಯಿಕ ಬ್ಯಾಂಕ್ ವರ್ಗಾವಣೆಗಳಿಗಿಂತ ಭಿನ್ನವಾಗಿ, ಯುಪಿಐ ಬಳಕೆದಾರರಿಗೆ ಫಲಾನುಭವಿಯ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ಎಸ್ಸಿ ಕೋಡ್ ನಮೂದಿಸುವ ಅಗತ್ಯವಿಲ್ಲ. ಬದಲಾಗಿ, ವರ್ಚುವಲ್ ಪಾವತಿ ವಿಳಾಸ ಬಳಸಿಕೊಂಡು ವಹಿವಾಟುಗಳನ್ನು ನಡೆಸಬಹುದು.
ಇದು 24x7 ಕಾರ್ಯನಿರ್ವಹಿಸುತ್ತದೆ ಮತ್ತು ಒಂದೇ ಅಪ್ಲಿಕೇಶನ್‌ನಲ್ಲಿ ಬಹು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಸೌಲಭ್ಯವಿದೆ. ಗ್ರಾಮೀಣ ಪ್ರದೇಶದಿಂದ ಹಿಡಿದು ಮಹಾನಗರಗಳವರೆಗೆ ಅತ್ಯಂತ ಸರಳ ಮತ್ತು ಸುರಕ್ಷಿತ ವ್ಯವಹಾರಕ್ಕೆ ಇದು ನೆರವಾಗಿದೆ(ಏಜೆನ್ಸೀಸ್).