ಷರಿಯಾ ನ್ಯಾಯಾಲಯಗಳ ವಿಚ್ಛೇದನ ಅಧಿಕಾರದ ಕುರಿತು ಹೈಕೋರ್ಟ್ ನೀಡಿದ ಆದೇಶವನ್ನು ಸೂಚಿಸುವ ಸಾಂಕೇತಿಕ ಚಿತ್ರ. 
ದೇಶ

ಷರಿಯಾ ನ್ಯಾಯಾಲಯಕ್ಕೆ ವಿಚ್ಛೇದನ ನೀಡುವ ಅಧಿಕಾರವಿಲ್ಲ: ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ಆದೇಶ! Sharia Court

ರಾಯ್​ಪುರ್: ಷರಿಯಾ ನ್ಯಾಯಾಲಯ (Sharia Court) ದಂತಹ ಖಾಸಗಿ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ಸಲಹೆಗಳನ್ನು ನೀಡಬಹುದೇ ಹೊರತು, ವಿಚ್ಛೇದನ ನೀಡುವ ಕಾನೂನುಬದ್ಧ ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿಲ್ಲವೆಂದು ಇತ್ತೀಚೆಗೆ ಛತ್ತೀಸ್‌ಗಢ ಹೈಕೋರ್ಟ್ ಆದೇಶಿಸಿದೆ.
ಕೆಲ ದಿನಗಳ ಹಿಂದೆ, ರಾಯ್​ಪುರ್​ದಲ್ಲಿರುವ ಷರಿಯಾ ನ್ಯಾಯಾಲಯವೊಂದು, ವೈವಾಹಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚ್ಛೇದನಕ್ಕೆ ಅನುಮತಿ ನೀಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್​ ಮೆಟ್ಟಲೇರಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಪೀಠ, ಧಾರ್ಮಿಕ ನ್ಯಾಯಾಲಗಳು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಾಗೂ ಅನಿಸಿಕೆಗಳನ್ನು ತಿಳಿಸಬಹುದೇ ಹೊರತು ಕಾನೂನುಬದ್ಧವಾಗಿ ಸ್ಥಾಪಿತವಾಗಿರುವ ನ್ಯಾಯಾಲಯದಂತೆ ತೀರ್ಪನ್ನು ನೀಡಲು ಅವಕಾಶವಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನಲೆ!

ಹೈಕೋರ್ಟ್​ ಮೆಟ್ಟಿಲೇರಿರುವ 38 ವರ್ಷದ ನಿರೋಶ್​ ಅಬ್ಬಾಸಿ ಎಂಬ ಮಹಿಳೆಯ ಮೊದಲ ಪತಿ 2015 ರಲ್ಲಿ ಮರಣ ಹೊಂದಿದ್ದು, ಈಕೆ 2020 ರಲ್ಲಿ ಮೊಹಮ್ಮದ್​ ಆಬಿದ್​ ಖಾನ್​ ಎಂಬಾತನನ್ನು ಮದುವೆಯಾಗಿದ್ದಳು. ಆದರೆ, ಮೊದಲ ಪತಿಯಿಂದ ಪಡೆದ ಮಕ್ಕಳಿಗೆ ಸಂಬಂಧಿಸಿದಂತೆ ಎರಡನೇ ಗಂಡನ ಮನೆಯಲ್ಲಿ ನಿರಂತರ ಜಗಳ, ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಯುತ್ತಿದ್ದವೆಂದು ನಿರೋಶ್​ ತಿಳಿಸಿದ್ದಾಳೆ.
2021 ರಲ್ಲಿ ಈಕೆಯ ಪತಿ ಫೋನ್​ ಕರೆ ಮೂಲಕ ತ್ರಿವಳಿ ತಲಾಖ್​ ಅನ್ನು ನೀಡಿದ್ದಾನೆಂದು ನಿರೋಶ್​ ಆರೋಪಿಸಿದ್ದು, ಮನೆಯಲ್ಲಿ ಅತ್ತೆ-ಮಾವ ಮತ್ತು ಪತಿ ಕಿರುಕುಳ ನೀಡುತ್ತಾರೆಂದು 2021 ಅಕ್ಟೋಬರ್​ನಲ್ಲಿ ನಿರೋಶ್​ ಪೊಲೀಸ್​ ದೂರನ್ನು ನೀಡಿದ್ದಾಳೆ.
ನಂತರ ಜನವರಿ 18, 2022 ರಂದು ಷರಿಯಾ ನ್ಯಾಯಾಲಯ ನಿರೋಶ್​ ಅಬ್ಬಾಸ್​ಗೆ ಮೊಹಮ್ಮದ್​ ಆಬಿದ್​ ಖಾನ್​ ವಿಚ್ಛೇದನ ನೀಡಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಿರೋಶ್​ ಅಬ್ಬಾಸ್​ ಹೈಕೋರ್ಟ್​ ಮೆಟ್ಟೆಲೇರಿದ್ದು, ನ್ಯಾಯಪೀಠ ಷರಿಯಾ ನ್ಯಾಯಾಲಯ ನೀಡಿದ್ದ ತೀರ್ಪು ಅಮಾನ್ಯವೆಂದು, ತೀರ್ಪನ್ನು ನೀಡಲು ಅಧಿಕಾರವೇ ಇಲ್ಲವೆಂದು ಆದೇಶದಲ್ಲಿ ತಿಳಿಸಿದೆ, (ಏಜನ್ಸೀಸ್​).