Sharad Pawar > ಉಪಮುಖ್ಯಮಂತ್ರಿ ಶಿಂಧೆ ಭೇಟಿಯಾದ ಎನ್‌ಸಿಪಿ ಅಧ್ಯಕ್ಷ ಪವಾರ್
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದ್ದು, ಎನ್‌ಸಿಪಿ (ಎಸ್) ಅಧ್ಯಕ್ಷ ಶರದ್ ಪವಾರ್ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಅನಿರೀಕ್ಷಿತ ಭೇಟಿ ನಡೆದಿದೆ. ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ನಡೆದ ಈ ಮಾತುಕತೆಗೆ, ಕೇವಲ ಶಿಷ್ಟಾಚಾರದ ಭೇಟಿಗಿಂತ ಹೆಚ್ಚಿನ ಪ್ರಾಮುಖ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಹುಕಾಲದಿಂದ ಬಾಕಿಯಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಶರದ್ ಪವಾರ್ ವಿಧಾನಸಭೆಗೆ ತೆರಳಿದ್ದರು. ಸಭೆ ಮುಗಿಯುತ್ತಿದ್ದಂತೆಯೇ, ಎನ್‌ಸಿಪಿ (ಎಸ್) ಹಿರಿಯ ನಾಯಕರಾದ ಜಯಂತ್ ಪಾಟೀಲ್, ಜಿತೇಂದ್ರ ಆವ್ಹಾಡ್ ಮತ್ತು ಶಶಿಕಾಂತ್ ಶೈಕ್ಷಣಿಕ ಜೊತೆಗೂಡಿದ ಪವಾರ್, ನೇರವಾಗಿ ಏಕನಾಥ್ ಶಿಂಧೆ ಅವರ ಚೇಂಬರ್‌ಗೆ ತೆರಳಿದರು ಎನ್ನಲಾಗಿದೆ.
ಆ ಸಮಯದಲ್ಲಿ ಡಿಸಿಎಂ ಏಕನಾಥ್ ಶಿಂಧೆ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪವಾರ್ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ, ಶಿಂಧೆ ಸಚಿವ ಸಂಪುಟ ಸಭೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಹಿರಿಯ ನಾಯಕ ಪವಾರ್ ಅವರನ್ನು ಶಾಲು ಹೊದಿಸಿ ಹಾಗೂ ಪುಷ್ಪಗುಚ್ಛ ನೀಡಿ ಗೌರವದಿಂದ ಸ್ವಾಗತಿಸಿದರು. ಬಳಿಕ ಸುಮಾರು 15 ನಿಮಿಷಗಳ ಕಾಲ ಅವರಿಬ್ಬರೂ ಮಾತುಕತೆ ನಡೆಸಿದರು. ನಂತರ ಶಿಂಧೆ ಸಚಿವ ಸಂಪುಟ ಸಭೆಗೆ ಹಿಂತಿರುಗಿದರೆ, ಪವಾರ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂವಾದ ನಡೆಸಲು ಇನ್ನು ಸ್ವಲ್ಪ ಸಮಯ ಚೇಂಬರ್‌ನಲ್ಲೇ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಭೇಟಿಯ ವೇಳೆ ಯಾವ ವಿಷಯಗಳ ಕುರಿತು ಚರ್ಚೆಯಾಯಿತು ಎಂಬುದನ್ನು ಇಬ್ಬರೂ ನಾಯಕರು ಬಹಿರಂಗಪಡಿಸಿಲ್ಲ. ಶಿಂಧೆ ಅವರ ಕಚೇರಿಯು ಇದನ್ನು ಕೇವಲ ಸೌಹಾರ್ದಯುತ ಭೇಟಿ ಎಂದು ಕರೆದಿದೆಯಾದರು, ಪ್ರಸ್ತುತ ಸನ್ನಿವೇಶದಲ್ಲಿ ಈ ಭೇಟಿಯ ಸಮಯವು ತೀವ್ರ ರಾಜಕೀಯ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಶೇಷವಾಗಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗುವ ಬದಲು ಪವಾರ್ ಅವರು ಶಿಂಧೆಯನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಗೊಂಡ ಬಳಿಕ ಕಾಂಗ್ರೇಸ್, ಎನ್‌ಸಿಪಿ (ಎಸ್) ಮತ್ತು ಶಿವಸೇನೆ (ಯುಬಿಟಿ) ಒಳಗೊಂಡಿರುವ ಮಹಾವಿಕಾಸ್ ಅಘಾಡಿ ಈಗಾಗಲೇ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ನಡೆದಿರುವ ಈ ಭೇಟಿಯು ಅಘಾಡಿ ಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಲಿದ್ದು, ಮುಂಬರುವ ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಪಾಳೆಯದಲ್ಲಿ ಹೊಸ ಆತಂಕಕ್ಕೆ ಹಾದಿಮಾಡಿಕೊಟ್ಟಿದೆ.
ಎನ್‌ಸಿಪಿ ವಿಲೀನ ಪ್ರಕ್ರಿಯೆಗೆ ಹಿನ್ನಡೆ!...
ಕಾಂಗ್ರೆಸ್ ಪಕ್ಷದೊಂದಿಗೆ ಎನ್‌ಸಿಪಿ ವಿಲೀನಗೊಳ್ಳುವ ಪ್ರಸ್ತಾವನೆಗೆ ಹಿನ್ನಡೆಯಾದ ಬೆನ್ನಲ್ಲೇ, ಶರದ್ ಬಣವು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಲಿದೆ ಎಂಬ ಚರ್ಚೆಗಳು ಜೋರಾಗಿವೆ. ಎನ್‌ಸಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ಶರದ್ ಪವಾರ್ ಬಣವು ಎರಡು ಬಾರಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಂಪರ್ಕಿಸಿತ್ತು. 2024ರ ಅಂತ್ಯದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಈ ವಿಲೀನದ ಬಗ್ಗೆ ಮಾತುಕತೆಗಳು ನಡೆದಿದ್ದರೂ, ಚುನಾವಣಾ ಪ್ರಚಾರದ ಕಾರಣದಿಂದಾಗಿ ಅದನ್ನು ಮುಂದೂಡಲಾಗಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಈ ಪ್ರಸ್ತಾವನೆಯ ಬಗ್ಗೆ ಚರ್ಚಿಸುವಂತೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದ್ದರು. ಅದರಂತೆ ಹೈಕಮಾಂಡ್ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದಾಗ, ರಾಜ್ಯದ ಬಹುತೇಕ ನಾಯಕರು ಎನ್‌ಸಿಪಿ ವಿಲೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ವಿಲೀನ ಪ್ರಸ್ತಾವನೆಗೆ ಹಿನ್ನಡೆಯುಂಟಾಗಿದೆ(ಏಜೆನ್ಸೀಸ್).