Sharad Pawar | ಉದ್ಧವ್ ಠಾಕ್ರೆ ಆದ್ರೂ, ಈಗ ಶರದ್ ಪವಾರ್ ಸರದಿ...?
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ (UBT) ಎದುರಾದ ಭಿನ್ನಮತದ ಬಿರುಗಾಳಿಯ ಬೆನ್ನಲ್ಲೇ, ಈಗ ಶರದ್ ಪವಾರ್ (Sharad Pawar) ಅವರ ಎನ್‌ಸಿಪಿ ಬಣದಲ್ಲೂ ದೊಡ್ಡ ಬಿರುಕು ಮೂಡುವ ಲಕ್ಷಣಗಳು ಕಾಣಿಸುತ್ತಿವೆ. ಶರದ್ ಬಣದ ಒಟ್ಟು ಎಂಟು ಲೋಕಸಭಾ ಸಂಸದರ ಪೈಕಿ ಐವರು ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸೇರಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಪ್ರಮುಖ ಚುನಾವಣೆಗಳು ಎದುರಾಗುತ್ತಿರುವ ಬೆನ್ನಲ್ಲೇ ಈ ಸ್ಫೋಟಕ ಬೆಳವಣಿಗೆಗಳು ಮುಂಚೂಣಿಗೆ ಬಂದಿದ್ದು, ಹಿರಿಯ ನಾಯಕ ಶರದ್ ಪವಾರ್ ಬಣದ ರಾಜಕೀಯ ಭವಿಷ್ಯದ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿವೆ. ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನಾ (UBT) ಪಕ್ಷಗಳ ಸಂಸದರು ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈಗ ಎಲ್ಲರ ಗಮನ ಎನ್‌ಸಿಪಿ ಕಡೆ ನೆಟ್ಟಿದ್ದು, ಹಿರಿಯ ನಾಯಕ ಶರದ್ ಪವಾರ್ ತಮ್ಮ ಬಣವನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳಲು ಶಕ್ತರಾಗುತ್ತಾರಾ ಎಂಬ ಕುತೂಹಲ ಮೂಡಿದೆ.
ಎನ್‌ಸಿಪಿ ಸಂಸದರು ಎನ್‌ಡಿಎ ಸೇರ್ತಾರಾ..?
ವರದಿಗಳ ಪ್ರಕಾರ, ಎನ್‌ಸಿಪಿ ಪಕ್ಷದ ಐವರು ಲೋಕಸಭಾ ಸಂಸದರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಬಗ್ಗೆ ಗಂಭೀರ ಆಲೋಚನೆ ನಡೆಸುತ್ತಿದ್ದಾರೆ. ಇದು ನಿಜವಾದಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ಶರದ್ ಪವಾರ್ ಸ್ಥಾನಮಾನಕ್ಕೆ ಭಾರಿ ಹಿನ್ನಡೆಯಾಗಲಿದೆ. ಇದೇ ವೇಳೆ, ಸುನೇತ್ರಾ ಪವಾರ್ ಅವರು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.
ಈ ಭೇಟಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ, ಪಕ್ಷದ ಭವಿಷ್ಯದ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಈಗಾಗಲೇ ಹಲವು ಬಿರುಕುಗಳನ್ನು ಕಂಡಿರುವ ಎನ್‌ಸಿಪಿ ಪಕ್ಷಕ್ಕೆ ಈ ಹೊಸ ಬೆಳವಣಿಗೆ ಮತ್ತಷ್ಟು ಸಂಕಷ್ಟಕೆ ದೂಡಿದೆ.
ಮೂರನೇ ಎರಡರಷ್ಟು ಬಹುಮತದ ಮೇಲೆ ಎನ್‌ಡಿಎ ಕಣ್ಣು
ಪ್ರತಿಪಕ್ಷಗಳ ಸಂಸದರನ್ನು ತನ್ನತ್ತ ಸೆಳೆಯುವ ಮೂಲಕ ಸಂಸತ್ತಿನಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಎನ್‌ಡಿಎ ತಂತ್ರ ರೂಪಿಸುತ್ತಿದೆ ಎಂಬ ವರದಿಗಳು ಲಭ್ಯವಾಗಿವೆ. ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ (Delimitation Bill) ಯಂತಹ ಸಾಂವಿಧಾನಿಕ ನಿರ್ಧಾರಗಳನ್ನು ಜಾರಿಗೆ ತರಲು ಆಡಳಿತಾರೂಢ ಮೈತ್ರಿಕೂಟಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದ್ದು, ಅದಕ್ಕಾಗಿ ಈ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ.
ಪಕ್ಷದ ಒಡಕಿನ ವದಂತಿಗಳು ಹರಡುತ್ತಿದ್ದಂತೆ ಎಚ್ಚೆತ್ತಿರುವ ಶರದ್ ಪವಾರ್, ಜೂನ್ 19 ರಂದು ಹಿರಿಯ ನಾಯಕರ ತುರ್ತು ಸಭೆ ಕರೆದು ಚರ್ಚಿಸಿದ್ದಾರೆ. ಪ್ರತಿಪಕ್ಷಗಳು ಆಪರೇಷನ್ ಟೈಗರ್ ಎಂದು ಕರೆಯುತ್ತಿರುವ ಈ ಪಕ್ಷಾಂತರ ಪ್ರಯತ್ನವನ್ನು ಹತ್ತಿಕ್ಕಲು ಮತ್ತು ತಮ್ಮ ಸಂಸದರನ್ನು ಒಗ್ಗಟ್ಟಾಗಿಡಲು ಪವಾರ್ ಮುಂದಾಗಿದ್ದಾರೆ. ಜೂನ್ 24 ರಂದು ಮುಂಬೈನಲ್ಲಿ ನಡೆಯಲಿರುವ ಮಹಾ ವಿಕಾಸ್ ಅಘಾಡಿ (MVA) ಶಾಸಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚೆಗಳು ನಡೆಯಲಿದ್ದು, ಮೈತ್ರಿ ಪಕ್ಷಗಳು ಒಟ್ಟಾಗಿ ಈ ವದಂತಿಗಳನ್ನು ಎದುರಿಸಲು ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ.
ವಿಲೀನವಾಗ್ತಾವಾ ಕಾಂಗ್ರೆಸ್-ಎನ್‌ಸಿಪಿ..?
ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರು ಎನ್‌ಸಿಪಿ (ಎಸ್‌ಪಿ) ಪಕ್ಷವನ್ನು ತಮ್ಮೊಂದಿಗೆ ವಿಲೀನಗೊಳಿಸುವ ಕಾರ್ಯತಂತ್ರದ ಬಗ್ಗೆಯೂ ಆಲೋಚಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಬಣವನ್ನು ಬಲಪಡಿಸಲು ಮತ್ತು ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ತಡೆಯಲು ಈ ವಿಲೀನದ ಪ್ರಸ್ತಾಪ ಮುಂಚೂಣಿಗೆ ಬಂದಿದೆ. ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಹೊರಬೀಳದಿದ್ದರೂ, ಇದು ಮಹಾರಾಷ್ಟ್ರ ರಾಜಕೀಯಕ್ಕೆ ಹೊಸ ಆಯಾಮ ನೀಡಿದೆ.
ಪ್ರತಿಪಕ್ಷಗಳ ಒಗ್ಗಟ್ಟಿಗೆ ಸಂಜಯ್ ರಾವತ್ ಕರೆ
ಶಿವಸೇನಾ (UBT) ನಾಯಕ ಸಂಜಯ್ ರಾವತ್ ಅವರು, ಕಾಂಗ್ರೆಸ್ ಸಿದ್ಧಾಂತದಿಂದ ಹೊರಬಂದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಲು ಶರದ್ ಪವಾರ್ ಅವರೇ ಮುಂದಾಳತ್ವ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮತ್ತು ಅದರ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಮತ್ತು ಇಂದಿಗೂ ಅದೇ ಸಿದ್ಧಾಂತವನ್ನು ನಂಬಿರುವ ಹಲವು ನಾಯಕರಿದ್ದಾರೆ. ಈ ಸಿದ್ಧಾಂತಗಳೆಲ್ಲವೂ ಒಂದಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡ ಸವಾಲು ಹಾಕಬಹುದು. ಪವಾರ್ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರಾವತ್ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಮುಂಬರುವ ದಿನಗಳು ಶರದ್ ಪವಾರ್ ಅವರಿಗೆ ಅತ್ಯಂತ ನಿರ್ಣಾಯಕವಾಗಿವೆ. ಸದ್ಯಕ್ಕೆ ಯಾವುದೇ ಸಂಸದರು ಎನ್‌ಡಿಎ ಸೇರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ, ತೆರೆಮರೆಯ ರಾಜಕೀಯ ಚಟುವಟಿಕೆಗಳು ಮಾತ್ರ ಭಾರಿ ಕುತೂಹಲ ಮೂಡಿಸಿವೆ(ಏಜೆನ್ಸೀಸ್).