ಶರದ್ ಪವಾರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
ನವದೆಹಲಿ: ಮಹಾರಾಷ್ಟ್ರದ ರಾಜಕಾರಣದಲ್ಲಿ ಭಾರಿ ಬದಲಾವಣೆಗಳು ಸಂಭವಿಸುತ್ತಿದ್ದು, ಹಲವು ಶಾಸಕರು, ಸಂಸದರು ಪಕ್ಷಾಂತರ ಮಾಡುವುದು ಮುಂದುವರೆದಿದೆ. ಇದರ ನಡುವೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ(ಎಸ್ಪಿ) ಪಕ್ಷ ಕಾಂಗ್ರೆಸ್ನಲ್ಲಿ(Congress) ವಿಲೀನವಾಗಲಿದೆ ಮತ್ತು ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.
ಈ ಕುರಿತು ಎನ್ಡಿಟಿವಿ ವರದಿ ಮಾಡಿದ್ದು, ಶರದ್ ಪವಾರ್ ಅವರ ಎನ್‌ಸಿಪಿ(ಎಸ್ಪಿ) ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸಂಭಾವ್ಯ ವಿಲೀನದ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ಮಹಾರಾಷ್ಟ್ರದ ಮಾಜಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ದೃಢಪಡಿಸಿದ್ದಾರೆ ಎಂದು ತಿಳಿಸಿದೆ.
ಶರದ್ ಪವಾರ್ ಅವರು 1999ರಲ್ಲಿ ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಬಗ್ಗೆ ತಗಾದೆ ತೆಗದು ಅವರು ನಾಯಕತ್ವ ವಹಿಸಿಕೊಳ್ಳುವುದನ್ನು ವಿರೋಧಿಸಿ ಕಾಂಗ್ರೆಸ್ ತೊರೆದು, ತಮ್ಮದೇ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಸ್ಥಾಪಿಸಿದ್ದರು. ಆದರೆ 2023ರಲ್ಲಿ ಅವರ ಸಹೋದರನ ಪುತ್ರರಾದ ಅಜಿತ್ ಪವಾರ್ ಅವರು ಪಕ್ಷವನ್ನು ವಿಭಜಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿ, ಉಪಮುಖ್ಯಮಂತ್ರಿಯಾಗಿದ್ದರು.
ಮೂಲಗಳ ಪ್ರಕಾರ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ನವದೆಹಲಿಯಲ್ಲಿ ಹಿರಿಯ ನಾಯಕತ್ವ ಮಟ್ಟದಲ್ಲಿ ಚರ್ಚೆಗಳು ಈಗ ಅಂತಿಮ ಹಂತದಲ್ಲಿದ್ದು, ಸಕಾರಾತ್ಮಕವಾಗಿ ಪ್ರಗತಿ ಸಾಧಿಸಿವೆ. ಮತ್ತು ಕಾಂಗ್ರೆಸ್ ಸೇರಲು ಇಚ್ಛಿಸುವ ಎನ್‌ಸಿಪಿ ಶಾಸಕರು ಮತ್ತು ಸಂಸದರಿಗೆ ನಾಯಕತ್ವ ಹಸಿರು ನಿಶಾನೆ ತೋರಿಸಿದೆ ಎನ್ನಲಾಗಿದೆ.
ಆದಾಗ್ಯೂ ಪಕ್ಷದಲ್ಲಿ ಎರಡು ವಿಭಿನ್ನ ಚಿಂತನೆಗಳನ್ನು ಮೂಡಿದ್ದು, ಪಕ್ಷದ ಒಂದು ವರ್ಗವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರಲು ಒಲವು ತೋರುತ್ತಿದ್ದು, ಮತ್ತೊಂದು ಬಣವು ಕಾಂಗ್ರೆಸ್ ಸೇರಲು ಬಯಸುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).