Delimitation Bill  
ದೇಶ

ಇಂಡಿಯಾ ಮೈತ್ರಿಕೂಟಕ್ಕೆ ಬಿಗ್ ಶಾಕ್: ಕ್ಷೇತ್ರ ಪುನರ್ವಿಂಗಡಣೆ 'ಸಾಂವಿಧಾನಿಕ ಅಗತ್ಯ' ಎನ್ನುತ್ತಾ ಮಸೂದೆ ಪರ ನಿಂತ ಶರದ್ ಪವಾರ್ ಬಣ! | Delimitation Bill

ಮುಂಬೈ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮಸೂದೆಗೆ ತನ್ನ ಪ್ರಮುಖ ಬೇಡಿಕೆಗಳು ಈಡೇರಿದರೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಚಂದ್ರ ಪವಾರ್ ಬಣ) ಹೇಳಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ರಾಜ್ಯಗಳಲ್ಲೂ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಏಕರೂಪವಾಗಿ ಶೇ. 50ರಷ್ಟು ಹೆಚ್ಚಳವಾಗಬೇಕು ಮತ್ತು ಯಾವುದೇ ರಾಜ್ಯದ ಪ್ರಸ್ತುತ ಪ್ರಾತಿನಿಧ್ಯ ಕಡಿಮೆಯಾಗಬಾರದು ಎಂಬುದು ಪಕ್ಷದ ಪ್ರಮುಖ ನಿಲುವಾಗಿದೆ.

ಶರದ್ ಪವಾರ್ ಅವರೊಂದಿಗಿನ ಚರ್ಚೆಯ ವಿವರ ಹಂಚಿಕೊಂಡ ನಾಯಕ ಜಿತೇಂದ್ರ ಆವ್ಹಾಡ್, ಇದು ನಮ್ಮ ಪಕ್ಷದ ಅಧಿಕೃತ ನಿಲುವಿನ ಕುರಿತ ಚರ್ಚೆಯಾಗಿರಲಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಸಾಂವಿಧಾನಿಕ ಅಗತ್ಯವಾಗಿದೆ ಎಂಬ ಸಾಮಾನ್ಯ ಅಭಿಪ್ರಾಯ ವ್ಯಕ್ತವಾಗಿತ್ತು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ನಾವು ಖಂಡಿತವಾಗಿಯೂ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಮಸೂದೆಯ ನಿರ್ದಿಷ್ಟ ನಿಬಂಧನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪಕ್ಷವು ಅದನ್ನು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ನಾವು ಮಸೂದೆಯನ್ನು ಖಂಡಿತವಾಗಿ ಅಧ್ಯಯನ ಮಾಡುತ್ತೇವೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಸುಪ್ರಿಯಾ ಸುಳೆ ತೆಗೆದುಕೊಳ್ಳುವ ನಿರ್ಧಾರದಂತೆಯೇ ಎಲ್ಲವೂ ನಡೆಯಲಿದೆ ಎಂದು ಆವ್ಹಾಡ್ ತಿಳಿಸಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾವುತ್ ಅವರಿಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದಿದ್ದಾರೆ. ಶರದ್ ಪವಾರ್ ಅವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಉಲ್ಲೇಖಿಸಿದ ಆವ್ಹಾಡ್, ಸಂಜಯ್ ರಾವುತ್ ಅವರಿಗೆ ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯಗಳಿವೆ. ನಿಷ್ಠೆ ಎಂದರೇನು ಎಂಬುದು ನಮಗೆ ಗೊತ್ತು. 1986ರಿಂದಲೂ ನಾನು ಪವಾರ್ ಸಾಹೇಬರ ಕುಟುಂಬದ ಭಾಗವಾಗಿದ್ದೇನೆ. ಅವರನ್ನು ನಾನು ದೇವರಂತೆ ಕಾಣುತ್ತೇನೆ ಮತ್ತು ಅವರ ನಿರ್ಧಾರಗಳೇ ನಮಗೆಲ್ಲರಿಗೂ ಅಂತಿಮ ಎಂದು ಹೇಳಿದ್ದಾರೆ.

ಮಸೂದೆ ಬೆಂಬಲಿಸಲು ಎನ್‌ಸಿಪಿ (ಎಸ್‌ಪಿ) ಮುಂದಿಟ್ಟ 3 ಷರತ್ತುಗಳು

ಮಸೂದೆಗೆ ಬೆಂಬಲ ನೀಡುವ ಸಂಬಂಧ ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಈ ಹಿಂದೆಯೇ ಮೂರು ಷರತ್ತುಗಳನ್ನು ಮುಂದಿಟ್ಟಿದ್ದರು.

  • ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದು.

  • ದೇಶದ ಎಲ್ಲಾ ರಾಜ್ಯಗಳಲ್ಲೂ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಏಕರೂಪವಾಗಿ ಶೇ. 50ರಷ್ಟು ಹೆಚ್ಚಳ ಮಾಡುವುದು.

  • ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಕ್ಷೇತ್ರ ಪುನರ್ವಿಂಗಡಣೆ ಆಯೋಗದಲ್ಲಿ ವಿರೋಧ ಪಕ್ಷಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು.

ದೇಶಾದ್ಯಂತ ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ, ಸಂಸತ್ತಿನ ವಿಸ್ತರಣೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಕಳವಳ ವ್ಯಕ್ತಪಡಿಸಿ ವಿರೋಧಿಸುತ್ತಿವೆ.

ಇಂಡಿಯಾ ಮೈತ್ರಿ ಸಭೆಯಲ್ಲಿ ಭಾಗಿ ಮತ್ತು ಸಂಸದರಿಗೆ ವಿಪ್

ಸಂಸತ್ ಅಧಿವೇಶನದ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲು ಶನಿವಾರ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ತಮ್ಮ ಪಕ್ಷ ಭಾಗವಹಿಸಲಿದೆ ಎಂದು ಆವ್ಹಾಡ್ ಖಚಿತಪಡಿಸಿದ್ದಾರೆ. ಶರದ್ ಪವಾರ್ ಅವರ ಆರೋಗ್ಯದ ಕಾರಣದಿಂದ ತಾವು ಸಭೆಗೆ ಗೈರುಹಾಜರಾಗುವುದಾಗಿ ಸುಪ್ರಿಯಾ ಸುಳೆ ಈ ಹಿಂದೆ ತಿಳಿಸಿದ್ದರೂ, ಪಕ್ಷದ ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ, ನವೆಂಬರ್ 30ರಿಂದ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಎನ್‌ಸಿಪಿ ತನ್ನ 8 ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಪಕ್ಷವು ರಾಜ್ಯಸಭೆಯಲ್ಲಿ ಒಬ್ಬ ಸದಸ್ಯರನ್ನು ಹೊಂದಿದೆ(ಏಜೆನ್ಸೀಸ್​).