Priyanka Gandhi slams Dharmendra Pradhan's Parliament welcome by NDA MPs Priyanka Gandhi Vadra call
- ರಾಜೀನಾಮೆ ಕೊಟ್ಟವರನ್ನು ಸನ್ಮಾನಿಸೋದು ನಾಚಿಕೆಗೇಡಿನಗ ಸಂಗತಿ ಅನಿಸೋದಿಲ್ವಾ ಎಂದ ಪ್ರಿಯಾಂಕಾ ಗಾಂಧಿ
- ಧರ್ಮೇಂದ್ರ ಪ್ರಧಾನ್ ಅವರನ್ನು ಬಿಜೆಪಿ ನಾಯಕರು ಸ್ವಾಗತಿಸಿದ ಪರಿ ಬಗ್ಗೆ ಕೆಂಡಾಮಂಡಲ
- ಬಿಕಜೆಪಿ ನಾಯಕರ ಸನ್ಮಾನ ಕಾರ್ಯಕ್ರಮದ ವಿರುದ್ಧ ರಾಹುಲ್ ಗಾಂಧಿ ಭಾರೀ ಟೀಕೆ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಲೋಪದೋಷದ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಜು.25ರಂದು ರಾಜೀನಾಮೆ ಕೊಟ್ಟರು. ಸೋಮವಾರ ಸಂಸತ್ ಕಲಾಪಕ್ಕೆ ಹಾಜರಾಗುತ್ತಲೇ ಅವರನ್ನು ಆದರದಿಂದ ಸ್ವಾಗತಿಸಿದ ಬಿಜೆಪಿ ನಾಯಕರು, ಅವರಿಗೆ ಪೇಟ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಅವರ ನಡೆಯನ್ನು ಕೊಂಡಾಡಿದರು. ಸದ್ಯ ಈ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕಿಡಿಕಾರಿದ್ದಾರೆ.
ನಾಚಿಕೆ ಗೇಡಿನ ಸಂಗತಿ
ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಯನಾಡಿನ ಸಂಸದೆ ಪ್ರಿಯಾಂಕಾಗಾಂಧಿ ವಾದ್ರಾ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಂಟಾದ ಲೋಪದೋಷಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟಿದ್ದಾರೆ. ಆ ಸಂದರ್ಭವನ್ನು ಪರಿಗಣಿಸಿ, ಸಂಸತ್ ಆವರಣದಲ್ಲಿ ಸೂಪರ್ ಸ್ಟಾರ್ನಂತೆ ಬರಮಾಡಿಕೊಂಡು ಸ್ವಾಗತಿಸಿದ್ದು ನಾಚಿಕೆಗೇಡಿನ ಸಂಗತಿ ಎನಿಸೋದಿಲ್ಲವೇ ಎಂದು ಗುಡುಗಿದರು.
ವಿದ್ಯಾರ್ಥಿಗಳಿಗಿನ್ನೂ ಭಯವಿದೆ
ಈ ಬಿಜೆಪಿ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಕಿರುಕುಳಕ್ಕೆ ಒಳಗಾಗಿದ್ದಾರೆ. ನಾನು ಕೆಲವೊಂದು ಗಮನಿಸಿದ್ದೇನೆ. ಇನ್ಸ್ಟಾಗ್ರಾಮ್ನಲ್ಲಿ ಯುವತಿಯರ ಫೋಟೋಗಳನ್ನು ಹಂಚಿಕೊಂಡು, ಅವರು ಹೀಗೆ ಮಾಡಿದರು, ಹಾಗೆ ನಡೆದುಕೊಂಡರು ಎನ್ನುವ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಡಿದ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ನೀವು ಅದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರೋ ಅಥವಾ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಬಯಸುತ್ತಿದ್ದೀರಾ. ನಿಮ್ಮ ನಡೆ ತಪ್ಪು ಎಂದು ಹೇಳಿದರು.
ರಾಹುಲ್ ಗಾಂಧಿ ಕಿಡಿ
ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ ಹಾಗೂ ಭಾರತದಲ್ಲಿ ಹದಗೆಟ್ಟ ಶಿಕ್ಷಣ ವ್ಯವಸ್ಥೆತಯ ಸಂಕೇತ. ಈ ರಾಜಕೀಯ ವ್ಯವಸ್ಥೆಯಿಂದಾಗಿ 26 ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುವಂತಾಯ್ತು. ಧರ್ಮೇಂದ್ರ ಪ್ರಧಾನ್ ಅವರು ತಾವಾಗಿಯೇ ರಾಜೀನಾಮೆ ಕೊಟ್ಟಿಲ್ಲ. ಬದಲಾಗಿ ಯುವಕರ ಆಕ್ರೋಶಕ್ಕೆ ಹೆದರಿ ರಿಸೈನ್ ಮಾಡಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೆಂಡಕಾರಿದರು.
ಬಿಜೆಪಿ ನಾಯಕರು ಸಂಸತ್ ಆವರಣದಲ್ಲಿ ಅವರಿಗೆ ಪೇಟ ಹಾಕಿ ಶಾಲು ಹೊದಿಸಿ, ಸನ್ಮಾನ ಮಾಡಿ ಸ್ವಾಗತ ಮಾಡುತ್ತೀರಲ್ಲ ಇದು ಗೌರವಯುತ ಅಲ್ಲ. ಲಕ್ಷಾಂತರ ಜನ ಮಕ್ಕಳ ಭವಿಷ್ಯ ಹಾಳಾಗಿದ್ದಕ್ಕೆ ಮಾಡಿಕೊಂಡ ಆಚರಣೆ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಗಮನಿಸುತ್ತಾರೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುಡುಗಿದರು.
ಜುಲೈ 20ರಂದು ಸಂಸತ್ ಚಲೋವನ್ನು ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿತ್ತು. ಈ ವೇಳೆ ಸಂಸತ್ ಬಳಿ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು. ಈ ವೇಳೆ ನುಗ್ಗಲು ಯತ್ನಿಸಿದ ವಿದ್ಯಾರ್ಥಿಗಳ ಮೇಲೆ, ಪೆಲೆಟ್ ಗನ್ ಪ್ರಯೋಗಿಸಲಾಯ್ತು. ಅಲ್ಲದೆ, ಹಲ್ಲೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ ಆವರಣದಲ್ಲಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ಮುಂದುವರೆಸಿದ್ದಾರೆ, (ಏಜೆನ್ಸೀಸ್).