ಶಕೀರೆ ಖಲೀಲಿ ಮತ್ತು ಅವರ ಪತಿ ಮುರಳಿ ಮನೋಹರ ಮಿಶ್ರಾ 
ದೇಶ

ತನ್ನ ಮನೆಯಲ್ಲೇ ಜೀವಂತವಾಗಿ ಮಣ್ಣಾದ ಶ್ರೀಮಂತೆ! 1991ರಲ್ಲಿ ನಡೆದ ಹೈಪ್ರೊಫೈಲ್​ ಕೊಲೆ ಕೇಸ್ ವೆಬ್​ ಸರಣಿಯಲ್ಲಿ ಲಭ್ಯ​

ಪ್ರಮುಖ ಮುಖ್ಯಾಂಶಗಳು

  • ಪ್ರಭಾವಿ ಉದ್ಯಮಿಯಾಗಿದ್ದ ಶಕೀರೆ ಖಲೀಲಿ 1991ರಲ್ಲಿ ದಿಢೀರ್ ನಾಪತ್ತೆ
  • ಮೂರು ವರ್ಷಗಳ ಬಳಿಕ ತಮ್ಮದೇ ಮನೆಯಲ್ಲಿ ಹೆಣವಾಗಿ ಪತ್ತೆ
  • ಈ ಹೈಪ್ರೊಫೈಲ್ ಮರ್ಡರ್​ ಕೇಸ್​ ಒಂದು ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ
Shakereh Khaleeli: ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಹಾಗೂ ಪ್ರಭಾವಿ ಉದ್ಯಮಿಯಾಗಿದ್ದ ಶಕೀರೆ ಖಲೀಲಿ 1991ರಲ್ಲಿ ದಿಢೀರ್ ನಾಪತ್ತೆಯಾಗಿ, ಬಳಿಕ ಮೂರು ವರ್ಷಗಳ ನಂತರ ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಹೈಪ್ರೊಫೈಲ್ ಮರ್ಡರ್​ ಕೇಸ್​ ಒಂದು ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ನೈಜ ಘಟನೆ ಆಧಾರಿತ ವೆಬ್​ ಸರಣಿಯಾಗಿ ಪ್ರಸಾರವಾಗಿದೆ ಎಂಬ ಸಂಗತಿ ಇಂದಿಗೂ ಅನೇಕರಿಗೆ ತಿಳಿದೇ ಇಲ್ಲ.​
ದೇಶ-ವಿದೇಶ ಸುತ್ತುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಶಕೀರೆ ಖಲೀಲಿ, ತಮ್ಮ ಎರಡನೇ ಪತಿ ಸ್ವಾಮಿ ಶ್ರದ್ಧಾನಂದ (ಮುರಳಿ ಮನೋಹರ ಮಿಶ್ರಾ) ಅವರಿಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ ಎಂಬ ಸಂಗತಿ ಅಕ್ಕಪಕ್ಕದಲ್ಲಿದ್ದ ಮನೆಯವರಿಗೂ ಗೊತ್ತಿರಲಿಲ್ಲ. ಆ ಮಟ್ಟಿಗೆ ನಾಟಕವಾಡಿದ್ದ ಶ್ರದ್ಧಾನಂದ. 1991ರಲ್ಲಿ ದಿಢೀರ್ ಕಣ್ಮರೆಯಾದ ಶಕೀರೆ, ಪ್ರವಾಸದಲ್ಲಿ ಬಿಜಿಯಾಗಿರುವ ಕಾರಣ ಮನೆಗೆ ಹಿಂತಿರುಗೇ ಇಲ್ಲ ಎಂದು ಎಲ್ಲರನ್ನೂ ನಂಬಿಸುತ್ತಾ ಬರೋಬ್ಬರಿ 3 ವರ್ಷಗಳ ಕಾಲ ತಳ್ಳಿದವನ ಅಪರಾಧ ಕಡೆಗೂ ಖಾಕಿಯಿಂದ ಬಟಾಬಯಲಾಯಿತು.

6 ಅಡಿ ಆಳದಲ್ಲಿ ಅಸ್ಥಿಪಂಜರ

ಅಂತಿಮವಾಗಿ 1994ರಲ್ಲಿ ಶಕೀರೆ ಅವರ ಪತಿಯ ಮಾತಿನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ ಪೊಲೀಸರು, ದಂಪತಿ ವಾಸಿಸುತ್ತಿದ್ದ ಮನೆಯ ಸುತ್ತಮುತ್ತ ಎಲ್ಲ ಪರಿಶೀಲನೆ ನಡೆಸಿ, ಕಡೆಗೆ ಮನೆಯೊಳಗಿನ ಜಾಗವನ್ನು ಅಗೆದಾಗ ಪೊಲೀಸರಿಗೆ ಕಾದಿದ್ದು ನಿಜಕ್ಕೂ ದೊಡ್ಡ ಆಘಾತಕಾರಿ ಸತ್ಯ. ಅದೇ, ಶಕೀರೆ ಅವರ ಅಸ್ಥಿಪಂಜರ. 6 ಅಡಿ ಆಳದಲ್ಲಿ ಅವರನ್ನು ಪತಿಯೇ ಮರದ ಪೆಟ್ಟಿಗೆಯೊಂದರಲ್ಲಿ ಜೀವಂತವಾಗಿ ಹೂತಿಟ್ಟ ವಿಚಾರ ಬಯಲಾಯಿತು.
ಶಕೀರೆ ಅವರ ಅರಿವಿಗೆ ಬಾರದಂತೆ ಡ್ರಗ್ಸ್‌ ಕೊಟ್ಟು, ಜೀವಂತವಾಗಿದ್ದಾಗಲೇ ಪೆಟ್ಟಿಗೆಯಲ್ಲಿಟ್ಟು ಸಮಾಧಿ ಮಾಡಲಾಗಿತ್ತು. ಸಾಯುವ ಕೊನೆ ಕ್ಷಣಗಳಲ್ಲಿ ಬದುಕುಳಿಯಲು ಶ್ರಮಿಸಿದ ಆಕೆ, ಪೆಟ್ಟಿಗೆಯಿಂದ ಹೊರಬರಲು ಪಟ್ಟ ಕಠಿಣ ಹೋರಾಟಕ್ಕೆ ಆಕೆಯ ಅಸ್ಥಿಪಂಜರದ ಕೈ ಹಾಸಿಗೆಯನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಬಿಟ್ಟಿರುವ ಸ್ಥಿತಿಯೇ ಜ್ವಲಂತ ಸಾಕ್ಷಿ. ಈ ವಿಷಯ ಕೇವಲ ಪೊಲೀಸರು ಮಾತ್ರವಲ್ಲ, ಇಡೀ ದೇಶವನ್ನೇ ಅಕ್ಷರಶಃ ನಿಬ್ಬೆರಗಾಗಿಸಿತ್ತು.

ಆಸ್ತಿ ಮೇಲಿತ್ತು ಪತಿ ಕಣ್ಣು

ಶಕೀರೆ ಅವರ ಅಪಾರ ಆಸ್ತಿಯನ್ನು ಕಬಳಿಸುವ ಸಂಚಿನಿಂದಲೇ ಶ್ರದ್ಧಾನಂದ ಈ ಭೀಕರ ಕೃತ್ಯ ಎಸಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಗಂಡ ತನ್ನ ಆಸ್ತಿ ಮೇಲೆ ಕಣ್ಣಿಟ್ಟಿರುವ ವಿಚಾರ ಆಕೆಗೆ ಗೊತ್ತಾದ ಮೇಲೆ ಇಬ್ಬರ ನಡುವಿನ ಸಂಬಂಧ ಅಳಸಿ ಹೋಗಿತ್ತು. ಆಗಾಗ್ಗೆ ಜಗಳಗಳು ಕೂಡ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿವೆ. ಶ್ರದ್ಧಾನಂದ ಮದುವೆಯಾದ ಉದ್ದೇಶ ಶಕೀರೆ ಅವರ ಆಸ್ತಿಯನ್ನು ನುಂಗುವ ದುರಾಸೆಯಿಂದಲೇ ಎಂಬುದು ಕುಟುಂಬಸ್ಥರಿಗೆ ಅಚ್ಚರಿ ಹಾಗೂ ಅತ್ಯಂತ ದುಃಖಕರ ವಿಷಯ.

ಸ್ವಂತ ಮಕ್ಕಳಿಗೆ ಕಟ್ಟುಕಥೆ

ಶಕೀರೆ ಅವರ ಹೆಣ್ಣುಮಕ್ಕಳು ಅಮ್ಮ ಎಲ್ಲಿ ಎಂಬ ಪ್ರಶ್ನೆಗಳನ್ನು ಕೇಳಿದಾಗಲೆಲ್ಲಾ, ಶ್ರದ್ಧಾನಂದ ತನ್ನದೇ ಹೊಸ ಹೊಸ ಕಥೆಯನ್ನು ಬದಲಾಯಿಸುತ್ತಿರುವುದು ಸ್ಪಷ್ಟವಾಯಿತು. ಆಕೆ ದೇಶ-ವಿದೇಶ ಸುತ್ತುವುದನ್ನು ಮುಂದುವರಿಸಿದ್ದಾಳೆ ಅಷ್ಟೇ. ಅವಳಿಗೆ ಏನಾಗಿಲ್ಲ. ಜೀವಂತವಾಗಿಯೇ ಇದ್ದಾಳೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂಬ ಮಾತುಗಳು ಅನುಮಾನಗಳೇ ದಿಟ ಎನ್ನುವಂತೆ ಮಾಡಿತು.
ಶಕೀರೆ ಅವರ ಪುತ್ರಿ ಸಬಾ, ತಂದೆಯಿಂದ ವಿವರಣೆಗಳನ್ನು ಕೇಳೋದು ಬಿಟ್ಟು ನೇರವಾಗಿ ಪೊಲೀಸರನ್ನು ಸಂಪರ್ಕಿಸಿ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ತನ್ನ ತಾಯಿಗೆ ಏನಾಯಿತು ಎಂಬುದನ್ನು ನಿಮ್ಮ ತನಿಖೆಯಿಂದ ಪತ್ತೆ ಮಾಡಿ ಎಂದು ಅಧಿಕಾರಿಗಳನ್ನು ದೂರಿನ ಮೂಲಕ ಕೋರಿದರು. ಕಡೆಗೆ, ಶ್ರದ್ಧಾನಂದನ ಬೆನ್ನತ್ತಿದ ಪೊಲೀಸರು ಈ ಪ್ರಕರಣಕ್ಕೆ 1994ರಲ್ಲಿ ಸಾಕ್ಷಿ ಸಮೇತ ಅಂತ್ಯವಾಡಿದರು.

ಕೋರ್ಟ್ ತೀರ್ಪು ಏನು?

ಭಾರತದ ಅಪರಾಧ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಶೂಟ್ ಮತ್ತು ಡಿಎನ್‌ಎ ಸಾಕ್ಷಿಗಳನ್ನು ಬಳಸಿದ ಅಪರೂಪದ ಪ್ರಕರಣ ಇದಾಗಿತ್ತು ಎಂದು ವರದಿಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರಾಧಿ ಶ್ರದ್ಧಾನಂದನಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದೆ. ತಮ್ಮ ತಾಯಿಯನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನ್ಯಾಯಾಲಯ ನೀಡಿದ ತೀರ್ಪು ನಿಟ್ಟುಸಿರು ಬಿಡುವಂತಾಯಿತು.

ವೆಬ್​ ಸರಣಿಯಾದ ನೈಜ ಕಥೆ

2023ರಲ್ಲಿ ಶಕೀರೆ ಅವರ ಕೊಲೆ ಪ್ರಕರಣ, ಜೀವನ ಆಧಾರಿತ ಕಥೆಯನ್ನು 'ಡ್ಯಾನ್ಸಿಂಗ್ ಆನ್ ದಿ ಗ್ರೇವ್' (Dancing on the Grave) ಎಂಬ ಡಾಕ್ಯುಮೆಂಟ್​​ ಸರಣಿಯಾಗಿ ಅಮೆಜಾನ್​ ಪ್ರೈಮ್​ ವಿಡಿಯೋ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಮಾಡಲಾಯಿತು. ಈ ಕ್ರೂರ ಹತ್ಯಾಕಾಂಡ ಮತ್ತೆ ಜಾಗತಿಕ ಮಟ್ಟದಲ್ಲಿ ಮತ್ತೆ ಚರ್ಚೆಗೆ ಬಂದಿರುವುದು ಗಮನಾರ್ಹ,(ಏಜೆನ್ಸೀಸ್),