ಇಸ್ಲಾಮಾಬಾದ್: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ನೂತನ ದಾಖಲೆ ಬರೆದಿರುವ ರೋಹಿತ್ ಶರ್ಮಾ ಸಾಧನೆಯ ಕುರಿತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಪ್ರತಿಕ್ರಿಯೆ ನೀಡಿದ್ದು, ಹಿಟ್ಮ್ಯಾನ್ ಬ್ಯಾಟಿಂಗ್ ಕೌಶಲ್ಯವನ್ನು 2008 ರಲ್ಲಿಯೇ ಗುರುತಿಸಿದ್ದೆ ಎಂದಿದ್ದಾರೆ.
ರೋಹಿತ್ ಜೊತೆಗಿನ ಐಪಿಎಲ್ ಅನುಭವವನ್ನು ಈ ವೇಳೆ ನೆನಪಿಸಿಕೊಂಡಿರುವ ಆಫ್ರಿದಿ, ಮುಂಬೈನ ಈ ಬ್ಯಾಟ್ಸ್‌ಮನ್ ಶ್ರೇಷ್ಠತೆಗೆ ಅರ್ಹ ವ್ಯಕ್ತಿ ಎನ್ನುವುದನ್ನು ನಾನು ಮೊದಲೇ ಭಾವಿಸಿದ್ದೆ ಎಂದು ಹೇಳಿದರು.
ನವೆಂಬರ್ 30 ರಂದು ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್, ಆಫ್ರಿದಿ ಹೆಸರಲ್ಲಿದ್ದ 351 ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಹಿಟ್ಮ್ಯಾನ್ ರಾಂಚಿ ಅಂಗಳಕ್ಕೆ ಪ್ರವೇಶಿಸುವ ಮುನ್ನ ಅವರಿಗೆ ಅವಶ್ಯವಿದ್ದಿದ್ದು ಕೇವಲ ಮೂರು ಸಿಕ್ಸರ್‌ಗಳು ಮಾತ್ರ. ಮಾರ್ಕೊ ಜಾನ್ಸೆನ್ ಬೌಲಿಂಗ್ನಲ್ಲಿ ತಮ್ಮ ಟ್ರೇಡ್‌ಮಾರ್ಕ್ ಪುಲ್ ಶಾಟ್ ಬಾರಿಸುವ ಮೂಲಕ ಸಿಕ್ಸರ್‌ಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ದಾಖಲೆಗಳಿರುವುದೇ ಮುರಿಯಲಿಕ್ಕೆ...
ನಾನು ಯಾವಾಗಲೂ ಇಷ್ಟಪಡುವ ಆಟಗಾರನೇ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಡೆಕ್ಕನ್ ಚಾರ್ಜರ್ಸ್ ತಂಡದ ಅಭ್ಯಾಸದ ಸಮಯದಲ್ಲಿ, ನಾನು ಅವರ ಬ್ಯಾಟಿಂಗ್ ನೋಡಿದ್ದೇನೆ ಮತ್ತು ಅವರ ಆ ಕ್ಲಾಸ್ ಸ್ಟೈಲ್ ನನ್ನನ್ನು ಅಂದೇ ಪ್ರಭಾವಿಸಿತು. ಮುಂದೊಂದು ದಿನ ರೋಹಿತ್ ಭಾರತಕ್ಕಾಗಿ ಆಡುತ್ತಾರೆ ಎಂದು ನನಗೆ ತಿಳಿದಿತ್ತು, ಮತ್ತು ಅವರು ಈಗ ತಮ್ಮನ್ನು ತಾವು ಕ್ಲಾಸಿ ಬ್ಯಾಟರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಐಪಿಎಲ್‌ನ ಉದ್ಘಾಟನಾ ಆವೃತ್ತಿಯಾದ 2008ರಲ್ಲಿ ರೋಹಿತ್‌ಗೆ ಅಫ್ರಿದಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಸಿಕ್ಕಿತ್ತು. ಹಿಟ್ಮ್ಯಾನ್ ಮತ್ತು ಆಫ್ರಿದಿ ಒಟ್ಟಿಗೆ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಆಡುವ ಮುನ್ನವೇ 2007 ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಭಾರತ ಎಂಎಸ್ ಧೋನಿ ನೇತೃತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕ ಬಾರಿಸಿದ್ದ ರೋಹಿತ್, ಜಯದ ರುವಾರಿಯಾಗಿದ್ದರು.
ರೋಹಿತ್ 271 ಏಕದಿನ ಇನ್ನಿಂಗ್ಸ್‌ಗಳಲ್ಲಿ 355 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಇತ್ತ ಅಫ್ರಿದಿ 369 ಇನ್ನಿಂಗ್ಸ್‌ಗಳಲ್ಲಿ 351 ಸಿಕ್ಸರ್ ಬಾರಿಸಿದ್ದಾರೆ(ಏಜೆನ್ಸೀಸ್).