Shah Rukh Khan Vimal ad notice  
ದೇಶ

'ವಿಮಲ್ ಎಲಾಚಿ' ಜಾಹೀರಾತು ತಂದ ಕಾನೂನು ಸಂಕಷ್ಟ; ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌ಗೆ FDA ನೋಟೀಸ್

ಪ್ರಮುಖ ಮುಖ್ಯಾಂಶಗಳು

  • ನಿಷೇಧಿತ ಪಾನ್ ಮಸಾಲಾಗೆ ಜಾಹೀರಾತು ನೀಡುವ ಮೂಲಕ ಪರೋಕ್ಷವಾಗಿ ಪ್ರಚಾರ
  • ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್​ಗೆ ನೋಟಿಸ್​ ಕೊಟ್ಟಮಹಾರಾಷ್ಟ್ರ ಎಫ್‌ಡಿಎ
  • ಸಾಮಾಜಿಕ ಜಾಲತಾಣಗಳಿಂದ ಜಾಹೀರಾತುಗಳನ್ನು ತೆಗೆದುಹಾಕಲು ನಿರ್ದೇಶನ.
  • 15 ದಿನಗಳೊಳಗೆ ಲಿಖಿತ ವಿವರಣೆ ನೀಡುವಂತೆ ಎಚ್ಚರಿಕೆ ಕೊಟ್ಟ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತ

Shah Rukh Khan Vimal ad notice: 

ನಿಷೇಧಿತ ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ  ಪ್ರಚಾರ ನೀಡಿದ್ದಕ್ಕಾಗಿ ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್​ ನೋಟಿಸ್​ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.


ರಾಜ್ಯದಲ್ಲಿ ನಿಷೇಧಿಸಲ್ಪಟ್ಟಿರುವ 'ಪಾನ್ ಮಸಾಲಾ' ಉತ್ಪನ್ನವನ್ನು ವಿಮಲ್ ಎಲಾಚಿ ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.  ಮೂವರು ಬಾಲಿವುಡ್​​ ನಟರು ಒಟ್ಟಾಗಿ 2024ರಲ್ಲಿ ವಿಮಲ್ ಕಂಪನಿಯ ವಿಮಲ್​ ಎಲಾಚಿ ಕಣ ಕಣದಲ್ಲು ಕೇಸರಿ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. 

ಜಾಹೀರಾತಿಗೆ ಸಂಬಂಧಿಸಿದ ಪೋಸ್ಟ್ ಡಿಲೀಟ್​ಗೆ ಸೂಚನೆ

ಪ್ರಸ್ತುತ ಈ ಪ್ರಚಾರದಿಂದ ಹಿಂದೆ ಸರಿಯಬೇಕು. ಸೋಶಿಯಲ್​ ಮೀಡಿಯಾದಲ್ಲಿ ಹಾಗೂ ವೆಬ್​ಸೈಟ್​ನಿಂದ  ಈ ಜಾಹಿರಾತಿಗೆ ಸಂಬಂಧಿಸಿ ಹಂಚಿಕೊಂಡಿರುವ ಪೋಸ್ಟ್​ಗಳನ್ನು ಡಿಲೀಟ್​ ಮಾಡಲು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ  ಖಡಕ್​ ಸೂಚನೆ ಕೊಟ್ಟಿದೆ

ನೋಟಿಸ್​​ನಲ್ಲಿ ಏನಿದೆ?

ಜೊತೆಗೆ,  ಮೂವರು ನಟರಿಗೂ ನೋಟಿಸ್​ ಜಾರಿ ಮಾಡಿ, ಈ  ಪ್ರಕರಣದಲ್ಲಿ  ನಟರ ವಿರುದ್ಧ ಕಾನೂನು ಕ್ರಮ ಯಾಕೆ ತೆಗೆದುಕೊಳ್ಳಬಾರದು ಹಾಗೂ ಅದಕ್ಕೆ ಸೂಕ್ತ ಕಾರಣಗಳನ್ನು, ತಪ್ಪು ಯಾವ ರೀತಿ ಇಲ್ಲ ಎನ್ನುವುನ್ನು 15 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಸ್ಪಷ್ಟನೆ ಕೊಡಬೇಕು ಎಂದು ಮಹಾರಾಷ್ಟ್ರ ಎಫ್​ಡಿಎ ನೋಟಿಸ್​ನಲ್ಲಿ ಉಲ್ಲೇಖಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಾಥಮಿಕವಾಗಿ  ಜಾಹೀರಾತನ್ನು ಪರಿಶೀಲಿಸಿದಾಗ, ಇದು ಮಹಾರಾಷ್ಟ್ರ ರಾಜ್ಯದಲ್ಲಿ ತಯಾರಿಕೆ, ಸಂಗ್ರಹಣೆ, ಸಾಗಾಟ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿರುವ ಪಾನ್ ಮಸಾಲಾ ಉತ್ಪನ್ನದೊಂದಿಗೆ ಹೆಚ್ಚಾಗಿ ಗುರುತಿಸಲ್ಪಟ್ಟಿರುವ 'ವಿಮಲ್' ಬ್ರ್ಯಾಂಡ್‌ ಅನ್ನು ಪ್ರಚಾರ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಎಫ್​ಡಿಎ ತಿಳಿಸಿದೆ.

ಪುರಾವೆ ಸಲ್ಲಿಸಲು ಸೂಚನೆ

ಜಾಹೀರಾತಿನಲ್ಲಿ ಬಳಸಲಾದ 'ವಿಮಲ್ ಎಲಾಚಿ ಎನ್ನುವ ಪದವು ವಿಮಲ್​ ಪಾನ್​ ಮಸಾಲದ ಜೊತೆ ನಂಟು ಕಲ್ಪಿಸುವ ರೀತಿಯಲ್ಲಿ ಬಳಕೆಯಾಗಿದೆ. ಇದು ಗ್ರಾಹಕರನ್ನು ತಪ್ಪುದಾರಿಗೆಳೆಯಬಹುದು.  ನಿಷೇಧಿತ ಉತ್ಪನ್ನದ ಬ್ರ್ಯಾಂಡ್‌ ಗುರುತನ್ನು ಪರೋಕ್ಷವಾಗಿ ಪ್ರಚಾರ ಮಾಡಬಹುದು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. 
ಗುಟ್ಕಾ ಹಾಗೂ ಇತರೆ ನಿಷೇಧಿತ ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಐಎಎಸ್ ಅಧಿಕಾರಿ ತುಕಾರಾಮ ಮುಂಡೆ ನೇತೃತ್ವದ ಎಫ್‌ಡಿಎ ತಂಡ, ನಟರ ಒಪ್ಪಂದದ ಪೂರ್ಣ ಪ್ರತಿಗಳು, ಪ್ರಚಾರಾಂದೋಲನದ ವಿವರಗಳು, ಹಣಕಾಸು ವ್ಯವಸ್ಥೆಗಳು ಮತ್ತು ಜಾಗರೂಕತೆಯ ಪುರಾವೆಗಳನ್ನು ಸಲ್ಲಿಸುವಂತೆಯೂ ಒತ್ತಾಯಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲೇಖಿಸಿ, ಮಹಾರಾಷ್ಟ್ರದಾದ್ಯಂತ ಪಾನ್ ಮಸಾಲಾದ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಈ ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.
 ಗ್ರಾಹಕ ರಕ್ಷಣಾ ಕಾನೂನುಗಳ ಅಡಿಯಲ್ಲಿ, ದಾರಿತ ತಪ್ಪಿಸುವ ಜಾಹೀರಾತು ಒಪ್ಪಂದಗಳಿಗೆ 10 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದ್ದು, ಪ್ರಚಾರಕರನ್ನು ಮೂರು ವರ್ಷಗಳವರೆಗೆ ಯಾವುದೇ ಉತ್ಪನ್ನಗಳ ಪ್ರಚಾರದಿಂದ ನಿಷೇಧಿಸಬಹುದಾಗಿದೆ.

ಈ ಹಿಂದೆಯೂ ಸಿಕ್ಕಿತ್ತು ನೋಟಿಸ್

ಪಾನ್​ ಮಸಾಲ ಜಾಹೀರಾತು ವಿಚಾರವಾಗಿ ನಟ ಶಾರುಖ್​ ಖಾನ್​​​   ಕಾನೂನು ಸಂಕಷ್ಟ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿಗೆ ಅವರಿಗೆ  ಗ್ರಾಹಕ ವೇದಿಕೆ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರದಿಂದ (FDA) ನೋಟಿಸ್​​ ಕೊಟ್ಟಿತ್ತು. ಸದ್ಯ ಮತ್ತೆ  ಮಹಾರಾಷ್ಟ್ರ  ಸರ್ಕಾರ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ, (ಏಜೆನ್ಸೀಸ್).