ಮಾನಸಿಕ ರೋಗಿಗಳಿಗೆ ನೆರವಾಗುತ್ತಿದ್ದ ಖ್ಯಾತ ಮನೋವೈದ್ಯೆಗೆ ಖಿನ್ನತೆ: 5ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣು! Doctor  
ದೇಶ

ಮಾನಸಿಕ ರೋಗಿಗಳಿಗೆ ನೆರವಾಗುತ್ತಿದ್ದ ಖ್ಯಾತ ಮನೋವೈದ್ಯೆಗೆ ಖಿನ್ನತೆ: 5ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣು! Doctor

ಪ್ರಮುಖ ಮುಖ್ಯಾಂಶಗಳು

  • ಮನೋವೈದ್ಯೆಯಾಗಿ ಇತರರಿಗೆ ನೆರವಾಗುತ್ತಿದ್ದ ಡಾ. ಹೆಮಿಕಾ ಅಗರ್ವಾಲ್ ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಬಿದ್ದು ಸಾವಿಗೆ ಶರಣು
  • ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಿನ್ನೆ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಹೆಮಿಕಾ ಅಗರ್ವಾಲ್​ ದುರ್ಮರಣ
  • ವೈವಾಹಿಕ ಜೀವನ ಮುರಿದುಬಿದ್ದ ನಂತರ ಮಗಳ ಮಾನಸಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು ಎಂದು ಖ್ಯಾತ ಮನೋವೈದ್ಯರಾದ ಮೃತರ ತಂದೆ
  • ವಿಚ್ಛೇದನದ ಬಳಿಕ ಕಳೆದ ಒಂದೂವರೆ ವರ್ಷದಿಂದ ಹೆಮಿಕಾ ಅವರು ತೀವ್ರ ಖಿನ್ನತೆ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು
ಲಖನೌ: ಮಾನಸಿಕ ರೋಗಿಗಳಿಗೆ ನೆರವಾಗುತ್ತಿದ್ದ ವೈದ್ಯೆಯೇ ( Young Doctor ) ತೀವ್ರ ಖಿನ್ನತೆಯಿಂದ ನೊಂದು ಆಕೆಯ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಲಖನೌ ಮೂಲದ 40 ವರ್ಷ ವಯಸ್ಸಿನ ಖ್ಯಾತ ಮನೋವೈದ್ಯೆ ಡಾ. ಹೆಮಿಕಾ ಅಗರ್ವಾಲ್ ಮೃತಪಟ್ಟ ದುರ್ದೈವಿ. ಗಾಜಿಯಾಬಾದ್‌ನ ರಾಜ್ ನಗರ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಆಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಮೃತರ ತಂದೆ ಹಾಗೂ ಗಾಜಿಯಾಬಾದ್‌ನ ಪ್ರಮುಖ ಮನೋವೈದ್ಯರಾದ ಡಾ. ಆರ್. ಚಂದ್ರ, ತಮ್ಮ ಮಗಳ ವೈವಾಹಿಕ ಜೀವನ ಮುರಿದುಬಿದ್ದ ನಂತರ ಆಕೆಯ ಮಾನಸಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು ಎಂದು ತಿಳಿಸಿದ್ದಾರೆ. ವಿಚ್ಛೇದನದ ಬಳಿಕ ಕಳೆದ ಒಂದೂವರೆ ವರ್ಷದಿಂದ ಹೆಮಿಕಾ ಅವರು ತೀವ್ರ ಖಿನ್ನತೆ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಈ ಅಸಹಜ ಸಾವಿನ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ನಿಜವಾದ ಕಾರಣಗಳೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಕುಟುಂಬದ ಸದಸ್ಯರು ಹಾಗೂ ಅಪಾರ್ಟ್‌ಮೆಂಟ್‌ನ ನೆರೆಹೊರೆಯವರಿಂದ ಹೆಚ್ಚಿನ ಮಾಹಿತಿ ಕಲೆಹಾಕಿ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್​).