Weather 
ದೇಶ

ತೀವ್ರ ಶೀತಗಾಳಿ ಮತ್ತು ದಟ್ಟ ಮಂಜು: ಹವಾಮಾನ ಇಲಾಖೆ ಮುನ್ನೆಚ್ಚರಿಕೆ...Weather

ಬೆಂಗಳೂರು: ( Weather) ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಹೆಚ್ಚಾಗಿದ್ದು, ಹಲವೆಡೆ ಮಂಜು ಹಾಗೂ ಒಣ ಹವೆಯ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಇನ್ನೆರಡು ದಿನ ಇದೇ ಹವಾಮಾನವಿರಲಿದ್ದು, ನಂತರ ಲಘು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಬೆಳಗಿನ ಜಾವ ದಟ್ಟವಾದ ಮಂಜು ಕವಿದು ನಡುಕ ಹುಟ್ಟಿಸಿದರೆ, ಮಧ್ಯಾಹ್ನದ ವೇಳೆ ಭಾರೀ ಬಿಸಿಲು ಇರುತ್ತದೆ. ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದೆ. ಜನವರಿ 14ರವರೆಗೂ ಬೆಂಗಳೂರಿನ ವಾತಾವರಣದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಜನವರಿ 9 ಮತ್ತು 10ರಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಭಾರತದಾದ್ಯಂತ ಚಳಿಯ ಅಬ್ಬರ ಜೋರಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ತೀವ್ರ ಶೀತಗಾಳಿ ಮತ್ತು ದಟ್ಟ ಮಂಜು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ ಮತ್ತು ಮತ್ತು ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕನಿಷ್ಠ ತಾಪಮಾನವು ಗಣನೀಯವಾಗಿ ಕುಸಿದಿದೆ.
ಮುಂಜಾನೆ ಮತ್ತು ರಾತ್ರಿಯ ಸಮಯದಲ್ಲಿ ದಟ್ಟವಾದ ಮಂಜು ಕವಿಯಲಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಲಿದೆ. ವಿಶೇಷವಾಗಿ ಪಂಜಾಬ್, ಚಂಡೀಗಢ ಮತ್ತು ದೆಹಲಿಯಲ್ಲಿ ಗೋಚರತೆ ಬಹಳ ಕಡಿಮೆ ಇರಲಿದೆ. ಹವಾಮಾನ ವೈಪರೀತ್ಯದಿಂದಾಗಿ ದೆಹಲಿಗೆ ಬರುವ ಮತ್ತು ಹೋಗುವ ಹಲವು ರೈಲುಗಳು ಹಾಗೂ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಬಹುದು. ದಟ್ಟ ಮಂಜಿನ ಕಾರಣದಿಂದಾಗಿ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಉತ್ತರದಲ್ಲಿ ಚಳಿ ಹೆಚ್ಚಾಗಿದ್ದರೆ, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ (ತಮಿಳುನಾಡು, ಕೇರಳ) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೀವ್ರ ಚಳಿ ಹಿನ್ನೆಲೆ ಜಾಗೃತಿ ಅಗತ್ಯ:

ತೀವ್ರ ಚಳಿಯ ಹಿನ್ನೆಲೆಯಲ್ಲಿ ವೃದ್ಧರು ಮತ್ತು ಮಕ್ಕಳು ಜಾಗರೂಕರಾಗಿರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸಮತೋಲನ ಆಹಾರ ಸೇವನೆಯೊಂದಿಗೆ ಬೆಚ್ಚನೆಯ ಉಡುಪು ಧರಿಸುವಂತೆ ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾರೆ.
ಮುಂಜಾನೆ ಮತ್ತು ತಡರಾತ್ರಿಯ ಸಮಯದಲ್ಲಿ ಗೋಚರತೆಯ ಅಡಚಣೆಗಳು ಕಂಡುಬರುವ ಸಾಧ್ಯತೆಯಿದೆ, ಕೆಲವು ಸ್ಥಳಗಳಲ್ಲಿ ಹಗಲಿನ ವೇಳೆಯಲ್ಲಿ ಮಂಜು ಮುಂದುವರಿಯುತ್ತದೆ.