ಅರುಣಾಚಲ ಪ್ರದೇಶದಲ್ಲಿ ಮಳೆ ಅವಾಂತರ 
ದೇಶ

ಅರುಣಾಚಲದಲ್ಲಿ ವರುಣನ ಅವಾಂತರ! ಭೂಕುಸಿತಕ್ಕೆ 4 ಬಲಿ; 5 ಮಂದಿ ನಾಪತ್ತೆ | Floods in Arunachal Pradesh

ಪ್ರಮುಖ ಮುಖ್ಯಾಂಶಗಳು

  • ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆ ತಂದ ಅವಾಂತರ
  • ಭೂಕುಸಿತಕ್ಕೆ ನಾಲ್ವರು ಬಲಿ, ಸೇನೆಯ ಐವರು ನಾಪತ್ತೆ
  • ಹಠಾತ್ ಪ್ರವಾಹಕ್ಕೆ ಕೊಚ್ಚಿಹೋದ 2 ಸೇನಾ ಶೆಲ್ಟರ್‌ಗಳು
Arunachal Floods: ಅರುಣಾಚಲ ಪ್ರದೇಶದಲ್ಲಿ ಮಳೆ ಅವಾಂತರದಿಂದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಾಗಿದ್ದು, ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ನಾಲ್ವರು ಬಲಿಯಾಗಿದ್ದಾರೆ. ಮತ್ತೊಂದೆಡೆ, ಸೇನೆಯ ಐವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ದಿಬಾಂಗ್ ವ್ಯಾಲಿ ಜಿಲ್ಲೆಯ ಪಾಸು ಪಾನಿ ಸೇನಾ ಶಿಬಿರದಲ್ಲಿದ್ದ 5ನೇ ಗ್ರೆನೇಡಿಯರ್‌ನ ಎರಡು ಶೆಲ್ಟರ್‌ಗಳು ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಕೊಚ್ಚಿಹೋಗಿದ್ದವು. ಈ ಘಟನೆಯಲ್ಲಿ ಏಳು ಸೇನಾ ಸಿಬ್ಬಂದಿ ಪ್ರವಾಹಕ್ಕೆ ಸಿಲುಕಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರನ್ನು ಹವಾಲ್ದಾರ್ ಉಪೇಂದ್ರ, ಕುಂದನ್, ವಿನೋದ್, ಆದಿತ್ಯ ಮತ್ತು ಸಮುಂಡಾ ಎಂದು ಗುರುತಿಸಲಾಗಿದೆ. ಕಾಣೆಯಾದವರಿಗಾಗಿ ಸೇನೆಯ ಎರಡು ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಭೂಕುಸಿತಕ್ಕೆ ನಾಲ್ವರು ಬಲಿ

ಇನ್ನು, ಮೇಲ್ದಿ ಸುಬನ್ಸಿರಿ ಜಿಲ್ಲೆಯ ಕಿಯೋಜರಿಂಗ್-ಬ್ಯಾಚಿಂಗ್ ರಸ್ತೆ ನಿರ್ಮಾಣ ಸ್ಥಳದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಮಣ್ಣಿನಡಿ ಹಲವರು ಸಿಲುಕಿದ್ದು, ತಾಡು ಬಾಕಿ, ತಾಜಿ ರೈ, ಮಾರ್ಕೋಶ್ ಬಸೂಮತಾರಿ ಮತ್ತು ಬಾಬುಲ್ ಅಲಿ ಎಂಬುವವರು ಮೃತಪಟ್ಟಿದ್ದಾರೆ. ಬಾಬುಲ್ ಅಲಿ ಮೃತದೇಹ ಸಿಕ್ಕಿದ್ದು, ಉಳಿದವರಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

ಸಂತ್ರಸ್ತರ ನೆರವಿಗೆ ಧಾವಿಸಿದ ಪೊಲೀಸರು

ಅರುಣಾಚಲ ಪ್ರದೇಶದಲ್ಲಿ ಮಳೆ ದುರಂತಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ಪೊಲೀಸರು ಧಾವಿಸಿದ್ದಾರೆ. ಪೊಲೀಸರ ಜತೆಗೆ ಐಟಿಬಿಪಿ, ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್, ಸ್ಥಳೀಯರು ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕೂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ,(ಏಜೆನ್ಸೀಸ್​).