ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಸೊಸೆ ಶರ್ಮಿಷ್ಠ ಭೌಮಿಕ್ ರಾಯ್ ನಾಪತ್ತೆ
- ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ
- ಜಲ ಪ್ರಳಯದಲ್ಲಿ ಕಣ್ಮರೆಯಾದ ಮಾಜಿ ಕೇಂದ್ರ ಸಚಿವರ ಸೊಸೆ
- ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಸೊಸೆ ಶರ್ಮಿಷ್ಠ ಭೌಮಿಕ್ ರಾಯ್ ನಾಪತ್ತೆ
ಕೊಲ್ಕತ: ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಭಾರಿ ಜಲಪ್ರಳಯ ಸಂಭವಿಸಿದ್ದು, ಈಗಾಗಲೇ ಸತ್ತವರ ಸಂಖ್ಯೆ 400 ರ ಗಡಿಯನ್ನು ದಾಡಿಟ್ಟು, ಸಾವಿರಾರು ಜನ ಕಣ್ಮರೆಯಾಗಿದ್ದಾರೆಂದು ವರದಿಯಾಗಿದೆ.
ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ (Sarmistha Bhowmik Roy) ಕೂಡ ಸೇರಿದ್ದಾರೆಂದು ಹೇಳಲಾಗುತ್ತಿದೆ.
ಕೈಲಾಸ ನೋಡಲು ಹೋಗಿದ್ದ ರಾಯ್!
ಮಾಹಿತಿ ಪ್ರಕಾರ, ಶರ್ಮಿಷ್ಠ ರಾಯ್ ಇತರೆ 32 ಜನರೊಂದಿಗೆ ನೇಪಾಳದಲ್ಲಿರುವ ಕೈಲಾಸ ಪರ್ವತ, ಮಾನಸ ಸರೋವರವನ್ನು ನೋಡಲು ಕೊಲ್ಕತಾದ ಟ್ರಾವೆಲ್ ಏಜೆಂನ್ಸಿ ಜೊತೆ ಹೋಗಿದ್ದಾಗಿ ತಿಳಿದು ಬಂದಿದೆ. ಆಗಸ್ಟ್ 21 ರಂದು ಈ ಗುಂಪು ನೇಪಾಳವನ್ನು ತಲುಪಿದೆ. ಆದರೆ ಆಗಸ್ಟ್ 25 ರಂದು ಪ್ರಳಯ ಸಂಭವಿಸಿದ್ದು, ಆ ದಿನದಿಂದ ಶರ್ಮಿಷ್ಠ ರಾಯ್, ಮನೆಯವರೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕಾಣೆಯಾದವರಲ್ಲಿ 290 ಭಾರತೀಯರು
ಈ ದುರಂತವು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ನೇಪಾಳದಲ್ಲಿ ಸಿಲುಕಿರುವ ಸುಮಾರು 290 ಭಾರತೀಯ ಪ್ರಜೆಗಳ ಜೊತೆ ಸಂಪರ್ಕ ಕಡಿತಗೊಂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿವಿಧ ರಾಜ್ಯಗಳಿಂದ ಕೆಲಸಕ್ಕಾಗಿ ತೆರಳಿದ್ದ ಜಲವಿದ್ಯುತ್ ಕಾರ್ಮಿಕರು ಮತ್ತು ಕೈಲಾಸ ಮಾನಸ ಸರೋವರ ಹಾಗೂ ಗೋಸೈನ್‌ಕುಂಡದ ಕಡೆಗೆ ತೆರಳುತ್ತಿದ್ದ ಪ್ರವಾಸಿಗರು ಈ ಪ್ರವಾಹದಲ್ಲಿ ಸಿಲುಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ, ಭಾರತದ ಸಂಪೂರ್ಣ ಮಾನವೀಯ ನೆರವಿನ ಭರವಸೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಸಿಲುಕಿರುವ ಭಾರತೀಯರನ್ನು ರಕ್ಷಿಸಲು ತುರ್ತು ಪ್ರಯತ್ನಗಳನ್ನು ಆರಂಭಿಸಲಾಗಿದೆ.
ನೇಪಾಳಕ್ಕೆ ಭಾರತದಿಂದ 47.5 ಟನ್ ಪರಿಹಾರ ಸಾಮಗ್ರಿ
ಸಂಕಷ್ಟದಲ್ಲಿರುವ ನೆರೆಯ ರಾಷ್ಟ್ರಕ್ಕೆ ನೆರವಾಗಲು ಭಾರತ ಮುಂದಾಗಿದ್ದು, ಇದುವರೆಗೆ ಒಟ್ಟು 47.5 ಟನ್ ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಮಿಲಿಟರಿ ವಿಮಾನಗಳ ಮೂಲಕ ಕಳುಹಿಸಿಕೊಟ್ಟಿದೆ. ಇದರಲ್ಲಿ ತಾತ್ಕಾಲಿಕ ಆಶ್ರಯ ತಾಣಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜೀವ ರಕ್ಷಕ ಔಷಧಿಗಳು ಮತ್ತು ಆಹಾರದ ಪ್ಯಾಕೆಟ್‌ಗಳು ಸೇರಿವೆ, (ಏಜನ್ಸೀಸ್).