Raghav Chadha | ಎಎಪಿ ಸಂಸದ ರಾಘವ್ ಚಡ್ಡಾ
ದೆಹಲಿ: ಆಮ್ ಆದ್ಮಿ ಪಾರ್ಟಿಗೆ ಸದ್ಯಕ್ಕೆ ಏಕೈಕ ಆಶಾಕಿರಣವಾಗಿರುವ ಪಂಜಾಬ್‌ನಲ್ಲಿ ಆಪರೇಷನ್ ಕಮಲ ಭಾರಿ ಬಿರುಗಾಳಿ ಎಬ್ಬಿಸಿದ್ದು, ಅರವಿಂದ್ ಕೇಜ್ರಿವಾಲ್ರ ಅತ್ಯಂತ ಆಪ್ತ ರಾಘವ್ ಚಡ್ಡಾ (Raghav Chadha) ಮತ್ತು ಚುನಾವಣಾ ತಂತ್ರಜ್ಞ ಸಂದೀಪ್ ಪಾಠಕ್ ಸೇರಿದಂತೆ ಏಳು ಸಂಸದರು ಏಕಾಏಕಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಎಎಪಿಗೆ ಮರ್ಮಾಘಾತ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಬಹುಮತ ಸಾಧಿಸುವ ಬಿಜೆಪಿ ಆಸೆಗೆ ಈ ಪಕ್ಷಾಂತರ ಬೂಸ್ಟರ್ ಡೋಸ್.
ಈ ರಾಜಕೀಯ ಧ್ರುವೀಕರಣ ಕೇವಲ ಒಂದೇ ದಿನದಲ್ಲಿ ನಡೆದ ಆಕಸ್ಮಿಕ ಬೆಳವಣಿಗೆಯಲ್ಲ. ಇದರ ಹಿಂದೆ ಸುಮಾರು 20 ದಿನಗಳ ಕಾಲ ಅತ್ಯಂತ ವ್ಯವಸ್ಥಿತವಾದ ಲೆಕ್ಕಾಚಾರ, ನಿರಂತರ ಪರಿಶ್ರಮ ಮತ್ತು ಚಾಣಾಕ್ಷ ತಂತ್ರಗಾರಿಕೆ ಅಡಗಿದೆ. ಸಂಸದರ ಪ್ರತಿ ನಡೆಯನ್ನು ಗಮನಿಸಿ, ಅಳೆದು ತೂಗಿ ನಡೆಸಿದ ಈ ಗುಪ್ತ ಕಾರ್ಯಾಚರಣೆಯು ಅಂತಿಮವಾಗಿ ಎಎಪಿ ನಾಯಕತ್ವಕ್ಕೆ ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಹೊಡೆತ ನೀಡಿದೆ. ಅದಕ್ಕೆ ಸಂಬಂದಿಸಿದ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
ಏಪ್ರಿಲ್ 22, 2026 - ನವದೆಹಲಿ
ಅರವಿಂದ್ ಕೇಜ್ರಿವಾಲ್ ಅಷ್ಟು ಸುಲಭವಾಗಿ ಭಯಭೀತರಾಗುವ ವ್ಯಕ್ತಿಯಲ್ಲ. ಅವರು ಜೈಲುವಾಸ ಅನುಭವಿಸಿ ಹೊರಬಂದವರು, ಮದ್ಯ ಹಗರಣದ ಸುಳಿಯಿಂದ ಬದುಕುಳಿದವರು ಮತ್ತು ಚುನಾವಣಾ ಸೋಲಿನ ನಂತರವೂ ಪಕ್ಷವನ್ನು ಮರುನಿರ್ಮಾಣ ಮಾಡಿದವರು. ಆದರೆ, ಏಪ್ರಿಲ್ 22ರ ಬುಧವಾರದ ಬೆಳಿಗ್ಗೆ ಸಂಸತ್ತಿನ ಕಾರಿಡಾರ್‌ಗಳಿಂದ ಕೇಳಿಬಂದ ಸುದ್ದಿ ಮಾತ್ರ ಅವರಲ್ಲಿ ಮೊದಲ ಬಾರಿಗೆ ನಡುಕ ಹುಟ್ಟಿಸಿರಲೇಬೇಕು. ತಕ್ಷಣವೇ ತಮ್ಮ ಸಂಸದರಿಗೆ ಒಂದೊಂದಾಗಿ ಕರೆ ಮಾಡಲು ಪ್ರಾರಂಭಿಸಿದರು. ಕೆಲವರು ಉತ್ತರಿಸಿದರೆ, ಇನ್ನು ಕೆಲವರು ಮೌನಕ್ಕೆ ಶರಣಾದರು. ಆ ಮೌನವೇ ಕೇಜ್ರಿವಾಲ್ರ ಅನುಮಾನವನ್ನು ಅಕ್ಷರಶಃ ನಿಜ ಮಾಡಿತ್ತು.
ಬದಲಾದ ಲೆಕ್ಕಾಚಾರ
ಬುಧವಾರ ಸಂಜೆಯ ವೇಳೆಗೆ ಕೇಜ್ರಿವಾಲ್ಗೆ ಲಭ್ಯವಾಗಿದ್ದ ಮಾಹಿತಿ ಗುರುವಾರದ ಹೊತ್ತಿಗೆ ಖಚಿತವಾಯಿತು. ಎಎಪಿಯ ಹತ್ತು ರಾಜ್ಯಸಭಾ ಸಂಸದರ ಪೈಕಿ ಏಳು ಮಂದಿ ಈಗಾಗಲೇ ಪಕ್ಷ ತೊರೆಯಲು ನಿರ್ಧರಿಸಿದ್ದರು. ಗೃಹ ಸಚಿವಾಲಯದ ಪ್ರಕಾರ, ಏಪ್ರಿಲ್ 27ರ ಸೋಮವಾರದಂದು ಈ ಸಂಸದರು ಗೃಹ ಸಚಿವರನ್ನು ಭೇಟಿ ಮಾಡಿ, ಮಂಗಳವಾರ ಅಧಿಕೃತವಾಗಿ ಬಿಜೆಪಿಗೆ ಸೇರಬೇಕಿತ್ತು. ಇದು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಉಡುಗೊರೆಯಾಗಬೇಕಿತ್ತು. ಆದರೆ ಕೇಜ್ರಿವಾಲ್ ಅವರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ತನ್ನ ಕಾರ್ಯತಂತ್ರ ಬದಲಿಸಿತು. ಸೋಮವಾರದವರೆಗೆ ಕಾಯುವ ಬದಲು ಶುಕ್ರವಾರವೇ (ಏಪ್ರಿಲ್ 24) ಕಾರ್ಯಚರಣೆ ಪೂರ್ಣಗೊಳಿಸಲು ನಿರ್ಧರಿಸಲಾಯಿತು.
ಸೇತುವೆ ನಿರ್ಮಿಸಿದ ರಾಘವ್ ಚಡ್ಡಾ
ಈ ಇಡೀ ಕಾರ್ಯಾಚರಣೆಯ ಫೀಲ್ಡ್ ಕಮಾಂಡರ್ ಆಗಿ ನಿಂತವರು ಕೇಜ್ರಿವಾಲ್ರ ನೀಲಿಗಣ್ಣಿನ ಹುಡುಗ ರಾಘವ್ ಚಡ್ಡಾ. ಅಬಕಾರಿ ಹಗರಣದ ತನಿಖೆ ಚುರುಕುಗೊಂಡಾಗ ಚಡ್ಡಾ ಲಂಡನ್‌ಗೆ ತೆರಳಿದ್ದರು. ಅದು ಕೇವಲ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲ, ಬದಲಾಗಿ ಬಿಜೆಪಿಯೊಂದಿಗಿನ ಗುಪ್ತ ಮಾತುಕತೆಯ ಸಭೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಅವರು ಅಲ್ಲಿಂದ ಮರಳಿದಾಗ ಹಳೆಯ ಆಕ್ರಮಣಕಾರಿ ಚಡ್ಡಾ ಬದಲಾಗಿ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಇದರೊಂದಿಗೆ ಸದ್ದಿಲ್ಲದೆ ಆರು ಸಂಸದರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಹರ್ಭಜನ್ ಸಿಂಗ್ ಕಥೆ..
ಮಾಜಿ ಕ್ರಿಕೆಟಿಗ ಮತ್ತು ಸಂಸದ ಹರ್ಭಜನ್ ಸಿಂಗ್ ಪಕ್ಷಾಂತರ ಅನೇಕರಿಗೆ ಅಚ್ಚರಿ ಮೂಡಿಸಲಿಲ್ಲ. ಬಜ್ಜಿ ಅವರ ನಿಷ್ಠೆ ಕೇಜ್ರಿವಾಲ್ ಅವರಿಗಿಂತ ಹೆಚ್ಚಾಗಿ ಅಧಿಕಾರದ ಕೇಂದ್ರಗಳ ಮೇಲಿತ್ತು, ಇದು ಉಪರಾಷ್ಟ್ರಪತಿ ಚುನಾವಣೆ ವೇಳೆಯೆ ಸ್ಪಷ್ಟವಾಗಿತ್ತು ಎನ್ನಲಾಗಿದೆ. ಇವರೊಂದಿಗೆ ಉದ್ಯಮಿಗಳಾದ ರಾಜಿಂದರ್ ಗುಪ್ತಾ (ಟ್ರೈಡೆಂಟ್ ಗ್ರೂಪ್), ವಿಕ್ರಮಜಿತ್ ಸಾಹ್ನಿ ಮತ್ತು ಅಶೋಕ್ ಮಿತ್ತಲ್ (ಎಲ್‌ಪಿಯು ಕುಲಪತಿ) ಕೂಡ ಬಿಜೆಪಿ ಸೇರಿದರು. ಅಶೋಕ್ ಮಿತ್ತಲ್ ಮೇಲೆ ಏಪ್ರಿಲ್ 15ರಂದು ಇಡಿ ದಾಳಿ ನಡೆದಿದ್ದು, ಇದು ಕೂಡ ಈ ಕಾರ್ಯಾಚರಣೆಯ ಒಂದು ಭಾಗವಾಗಿತ್ತು ಎನ್ನಲಾಗಿದೆ.
ಆಪ್ನ ಅಮಿತ್ ಷಾ ಈ ಸಂದೀಪ್ ಪಾಠಕ್
ಎಲ್ಲಕ್ಕಿಂತ ಹೆಚ್ಚಾಗಿ ಕೇಜ್ರಿವಾಲ್ರನ್ನು ಕುಸಿಯುವಂತೆ ಮಾಡಿದ್ದು ಸಂದೀಪ್ ಪಾಠಕ್ ನಿರ್ಧಾರ. ಪಂಜಾಬ್‌ನಲ್ಲಿ ಎಎಪಿಯನ್ನು ಶೂನ್ಯದಿಂದ ಕಟ್ಟಿ, 92 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ರೂವಾರಿ ಪಾಠಕ್. ಶುಕ್ರವಾರ ಬೆಳಿಗ್ಗೆಯವರೆಗೂ ಕೇಜ್ರಿವಾಲ್ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ ತಾವು ನಿಷ್ಠರಾಗಿದ್ದೇವೆ ಎಂಬ ಭರವಸೆ ನೀಡಿದ್ದ ಪಾಠಕ್, ಮಧ್ಯಾಹ್ನ 11 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷರಾದರು. ಇದು ಕೇಜ್ರಿವಾಲ್ ಅವರಿಗೆ ನೀಡಿದ ಅತಿದೊಡ್ಡ ಆಘಾತವಾಗಿತ್ತು.
ಬಿಜೆಪಿಗೆ ದಕ್ಕಿದ್ದೇನು..?
ಈ ಏಳು ಸಂಸದರ ಸೇರ್ಪಡೆಯಿಂದ ಬಿಜೆಪಿಗೆ ಪಂಜಾಬ್‌ನಲ್ಲಿ ತಕ್ಷಣದ ಚುನಾವಣಾ ಲಾಭವಾಗದಿರಬಹುದು. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 106ರಿಂದ 113ಕ್ಕೆ ಏರಿಕೆಯಾಗಿದೆ. ಎನ್‌ಡಿಎ ಮೈತ್ರಿಕೂಟವು ಮೊದಲ ಬಾರಿಗೆ ಮೇಲ್ಮನೆಯಲ್ಲಿ ಸರಳ ಬಹುಮತವನ್ನು ದಾಟಿದೆ. ಇದರಿಂದಾಗಿ ಒಂದು ರಾಷ್ಟ್ರ ಒಂದು ಚುನಾವಣೆಯಂತಹ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಯಾವುದೇ ಅಡೆತಡೆಯಿಲ್ಲದೆ ಜಾರಿಗೆ ತರುವ ಶಕ್ತಿ ಮೋದಿಯವರ ಮೂರನೇ ಅವಧಿಯ ಸರ್ಕಾರಕ್ಕೆ ಸಿಕ್ಕಂತಾಗಿದೆ.
ಏಪ್ರಿಲ್ 24, 2026ರ ಸಂಜೆ
ಶುಕ್ರವಾರ ಸೂರ್ಯಾಸ್ತದ ವೇಳೆಗೆ ಆಪ್ ರಾಜ್ಯಸಭೆಯಲ್ಲಿ ಕೇವಲ ಮೂರು ಸಂಸದರಿಗೆ (ಸಂಜಯ್ ಸಿಂಗ್, ಎನ್ ಡಿ ಗುಪ್ತಾ, ಬಲ್ಬೀರ್ ಸಿಂಗ್ ಸೀಚೆವಾಲ್) ಸೀಮಿತವಾಯಿತು. ಬಿಜೆಪಿ ಮತ್ತೊಮ್ಮೆ ಪಂಜಾಬಿಗಳನ್ನು ತುಳಿದಿದೆ ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು. ಇತ್ತ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆಮಾಡಿದ್ದರೆ, ಅತ್ತ ಮೋದಿಯವರ ಮೂರನೇ ಅವಧಿಯ ಶಾಸಕಾಂಗ ಹಾದಿ ಸುಗಮವಾಯಿತು. ರಾಜ್ಯಸಭೆ ಎಂಬ ಪ್ರತಿರೋಧದ ಕೊನೆಯ ಗೋಡೆಯೂ ಈ ದಿನ ಕುಸಿದುಬಿದ್ದಿತು(ಏಜೆನ್ಸೀಸ್).