ನವದೆಹಲಿ: ಸುಪ್ರೀಂಕೋರ್ಟ್ನಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ ಅವರಿಗೆ(Uddhav Thackeray) ಮತ್ತೊಮ್ಮೆ ಹಿನ್ನಡೆಯಾಗಿದ್ದು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ತನ್ನ ಆರು ಲೋಕಸಭಾ ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದು, ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ವಿಲೀನಗೊಂಡ ಆರು ಸಂಸದರಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ತಮ್ಮ ಪ್ರತಿ-ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು.
ಶಿವಸೇನಾ(ಯುಬಿಟಿ) ಬಣದಿಂದ ಸಿಡಿದೆದ್ದು ಹೊರಗೆ ಬಂದಿದ್ದ ಆರು ಸಂಸದರು ತಾವು 2/3 ಬಹುಮತವಿದ್ದು, ಶಿಂಧೆ ಸೇನಾದಲ್ಲಿ ವಿಲೀನಗೊಳ್ಳುವುದಾಗಿ ಸ್ಪೀಕರ್ಗೆ ಪತ್ರ ಕೊಟ್ಟಿದ್ದರು. ಈ ಅರ್ಜಿಯನ್ನು ಜುಲೈ 18ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅನುಮೋದಿಸಿದ್ದರು. ಸ್ಪೀಕರ್ ಅವರ ನಿರ್ಧಾರ ಪ್ರಶ್ನಿಸಿ ಉದ್ದವ್ ಬಣ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಶಿವಸೇನೆ (ಯುಬಿಟಿ) ಪರ ವಾದಿಸಿದ ಹಿರಿಯ ವಕೀಲ ದೇವದತ್ತ ಕಾಮತ್, ಸ್ಪೀಕರ್ ಅವರ ನಿರ್ಧಾರವು ಸಾಂವಿಧಾನಿಕ ನೈತಿಕತೆ ಮತ್ತು ಔಚಿತ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಈ ಆರು ಜನ ಸಂಸದರು ಶಿವಸೇನೆ(ಯುಬಿಟಿ) ಚಿಹ್ನೆಯಡಿಯಲ್ಲೇ ಆಯ್ಕೆಯಾಗಿದ್ದಾರೆ. ಮತ್ತು ಅವರ ವಿರುದ್ಧ ಯಾವುದೇ ಅನರ್ಹತಾ ಪ್ರಕ್ರಿಯೆಗಳು ಬಾಕಿ ಇಲ್ಲದಿರುವುದರಿಂದ, ವಿಲೀನವನ್ನು ಮಾನ್ಯ ಮಾಡುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದರು.
ಮುಂದುವರೆ ಆರು ಸಂಸದರ ವಿಲೀನದ ಸುತ್ತೋಲೆಗೆ ಜಂಟಿ ಕಾರ್ಯದರ್ಶಿಯೊಬ್ಬರು ಸಹಿ ಮಾಡಿದ್ದಾರೆ. ಮತ್ತು ವಿಲೀನಕ್ಕೆ ಅನುಮೋದನೆ ನೀಡಿ ಸ್ಪೀಕರ್ ಯಾವುದೇ ಅಧಿಕೃತ ಆದೇಶ ಹೊರಡಿಸಿದ್ದಾರೆಯೇ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಮೂಲ ರಾಜಕೀಯ ಪಕ್ಷದಿಂದ ಯಾವುದೇ ವಾಸ್ತವಿಕ ವಿಲೀನ ನಡೆಯದೇ, ಈ ಆರು ಜನ ಸಂಸದರು ಏಕಪಕ್ಷೀಯವಾಗಿ ಎದುರಾಳಿ ಪಕ್ಷದೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿಕೊಂಡಿದ್ದಾರೆ. ಇಂತಹ ನಡೆಯನ್ನು ಕಾನೂನಿನಡಿಯಲ್ಲಿ ಮಾನ್ಯವಾದ ವಿಲೀನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಬಳಿಕ ಎಲ್ಲಾ ವಾದಗಳನ್ನು ಆಲಿಸಿದ ಪೀಠವು, ಎರಡೂ ವಾರಗಳ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿ, ವಿಚಾರಣೆಯನ್ನು ಮುಂದೂಡಿದೆ (ಏಜೆನ್ಸೀಸ್).