MK Stalin | ಮಾಜಿ ಸಿಎಂ ಸ್ಟಾಲಿನ್‌ಗೆ ಬಿಗ್ ಶಾಕ್
ಚೆನ್ನೈ: ಸುಮಾರು ನಾಲ್ಕು ತಿಂಗಳ ಹಿಂದೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ ಎಸ್ ಬಾಬು ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ( MK Stalin) ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಗುರುವಾರ ದೊಡ್ಡ ಹಿನ್ನಡೆಯುಂಟಾಗಿದೆ. ಕೊಳತ್ತೂರು ಕ್ಷೇತ್ರದಲ್ಲಿ ಶೇ.100 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು, ವಿ ಎಸ್ ಬಾಬು ಆಯ್ಕೆಯನ್ನು ರದ್ದುಗೊಳಿಸಬೇಕು ಹಾಗೂ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಕೋರಿ ಸ್ಟಾಲಿನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ ಎಸ್ ಬಾಬು ಅವರು 82,997 ಮತಗಳನ್ನು ಪಡೆದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಬಾಬು ಅವರು 8,795 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2011ರಲ್ಲಿ ಕ್ಷೇತ್ರ ರಚನೆಯಾದಂದಿನಿಂದ ಸತತ ಮೂರು ಚುನಾವಣೆಗಳಲ್ಲಿ ಜಯಗಳಿಸಿದ್ದ ಸ್ಟಾಲಿನ್, ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದರು.
ಸ್ಟಾಲಿನ್ ಅವರ ರಿಟ್ ಅರ್ಜಿಯ ಅರ್ಹತೆಯನ್ನು ಪ್ರಶ್ನಿಸಿದ್ದ ಚುನಾವಣಾ ಆಯೋಗವು, ಚುನಾವಣಾ ಫಲಿತಾಂಶವನ್ನು ಜನಪ್ರತಿನಿಧಿ ಕಾಯ್ದೆಯಡಿಯ ಚುನಾವಣಾ ಅರ್ಜಿಯ ಮೂಲಕವೇ ಪ್ರಶ್ನಿಸಬೇಕು ಮತ್ತು ನಿಗದಿತ ಕಾಲಮಿತಿಯೊಳಗೆ ಆ ಮಾರ್ಗವನ್ನೇ ಅನುಸರಿಸಬೇಕಿತ್ತು ಎಂದು ವಾದಿಸಿತ್ತು.
ಆದರೆ ಸ್ಟಾಲಿನ್ ಪರ ವಕೀಲರು, ಮೇ 4 ರಂದು ಫಲಿತಾಂಶ ಪ್ರಕಟವಾದ ತಕ್ಷಣ (ಮೇ 7 ರಂದು) 14 ಇವಿಎಂ ಸೆಟ್‌ಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರೂ, ಚುನಾವಣಾ ಆಯೋಗವು ಪರಿಶೀಲನೆ ನಡೆಸಲು ಜುಲೈ 29 ರವರೆಗೆ ವಿಳಂಬ ಮಾಡಿತು. ಈ ವಿಳಂಬದ ಕಾರಣದಿಂದಾಗಿ ಕಾನೂನಾತ್ಮಕ ಕಾಲಮಿತಿಯೊಳಗೆ ಚುನಾವಣಾ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಹಾಗೂ ಇವಿಎಂ ಪರಿಶೀಲನೆ ವೇಳೆ ತಾಂತ್ರಿಕ ದೋಷಗಳು ಮತ್ತು ಅಕ್ರಮಗಳು ಕಂಡುಬಂದಿದ್ದರೂ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಯಾಂತ್ರಿಕವಾಗಿ ಆದೇಶ ಹೊರಡಿಸಿದ್ದಾರೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದಾಗ್ಯೂ, ಈ ವಾದವನ್ನು ಪುರಸ್ಕರಿಸದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಚುನಾವಣಾ ಫಲಿತಾಂಶವನ್ನು ರಿಟ್ ಅರ್ಜಿಯ ಮೂಲಕ ಪ್ರಶ್ನಿಸಲು ಬರುವುದಿಲ್ಲ ಹಾಗೂ ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.
ಇನ್ನೊಂದೆಡೆ, ತಮ್ಮ ಗೆಲುವಿನ ಬಗ್ಗೆ ಮಾತನಾಡಿದ್ದ ವಿ.ಎಸ್. ಬಾಬು, ನಮ್ಮ ನಾಯಕ ವಿಜಯ್ ಅವರ ಮುಖವೇ ತಮಿಳುನಾಡಿನ ಮುಖ. ಜನರಿಗೆ ಬದಲಾವಣೆ ಬೇಕಿತ್ತು, ಅದನ್ನು ಮಾಡಿ ತೋರಿಸಿದ್ದಾರೆ. ನಾನು ಅದೇ ಪ್ರದೇಶದಲ್ಲಿ ಹುಟ್ಟಿ ಬೆಳೆದವನಾಗಿದ್ದು, ಸ್ಥಳೀಯ ಜನರ ನಾಡಿಮಿಡಿತ ಗೊತ್ತಿದೆ. ಅವರು ಸಿಎಂ ಆಗಿರಲಿ ಅಥವಾ ಶಾಸಕರಾಗಿರಲಿ, ಮೊದಲು ಸ್ಥಳೀಯ ಜನರೊಂದಿಗೆ ಬೆರೆಯಬೇಕು ಎಂದು ಪ್ರತಿಕ್ರಿಯಿಸಿದ್ದರು(ಏಜೆನ್ಸೀಸ್).