Senthil Balaji | ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ 
ದೇಶ

ಸೆಂಥಿಲ್ ಬಾಲಾಜಿ ಕ್ಷೇತ್ರ ಬದಲಾವಣೆ ಬೆನ್ನಲ್ಲೇ ಸಂಚಲನ...ಇದು ಡಿಎಂಕೆಯ ಮಾಸ್ಟರ್‌ಸ್ಟ್ರೋಕ್ ಅಥವಾ ಸೋಲಿನ ಭಯವೋ..? | Senthil Balaji

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಡಿಎಂಕೆ ಪ್ರಬಲ ನಾಯಕ ಮತ್ತು ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಕರೂರ್ ಬಿಟ್ಟು, ಈ ಬಾರಿ ಪಶ್ಚಿಮ ತಮಿಳುನಾಡಿನ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಇದನ್ನು ಡಿಎಂಕೆಯ ಕಾರ್ಯತಂತ್ರದ ನಡೆ ಎಂದು ಕೆಲವರು ಕರೆದರೆ, ಎದುರಾಳಿಗಳು ಇದನ್ನು ಆಡಳಿತ ವಿರೋಧಿ ಅಲೆಯ ಭಯದಿಂದ ಮಾಡಲಾದ ಪಲಾಯನ ಎಂದು ಟೀಕಿಸುತ್ತಿದ್ದಾರೆ.
ಮಧ್ಯ ತಮಿಳುನಾಡಿನ ಕರೂರ್ ಜಿಲ್ಲೆಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೆಂಥಿಲ್ ಬಾಲಾಜಿ, ಕರೂರ್​​​ನಿಂದ ಮೂರು ಬಾರಿ ಮತ್ತು ಅರವಕುರಿಚಿಯಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಒಂದು ಕಾಲದಲ್ಲಿ ಎಐಎಡಿಎಂಕೆ ನಾಯಕರಾಗಿದ್ದ ಇವರು, ಈಗ ಪಶ್ಚಿಮ ತಮಿಳುನಾಡಿನಲ್ಲಿ ಡಿಎಂಕೆಯ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.
ಎಐಎಡಿಎಂಕೆ ಭದ್ರಕೋಟೆಯಾಗಿರುವ ಪಶ್ಚಿಮ ವಲಯದಲ್ಲಿ ಸೆಂಥಿಲ್ ಬಾಲಾಜಿಯನ್ನು ಕಣಕ್ಕಿಳಿಸುವುದರಿಂದ ಈ ಭಾಗದಲ್ಲಿ ಪಕ್ಷದ ಪರವಾಗಿ ಅಲೆಯುಂಟಾಗಬಹುದು ಎಂಬುದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಲೆಕ್ಕಾಚಾರವಾಗಿದೆ. 2021ರ ಚುನಾವಣೆಯಲ್ಲಿ ಈ ವಲಯದ 50 ಸ್ಥಾನಗಳಲ್ಲಿ ಎಐಎಡಿಎಂಕೆ 33 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ವಿಪಕ್ಷಗಳ ಟೀಕೆ

ಕ್ಷೇತ್ರ ಬದಲಾವಣೆಯನ್ನು ಎಐಎಡಿಎಂಕೆ ಮತ್ತು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಸೆಂಥಿಲ್ ಬಾಲಾಜಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮತ್ತು ಕರೂರ್‌ನಲ್ಲಿ ಎದುರಾಗಿರುವ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಅವರು ಕೊಯಮತ್ತೂರಿಗೆ ಓಡಿ ಬಂದಿದ್ದಾರೆ ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಆರೋಪಿಸಿದ್ದಾರೆ. 2021 ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರು, ಸೆಂಥಿಲ್ ಬಾಲಾಜಿ ಸ್ಪರ್ಧೆಯನ್ನು ಹತಾಶದ ನಡೆ ಎಂದು ಕುಟುಕಿದ್ದು, ಡಿಎಂಕೆಗೆ ಕೊಯಮತ್ತೂರಿನಲ್ಲಿ ಸ್ಥಳೀಯ ನಾಯಕತ್ವದ ಕೊರತೆಯಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

ಸೆಂಥಿಲ್ ಬಾಲಾಜಿ ವಿವಾದ ಹಿನ್ನಲೆ

ಸೆಂಥಿಲ್ ಬಾಲಾಜಿ ರಾಜಕೀಯ ಜೀವನವು ಇತ್ತೀಚಿನ ವರ್ಷಗಳಲ್ಲಿ ವಿವಾದಗಳಿಂದ ಕೂಡಿದ್ದು, 2011 ರಿಂದ 2015 ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಲಂಚ ಪಡೆದ ಆರೋಪದ ಮೇಲೆ ಇಡಿ ಜೂನ್ 2023 ರಲ್ಲಿ ಇವರನ್ನು ಬಂಧಿಸಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಇವರು ಜಾಮೀನಿನ ಮೇಲೆ ಹೊರಬಂದ ನಂತರ ಮತ್ತೆ ಸ್ಟಾಲಿನ್ ಸಂಪುಟ ಸೇರಿದ್ದರು.
ಸುಪ್ರೀಂ ಕೋರ್ಟ್‌ನ ತೀವ್ರ ಟೀಕೆ ಮತ್ತು ಸಚಿವ ಸ್ಥಾನ ಅಥವಾ ಜಾಮೀನು ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆ ಎದುರಾದಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ವಿವಾದಾತ್ಮಕ ಹಿನ್ನೆಲೆಯ ಈ ನಾಯಕ ಕೊಯಮತ್ತೂರಿನ ಮತದಾರರನ್ನು ಸೆಳೆಯುತ್ತಾರೆಯೇ ಅಥವಾ ಎದುರಾಳಿಗಳ ಟೀಕೆಗೆ ಆಹಾರವಾಗುತ್ತಾರೆಯೇ ಎಂಬುದು ಮೇ 4 ರ ಫಲಿತಾಂಶದಲ್ಲಿ ತಿಳಿಯಲಿದೆ(ಏಜೆನ್ಸೀಸ್​​).