- ಟ್ರಂಪ್-ಮೋದಿ ಟ್ರೇಡ್ ಡೀಲ್ ಬೆನ್ನಲ್ಲೇ ಷೇರುಪೇಟೆ ಲಾಭದತ್ತ
- ಭಾರತದ ಮೇಲಿನ ಆಮದು ಸುಂಕ ಶೇ.18ಕ್ಕೆ ಇಳಿದಿದ್ದೇ ತಡ
- ಷೇರು ಮಾರುಕಟ್ಟೆಯ ಹೂಡಿಕೆದಾರರಲ್ಲಿ ಹೊಸ ಉತ್ಸಾಹ
- ಭಾರಿ ಲಾಭದಲ್ಲಿ ಸೂಚ್ಯಂಕಗಳು
ನವದೆಹಲಿ: ಕೇಂದ್ರ ಬಜೆಟ್ ದಿನವಾದ ಭಾನುವಾರ ಭಾರಿ ಕುಸಿತ ಅನುಭವಿಸಿದ್ದ ಷೇರು ಮಾರುಕಟ್ಟೆ ಸೋಮವಾರ ಕೊಂಚ ಚೇತರಿಕೆ ಕಂಡಿತು. ಅದೇ ತಡರಾತ್ರಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಕಾಲ್ನಲ್ಲಿ ಮಾತನಾಡಿ, ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇ ತಡ ಇದೀಗ ಷೇರುಪೇಟೆಯ ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಾಗಿದೆ.
ಮಂಗಳವಾರ (ಫೆ.03) ಮಾರುಕಟ್ಟೆ ಆರಂಭವಾದಾಗಿನಿಂದ ಸೂಚ್ಯಂಕಗಳು ಲಾಭದತ್ತ ಸಾಗಿವೆ. ಪ್ರಸ್ತುತ, ಸೆನ್ಸೆಕ್ಸ್ 4,200 ಪಾಯಿಂಟ್ ಜಿಗಿತ ಕಂಡರೆ, ನಿಫ್ಟಿ 1,219 ಅಂಕಗಳ ಏರಿಕೆಯೊಂದಿಗೆ 26,308ಕ್ಕೆ ತಲುಪಿದೆ. ಇದು ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಸಾಗುತ್ತಿರುವುದನ್ನು ಸೂಚಿಸಿದೆ. ಕಳೆದ ಕೆಲವು ದಿನಗಳಲ್ಲಿ ಭಾರೀ ನಷ್ಟವನ್ನು ಎದುರಿಸುತ್ತಿದ್ದ ಷೇರುಪೇಟೆ, ಬಜೆಟ್ ಬೆನ್ನಲ್ಲೇ ಕುಸಿದು ಹೋಗಿತ್ತು. ಈಗ ಯುಎಸ್-ಭಾರತ ವ್ಯಾಪಾರ ಒಪ್ಪಂದದ ಬೆನ್ನಲ್ಲೇ ರೂಪಾಯಿ ಮೌಲ್ಯವೂ ಚೇತರಿಸಿಕೊಂಡಿದೆ. ಮತ್ತೊಂದೆಡೆ, ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ 90.04ಕ್ಕೆ ತಲುಪಿದೆ.
ಮೋದಿ ಸಂತಸ
ಭಾರತದ ಮೇಲಿನ ಸುಂಕವನ್ನು ಶೇ.18ರಷ್ಟು ಇಳಿಸಿದ ಟ್ರಂಪ್ ಅವರಿಗೆ ನನ್ನ ಧನ್ಯವಾದ ಎಂದ ಪ್ರಧಾನಿ ಮೋದಿ, ಇಂದು ನನ್ನ ಆತ್ಮೀಯ ಗೆಳೆಯ ಟ್ರಂಪ್ ಅವರೊಂದಿಗೆ ಮಾತನಾಡಲು ತುಂಬಾ ಖುಷಿಯಾಯಿತು. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಮೇಲಿನ ಸುಂಕವನ್ನು ಈಗ ಶೇ.18ಕ್ಕೆ ಇಳಿಸಲಾಗಿದೆ. ಭಾರತದ 140 ಕೋಟಿ ಜನರ ಪರವಾಗಿ, ಅಧ್ಯಕ್ಷ ಟ್ರಂಪ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದ ಎಂದರು.
"ಎರಡು ಪ್ರಮುಖ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ, ಜನರು ಪ್ರಯೋಜನ ಪಡೆಯುತ್ತಾರೆ. ಇದು ಪರಸ್ಪರ ಸಹಕಾರಕ್ಕೆ ಅಪಾರ ಅವಕಾಶಗಳನ್ನು ಮುಕ್ತವಾಗಿಸುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವ ನಿರ್ಣಾಯಕ. ಶಾಂತಿಗಾಗಿ ಪ್ರತಿಯೊಂದು ಪ್ರಯತ್ನದಲ್ಲೂ ಭಾರತವು ಟ್ರಂಪ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಭಾರತ-ಯುಎಸ್ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಟ್ರಂಪ್ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಮೋದಿ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).