ಒಂದೇ ದಿನ 900 ಪಾಯಿಂಟ್ ಕುಸಿದ ಸೆನ್ಸೆಕ್ಸ್; ಹೂಡಿಕೆದಾರರ ₹4 ಲಕ್ಷ ಕೋಟಿ ನೀರು ಪಾಲು..!
ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ(Stock Market Crash) ಮಂಗಳವಾರ (ಫೆ.24) ಭೀಕರ ಕುಸಿತ ಕಂಡುಬಂದಿದೆ. ಆರಂಭಿಕ ವಹಿವಾಟಿನಲ್ಲೇ ಕರಡಿ ಅಬ್ಬರಕ್ಕೆ ಸಿಲುಕಿದ ಹೂಡಿಕೆದಾರರು ಕೇವಲ ಕೆಲವೇ ಗಂಟೆಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿ ಕಳೆದುಕೊಂಡಿದ್ದಾರೆ. ಬಿಎಸ್ಇ ಸೆನ್ಸೆಕ್ಸ್ 900 ಪಾಯಿಂಟ್‌ಗಳಿಗೂ ಹೆಚ್ಚು ಕುಸಿತ ಕಂಡರೆ, ಎನ್‌ಎಸ್‌ಇ ನಿಫ್ಟಿ 25,450 ರ ಮಟ್ಟಕ್ಕಿಂತ ಕೆಳಕ್ಕೆ ಜಾರಿದೆ.
ಮಾರುಕಟ್ಟೆ ಪತನದ ಪ್ರಮುಖ 5 ಕಾರಣಗಳು
ಐಟಿ ವಲಯದಲ್ಲಿ ತಲ್ಲಣ
ಅಮೆರಿಕದ ಎಐ ಸಂಸ್ಥೆ 'ಆಂಥ್ರೋಪಿಕ್' ಬಿಡುಗಡೆ ಮಾಡಿದ ಹೊಸ 'ಕ್ಲಾಡ್ ಕೋಡ್'ತಂತ್ರಜ್ಞಾನವು ಭಾರತೀಯ ಐಟಿ ಕಂಪನಿಗಳ ನಿದ್ದೆಗೆಡಿಸಿದೆ. ಈ ತಂತ್ರಜ್ಞಾನವು ಹಳೆಯ ಕೋಡಿಂಗ್ ವ್ಯವಸ್ಥೆಗಳನ್ನು ಸುಲಭವಾಗಿ ಆಧುನೀಕರಿಸಬಲ್ಲದು ಎಂಬ ಸುದ್ದಿಯಿಂದಾಗಿ ಇನ್ಫೋಸಿಸ್, ಟಿಸಿಎಸ್ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ಶೇ. 3-5 ರಷ್ಟು ಕುಸಿದಿವೆ.
ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ರಾಷ್ಟ್ರಗಳ ಮೇಲೆ ಹೊಸ ತೆರಿಗೆ ವಿಧಿಸುವ ಕುರಿತು ನೀಡಿರುವ ಹೇಳಿಕೆ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇದು ಭಾರತೀಯ ರಫ್ತು ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಭಯ ಹೂಡಿಕೆದಾರರನ್ನು ಕಾಡುತ್ತಿದೆ.
ಇರಾನ್ ಮೇಲೆ ಅಮೆರಿಕ ದಾಳಿಯ ಭೀತಿ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಕ್ರಮ ಕೈಗೊಳ್ಳಬಹುದು ಎಂಬ ಸುದ್ದಿಯಿಂದಾಗಿ ಜಾಗತಿಕ ಮಾರುಕಟ್ಟೆಗಳು ಕೆಂಪು ಬಣ್ಣಕ್ಕೆ ತಿರುಗಿವೆ.
ಕಚ್ಚಾ ತೈಲ ಬೆಲೆ ಏರಿಕೆ
ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 72 ಡಾಲರ್ ದಾಟಿದೆ. ತೈಲ ಆಮದು ಅವಲಂಬಿತ ಭಾರತದಂತಹ ದೇಶಗಳಿಗೆ ಇದು ಹಣದುಬ್ಬರದ ಭೀತಿಯನ್ನು ಹೆಚ್ಚಿಸಿದೆ.
ರೂಪಾಯಿ ಮೌಲ್ಯ ಕುಸಿತ
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 90.95 ಕ್ಕೆ ಕುಸಿದಿರುವುದು ವಿದೇಶಿ ಹೂಡಿಕೆದಾರರು (FII) ಮಾರುಕಟ್ಟೆಯಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದೆ.
ಹೂಡಿಕೆದಾರರಿಗೆ ತಜ್ಞರ ಸಲಹೆ
ಮಾರುಕಟ್ಟೆಯ ಇಂದಿನ ಕುಸಿತವು ಕೇವಲ ಜಾಗತಿಕ ಕಾರಣಗಳಿಂದಾಗಿದ್ದು, ಹೂಡಿಕೆದಾರರು ಭೀತಿಯಿಂದ ಷೇರುಗಳನ್ನು ಮಾರಾಟ ಮಾಡದೆ 'ವೇಟ್ ಅಂಡ್ ವಾಚ್' ತಂತ್ರ ಅನುಸರಿಸುವುದು ಉತ್ತಮ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).