ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭೀಕರ ಕುಸಿತ(Sensex) ಸಂಭವಿಸಿದೆ. ಕಳೆದ ಮೂರು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದ್ದ ಮಾರುಕಟ್ಟೆ ಇಂದು ಬೆಳ್ಳಂಬೆಳಗ್ಗೆ ಹೂಡಿಕೆದಾರರಿಗೆ ಭೀಕರ ನಷ್ಟ ಅನುಭವಿಸಿದ್ದಾರೆ.
ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಸೆನ್ಸೆಕ್ಸ್ (Sensex) ಬರೋಬ್ಬರಿ 2,000ಕ್ಕೂ ಅಧಿಕ ಪಾಯಿಂಟ್ಸ್ ಕುಸಿದಿದ್ದರೆ, ನಿಫ್ಟಿ (Nifty) 480ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ ಕಂಡು ಹೂಡಿಕೆದಾರರನ್ನು ಕಂಗಾಲಾಗಿಸಿದೆ.
ಕುಸಿತಕ್ಕೆ ಪ್ರಮುಖ 3 ಕಾರಣಗಳು
ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಭೀತಿ: ಇರಾನ್ ದೇಶವು ಗಲ್ಫ್ ವಲಯದ ಪ್ರಮುಖ ಇಂಧನ ಘಟಕಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದೆ. ಈ ದಾಳಿಯ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ($110) ಗಡಿಯನ್ನು ದಾಟಿದೆ. ತೈಲ ಬೆಲೆ ಏರಿಕೆಯು ಭಾರತದಂತಹ ಆಮದು ಅವಲಂಬಿತ ದೇಶದ ಆರ್ಥಿಕತೆಯ ಮೇಲೆ ನೇರ ಹೊಡೆತ ನೀಡಿದೆ.
ಯುಎಸ್ ಫೆಡ್ ನಿರ್ಧಾರ (US Fed Reserve): ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದರಿಂದ ಅಮೆರಿಕದ ಬಾಂಡ್‌ಗಳು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ದೊಡ್ಡ ಮೊತ್ತದ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.
ನೆಗೆಟಿವ್ ಗಿಫ್ಟ್ ನಿಫ್ಟಿ (GIFT Nifty): ಮಾರುಕಟ್ಟೆ ಆರಂಭಕ್ಕೂ ಮುನ್ನವೇ ಗಿಫ್ಟ್ ನಿಫ್ಟಿ 450 ಪಾಯಿಂಟ್ಸ್‌ಗಳ ಭಾರಿ ಕುಸಿತದ ಸೂಚನೆ ನೀಡಿತ್ತು. ಇದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿ ಆತುರದ ಮಾರಾಟಕ್ಕೆ (Panic Selling) ಕಾರಣವಾಯಿತು.
ಮಾರುಕಟ್ಟೆಯ ಇಂದಿನ ಸ್ಥಿತಿಗತಿ
ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಸುಮಾರು 1,953 ಪಾಯಿಂಟ್ಸ್‌ಗಳ 'ಗ್ಯಾಪ್-ಡೌನ್' ಆರಂಭವನ್ನು ಕಂಡಿತು. ನಿಫ್ಟಿ ಕೂಡ 23,324 ಮಟ್ಟಕ್ಕೆ ಕುಸಿಯಿತು. ಬ್ಯಾಂಕಿಂಗ್, ಐಟಿ ಮತ್ತು ಆಟೋಮೊಬೈಲ್ ವಲಯದ ಪ್ರಮುಖ ಷೇರುಗಳು ನೆಲಕಚ್ಚಿವೆ. ವಿಶೇಷವಾಗಿ ಇಂಧನ ಅವಲಂಬಿತ ಕಂಪನಿಗಳ ಷೇರುಗಳು ಭಾರಿ ಮಾರಾಟದ ಒತ್ತಡಕ್ಕೆ ಸಿಲುಕಿವೆ.
ಹೂಡಿಕೆದಾರರಿಗೆ ಎಚ್ಚರಿಕೆ!
ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣ ತಿಳಿಯಾಗುವವರೆಗೆ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ. ಹೂಡಿಕೆದಾರರು ಈ ಸಮಯದಲ್ಲಿ ಆತುರಪಟ್ಟು ಷೇರುಗಳನ್ನು ಮಾರಾಟ ಮಾಡದೆ, ಮಾರುಕಟ್ಟೆಯ ಸ್ಥಿರತೆಗಾಗಿ ಕಾಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).