ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅಲ್ಲಿನ ಪಕ್ಷಗಳು ಬಿರುಸಿನ ಸಿದ್ದತೆ ನಡೆಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಮೇಲೆ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ಮತ್ತು ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್(K A Sengottaiyan) ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರುವ ಬಗ್ಗೆ ಚೆನ್ನೈನಲ್ಲಿ ಇಂದು(ನ. 26) ನಟ ವಿಜಯ್ ಅವರನ್ನು ಮಾಜಿ ಸಚಿವ ಸೆಂಗೊಟ್ಟೈಯನ್ ಭೇಟಿಯಾಗಲಿದ್ದಾರೆ. ಜೊತೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ.
1977ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದ ಕೂಡಲೇ ಸತ್ಯಮಂಗಲಂನಿಂದ ಗೆದ್ದ ಒಂಬತ್ತು ಬಾರಿ ಶಾಸಕರಾಗಿರುವ ಸೆಂಗೊಟ್ಟೈಯನ್, ಮಾಜಿ ಮುಖ್ಯಮಂತ್ರಿಗಳಾದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ನಿಷ್ಠಾವಂತ ಬೆಂಬಲಿಗರಾಗಿದ್ದರು.
ಸೆ. 05ರಂದು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಪಕ್ಷದ ಸಂಘಟನೆಯ ದೃಷ್ಟಿಯಿಂದ, ಮುಂದಿನ ಸೋಲುಗಳನ್ನು ತಡೆಯಲು ಬಹಿರಂಗವಾಗಿ ಬಂಡಾಯವೆದ್ದು, ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ, ಟಿಟಿವಿ ದಿನಕರನ್ ಹಾಗೂ ವಿ. ಶಶಿಕಲಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕ್ರಮವಹಿಸುವಂತೆ ಒತ್ತಾಯಿಸಿದ್ದರು.
ಅ. 30ರಂದು ನಡೆದ ತೇವರ್ ಜಯಂತಿಯಲ್ಲಿ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಮತ್ತು ದಿನಕರನ್ ಅವರೊಂದಿಗೆ ಬಹಿರಂಗವಾಗಿ ಕಾಣಿಸಿಕೊಂಡ ಬಳಿಕ ಸೆಂಗೊಟ್ಟೈಯನ್ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟನೆಗೊಳಿಸಲಾಗಿತ್ತು (ಏಜೆನ್ಸೀಸ್).