Commercialisation of education
- ಎಲ್‌ಕೆಜಿ ತರಗತಿ ಮಕ್ಕಳಿಗೆ ವಾರ್ಷಿಕ 2.25 ಲಕ್ಷ ರೂ. ಶುಲ್ಕ ವಿಧಿಸಿದ ಖಾಸಗಿ ಶಿಕ್ಷಣ ಸಂಸ್ಥೆ
- ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಶುಲ್ಕದ ಪಟ್ಟಿ, ನೆಟ್ಟಿಗರು ಶಾಕ್
- ಶಿಕ್ಷಣದ ವ್ಯಾಪಾರೀಕರಣ ಆಗುತ್ತಿರುವ ಬಗ್ಗೆ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶ
Commercialisation Of Education: ಶಿಕ್ಷಣ ಮಾರಾಟಕ್ಕಿದೆ ಎನ್ನುವ ಕೂಗುಗಳು ಆಗಾಗ ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಕೇಳಿಬರುತ್ತಲೇ ಇರುತ್ತವೆ. ಖಾಸಗಿ ಶಾಲಾ-ಕಾಲೇಜಿಗಳ ದುಬಾರಿ ಪ್ರವೇಶಾತಿ ಶುಲ್ಕ, ಮಕ್ಕಳಿಗೆ ಕೊಡುವ ಕಿರುಕುಳದ ಬಗ್ಗೆ ಪ್ರಕರಣಗಳು ಸದ್ದು ಮಾಡುತ್ತಲೇ ಇವೆ. ಶಿಕ್ಷಣ ವ್ಯಾಪಾರೀಕರಣದ ಬಗ್ಗೆ ಕನ್ನಡದಲ್ಲಿ ಕ್ರಾಂತಿ ಹಾಗೂ ಧನುಷ್ ಅಭಿನಯದ ವಾತಿ ಸಿನಿಮಾಗಳು ತೆರೆಗೆ ಬಂದವು. ಹೀಗಿದ್ದರೂ ಸಹ ಬಡವರ ಬಳಿ ಹಣ ಹೀರುವ ಬುದ್ಧಿಯನ್ನು ಖಾಸಗಿ ಸಂಸ್ಥೆಗಳು ಮಾತ್ರ ಕೊನೆಗೊಳಿಸಿಲ್ಲ. ಸರ್ಕಾರವು ಕ್ರಮ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಆಗುತ್ತಿರುವ ಚರ್ಚೆಯೇ ಉದಾಹರಣೆ.
ಹೌದು ಯುಕೆಜಿ ಮಗುವೊಂದಕ್ಕೆ ಶಾಲೆಯ ಆಡಳಿತ ಮಂಡಳಿಯು 2.25 ಲಕ್ಷ ಫೀಸ್ ಪೀಕಿದ್ದಾರೆ ಎಂದು ಸಾಕ್ಷಿ ಎಂಬ ಸಾಫ್ಟ್‌ವೇರ್ ಡೆವಲಪರ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಜೋಕ್ ಮಾಡುತ್ತಿಲ್ಲ. ಶಾಲೆಯು ಕೊಟ್ಟ ರಿಸೀಪ್ಟ್ ಸಮೇತ ಹಂಚಿಕೊಳ್ಳುತ್ತಿದ್ದೇನೆ ನೋಡಿ ಎಂದು ಪೋಸ್ಟ್ ಮಾಡಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಏನಿದೆ?
ಇಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸೋದು ಕಷ್ಟ. ಇದೊಂದು ದೊಡ್ಡ ಹೊರೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಪೂರಕವಾಗಿ ಯುಕೆಜಿಗೆ ಸೇರಿಸಲು ಮಗುವಿಗೆ 2.25 ಲಕ್ಷ ರೂಪಾಯಿ ವಾರ್ಷಿಕ ಶಾಲಾ ಶುಲ್ಕ ವಿಧಿಸಿರುವ ಖಾಸಗಿ ಸಂಸ್ಥೆಯ ಕ್ರಮಕ್ಕೆ ಪೋಷಕರು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಹಿಗ್ಗಾಮುಗ್ಗ ಬೈದಾಡಿದ್ದಾರೆ.
ಅಲ್ಲ ಟ್ವಿಂಕಲ್, ಟ್ವಿಂಕಲ್ ಲಿಟಲ್ ಸ್ಟಾರ್ ಪದ್ಯ ಕಲಿಯಲು 2.25 ಲಕ್ಷ ಶಾಲಾ ಶುಲ್ಕ ಕಟ್ಟಬೇಕೆ. ಅಲ್ಲ ನಾನು ಜೋಕ್ ಮಾಡುತ್ತಿಲ್ಲ. ನೀವೆ ಶಾಲಾ ಶುಲ್ಕದ ಈ ಪಟ್ಟಿ ನೋಡಿ ಎಂದು ಬಿಲ್ ಹಂಚಿಕೊಂಡಿದ್ದಾರೆ.
2026-27ರ ಶೈಕ್ಷಣಿಕ ವರ್ಷಕ್ಕೆ ಶಾಲೆಯು ಈ ಕೆಳಗಿನಂತೆ ಶುಲ್ಕ ವಿಧಿಸಿದೆ
ಪ್ರವೇಶ ಶುಲ್ಕ; 15,000 ರೂ., ಕಾಷನ್ ಮನಿ 33,000 ರೂ. (ಹಿಂತಿರುಗಿಸಲಾಗದ ಶುಲ್ಕ) , ಬೋಧನಾ ಶುಲ್ಕ, ಲೈಬ್ರರಿ ಮತ್ತು ಜಿಮ್‌ಖಾನಾ ಶುಲ್ಕ ಎಲ್ಲವೂ ಸೇರಿ 2.25 ಲಕ್ಷ ರೂ. ಅಚ್ಚರಿಯ ವಿಷಯವೆಂದರೆ, ಈ ಭಾರಿ ಮೊತ್ತದ ಶುಲ್ಕದಲ್ಲಿ ಶಾಲಾ ಶೂಗಳು, ಸಾಕ್ಸ್ ಮತ್ತು ಕೆಫೆಟೇರಿಯಾ ಊಟದ ವೆಚ್ಚಗಳು ಒಳಗೊಂಡಿಲ್ಲ ಇವುಗಳಿಗೆ ಪೋಷಕರು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ ಎಂದು ದಂಗಾಗಿ ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರು ಏನಂದ್ರು?
ನಿಜಕ್ಕೂ ಶಿಕ್ಷಣ ವ್ಯವಸ್ಥೆಯ ಹಿಡಿತ ಹಾದಿ ತಪ್ಪಿದೆ. ಇವರು ಹಣಬಾಕತನವು ಮಿತಿ ಮೀರುತ್ತಿದೆ. ಇದು ಶಿಕ್ಷಣವಲ್ಲ, ಸಂಪೂರ್ಣ ಬಂಡವಾಳಶಾಹಿ ವ್ಯವಸ್ಥೆ ಎಂದು ಎಕ್ಸ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಇನ್ನು ಮತ್ತೊಬ್ಬರು ಐಷಾರಾಮಿ ಶಾಲೆಗೆ ಸೇರಿಸುವ ಬದಲು ಗುಣಮಟ್ಟದ ಶಿಕ್ಷಣ ಇರುವ ಶಾಲೆಗೆ ಸೇರಿಸಿ ಎಂದಿದ್ದಾರೆ.
ಇಷ್ಟೆಲ್ಲ ಹಣ ವಸೂಲಿ ಮಾಡಿಕೊಳ್ಳುತ್ತಿದ್ದರು ಸರ್ಕಾರ ಹಳ್ಳ ತಪ್ಪಿರೋದಾದರೂ ಯಾಕೆ? ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರೋದಾದರೂ ಯಾಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).