ಬಾಲಿವುಡ್ ಹಿರಿಯ ನಿರ್ಮಾಪಕ ಹಾಗೂ ಸಿಬಿಎಫ್‌ಸಿ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ
- ಬಾಲಿವುಡ್ ಹಿರಿಯ ನಿರ್ಮಾಪಕ ಹಾಗೂ ಸಿಬಿಎಫ್‌ಸಿ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ
- ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಮಾಪಕ
- ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅಧ್ಯಕ್ಷನಾಗಿ ಹೆಸರು ಮಾಡಿದ್ದ ನಿಹಲಾನಿ
ಮುಂಬೈ: ಬಾಲಿವುಡ್‌ನ ನಿರ್ಮಾಪಕ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯ ಮಾಜಿ ಅಧ್ಯಕ್ಷರಾಗಿದ್ದ ಪಹ್ಲಜ್ ನಿಹಲಾನಿ (Pahlaj Nihalani) [76] ಗುರುವಾರ (ಜೂ.4) ಬೆಳಿಗ್ಗೆ 9.30 ಕ್ಕೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಸಾವಿಗೆ ನಿಖರವಾದ ಕಾರಣ ಏನೆಂದು ಇಲ್ಲಿವರೆಗೆ ತಿಳಿದುಬಾರದಿದ್ದರೂ, ಪಹ್ಲಜ್ ನಿಹಲಾನಿ ಹಲವು ಸಮಯದಿಂದ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ. ಮೃತರ ಅಂತ್ಯಸಂಸ್ಕಾರವು ಸಾಂತಾಕ್ರೂಜ್ ಹಿಂದೂ ಸ್ಮಶಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ನಿಹಲಾನಿ!
ಕಳೆದ ಒಂದುವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಹ್ಲಜ್ ನಿಹಲಾನಿ ನಿನ್ನೆ (ಬುಧವಾರ, ಜೂ.3) ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಹಾರ್ಟ್ ಅಟ್ಯಾಕ್ ಆಗಿರುವುದು ಸುಳ್ಳು, ಅವರು ಬಹಳ ಕಾಲದಿಂದ ಲೀವರ್ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮದ್ಯ ಸೇವನೆ ಮಾಡುತ್ತಿರಲಿಲ್ಲ, ಆದರೂ ಅವರಿಗೆ ಲೀವರ್ ಸಮಸ್ಯೆಯಿತ್ತೆಂದು ಕುಟುಂಬದವರು ತಿಳಿಸಿದ್ದಾರೆ.
ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮಾಜಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ ಅವರು ಭಾರತೀಯ ಚಿತ್ರರಂಗದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. 1970 ಮತ್ತು 1980ರ ದಶಕದಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದ ಇವರು, ಚಿರಾಗ್ ದೀಪ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಹಲವು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ಗೋವಿಂದಾ, ಅನಿಲ್ ಕಪೂರ್ ಮತ್ತು ಚಂಕಿ ಪಾಂಡೆ ಅವರಂತಹ ಪ್ರಮುಖ ನಟರ ವೃತ್ತಿಜೀವನಕ್ಕೆ ಬ್ರೇಕ್ ನೀಡಿದ ಇಲ್ಜಾಮ್, ಆಂಖೇನ್ ಮತ್ತು ಶೋಲಾ ಔರ್ ಶಬ್ನಮ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ಇವರು ನಿರ್ಮಿಸಿದ್ದಾರೆ. ಕೇವಲ ಕಮರ್ಷಿಯಲ್ ಸಿನಿಮಾಗಳನ್ನು ನೀಡುವುದಷ್ಟೇ ಅಲ್ಲದೆ, ಚಿತ್ರರಂಗದ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಾಲಿವುಡ್‌ನ ಪ್ರಭಾವಿ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಪಹ್ಲಾಜ್ ನಿಹಲಾನಿ 2015 ರಿಂದ 2017 ರವರೆಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿ ದೇಶಾದ್ಯಂತ ತೀವ್ರ ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಕಟ್ಟುನಿಟ್ಟಾದ ಸೆನ್ಸಾರ್‌ಶಿಪ್ ನೀತಿಯಿಂದಾಗಿ ಅವರು ಮಾಧ್ಯಮಗಳಲ್ಲಿ ಸಂಸ್ಕಾರಿ ಅಧ್ಯಕ್ಷ ಎಂದೇ ಕರೆಯಲ್ಪಟ್ಟರು.
ಉಡ್ತಾ ಪಂಜಾಬ್, ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ ಮತ್ತು ಸ್ಪೆಕ್ಟರ್ ಸೇರಿದಂತೆ ಹಲವು ಚಲನಚಿತ್ರಗಳ ದೃಶ್ಯಗಳು, ಸಂಭಾಷಣೆಗಳು ಹಾಗೂ ಚುಂಬನದ ದೃಶ್ಯಗಳಿಗೆ ಕತ್ತರಿ (Cuts) ಹಾಕುವ ಮೂಲಕ ಚಿತ್ರರಂಗದ ನಿರ್ದೇಶಕರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಡುವವರ ತೀವ್ರ ವಿರೋಧವನ್ನು ಎದುರಿಸಿದರು.
ಚಿತ್ರಗಳಿಗೆ ಪ್ರಮಾಣಪತ್ರ ನೀಡುವಲ್ಲಿ ಅತಿಯಾದ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, 2017 ರಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಸಿನಿಮಾದ ಹೊರತಾಗಿ 2014 ರಲ್ಲಿ ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂಬ ಹಾಡನ್ನು ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಿರ್ಮಿಸಿದ್ದರು, (ಏಜನ್ಸೀಸ್).