Ravneet Bittu | ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಮತ್ತು ರಾಹುಲ್ ಗಾಂಧಿ ಮಾತಿನ ಚಕಮಕಿ
ದೆಹಲಿ: ಸಂಸತ್ತಿನೊಳಗೆ ನಡೆದ ಮಾತಿನ ಚಕಮಕಿಯನ್ನು ರಾಹುಲ್ ಗಾಂಧಿ ದೈಹಿಕ ಘರ್ಷಣೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರು ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಆರೋಪಿಸಿದ್ದು, ಘಟನೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸ್ಥೀಮಿತ ಕಳೆದುಕೊಂಡಂತೆ ಕಾಣುತ್ತಿದ್ದರು ಎಂದಿರುವುದಾಗಿ ವರದಿಯಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಿಟ್ಟು, ಸದನ ಪ್ರವೇಶಿಸುತ್ತಿದ್ದಂತೆ ಘರ್ಷಣೆ ನಡೆಯಿತು, ನಾನು ಸದನವನ್ನು ಪ್ರವೇಶಿಸಲು ಮುಂದಾದಾಗ, ದೊಡ್ಡ ಕುಟುಂಬದಿಂದ ಬಂದ ರಾಹುಲ್ ಗಾಂಧಿ ನನ್ನ ಮೇಲೆ ಅಸಮಾಧಾನಗೊಂಡಿರಬಹುದು ಎಂದು ಹೇಳಿದರು.
ಸಂಸತ್ತಿನ ಒಳಗೆ ಕೂಡ ಗಾಂಧಿ ಅಪ್ರಸ್ತುತ ಹೇಳಿಕೆಗಳನ್ನು ನೀಡುತ್ತಲೇ ಇದ್ದರು, ಎಂದು ಬಿಟ್ಟು ಆರೋಪಿಸಿದ್ದು, ಅವರು ಸದನದ ಹೊರಗೆ ಮತ್ತು ಒಳಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ನಾನು ಸ್ಪೀಕರ್‌ಗೆ ತಿಳಿಸುತ್ತೇನೆ ಎಂದು ಹೇಳಿದರು.
ರಾಹುಲ್ ಗಾಂಧಿ ಕೈಕುಲುಕಲು ಸೂಚಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ತಾವು ದೇಶದ ರಾಜನೆಂದು ಮತ್ತು ಎಲ್ಲರೂ ಅವರು ಹೇಳಿದಂತೆ ಮಾಡುತ್ತಾರೆಂದು ಭಾವಿಸಿದ್ದಾರೆ, ಆದರೆ, ನಾನು ಎಂದಿಗೂ ದೇಶದ್ರೋಹಿಯೊಂದಿಗೆ ಕೈಕುಲುಕುವುದಿಲ್ಲ ಎಂದು ನೇರವಾಗಿ ಹೇಳಿದೆ ಎಂದು ಬಿಟ್ಟು ತಿಳಿಸಿದ್ದಾರೆ
ರಾಹುಲ್ ಸಿಖ್ಖರು ಮತ್ತು ಪಂಜಾಬಿಗಳ ಅತಿದೊಡ್ಡ ಶತ್ರು ಎಂದು ಕರೆದ ಬಿಟ್ಟು, ಸಿಖ್ಖರು ಕೊಲ್ಲಲ್ಪಡದ ಅಥವಾ ಮಹಿಳೆಯರ ಮೇಲೆ ಅತ್ಯಾಚಾರ ನಡೆಯದ ಯಾವುದೇ ನಗರ ಉಳಿದಿಲ್ಲ. ಗುರು ಗ್ರಂಥ ಸಾಹಿಬ್ ಮುಂದೆ ಸುವರ್ಣ ದೇವಾಲಯದ ಒಳಗೆ ಅವರು ಗುಂಡುಗಳನ್ನು ಹಾರಿಸಿದರು ಎಂದು ಬಿಟ್ಟು ಆರೋಪಿಸಿದರು.
ರಾಹುಲ್ ಗಾಂಧಿ ಅಧಿಕಾರಕ್ಕೆ ಬಾರದಿದ್ದ ಕಾರಣ ಅವರು ತುಂಬಾ ಹತಾಶರಾಗಿದ್ದಾರೆ ಎಂದಿರುವ ಬಿಟ್ಟು, ನಾನು ಕೈಕುಲುಕಲು ನಿರಾಕರಿಸಿದಾಗ, ಅವರು ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು, ಈ ವೇಳೆ ವೇಣುಗೋಪಾಲ್, ಸುಖಜಿಂದರ್ ಸಿಂಗ್ ರಾಂಧವ ಅವರನ್ನು ತಡೆದರು ಎಂದು ಮಾಹಿತಿ ನೀಡಿದರು.
ರಾಹುಲ್ ಗಾಂಧಿ ಕುಡಿತದ ಅಮಲಿನಲ್ಲಿದ್ದಂತೆ, ಮಾದಕ ವಸ್ತುಗಳ ನಶೆಯಲ್ಲಿದ್ದಂತೆ ತೋರುತ್ತಿತ್ತು. ಅವರಿಗೆ ಏನು ಮಾಡುತ್ತಿದ್ದೇನೆ ಎಂಬುದರ ಪ್ರಜ್ಞೆ ಇರಲಿಲ್ಲ. ಬೀದಿ ಗೂಂಡಾ ಕೂಡ ಅವರಂತೆ ವರ್ತಿಸುವುದಿಲ್ಲ ಎಂದು ಬಿಟ್ಟು ಆರೋಪಿಸಿದ್ದು, ಸಂಸತ್ತಿನೊಳಗೆ ಹಿಂಬಾಲಿಸಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೇಳಿಕೆ ನೀಡುತ್ತಾ ನಾನು ಅವರ ಪಕ್ಷಕ್ಕೆ ಹಿಂತಿರುಗುತ್ತೇನೆ ಎಂದರು, ಅದಕ್ಕಿಂತ ಸಾಯುವುದೇ ಉತ್ತಮ ಎಂದು ಬಿಟ್ಟು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದರು.
ಕ್ಷಮೆ ಎಂಬ ಪದಕ್ಕೆ ದೊಡ್ಡ ಮೌಲ್ಯವಿದ್ದು, ಇವರಿಂದ ಆ ಮಾತು ಕೇಳಿ ಅದಕ್ಕೆ ಅವಮಾನ ಮಾಡಲು ನನಗೆ ಇಷ್ಟವಿಲ್ಲ, ಆದ್ದರಿಂದ ರಾಹುಲ್ ಕ್ಷಮೆಯಾಚಿಸಲಿ ಎನ್ನುವುದನ್ನು ನಾನು ಬಯಸುವುದಿಲ್ಲ. ನಾನು ಕಾಂಗ್ರೆಸ್ ತೊರೆದ ಬಳಿಕ ರಾಹುಲ್ ನಡವಳಿಕೆಯಲ್ಲಿ ತುಂಬಾ ಬದಲಾವಣೆಗಳಾಗಿವೆ, ನಾನು ಅವರೊಂದಿಗಿದ್ದಾಗ ಒಳ್ಳೆಯವನಾಗಿದ್ದೆ. ಈಗ ನಾನು ಬಿಜೆಪಿಯಲ್ಲಿದ್ದೇನೆ, ಆದ್ದರಿಂದ ಅವರಿಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದರು(ಏಜೆನ್ಸೀಸ್).