ಕೋಲ್ಕತ್ತಾದಲ್ಲಿ ಸೀಕ್ರೆಟ್ ಮೀಟಿಂಗ್: ಮಮತಾ ಮನೆಗೆ ಅಖಿಲೇಶ್ ಬಂದಿದ್ದರ ಹಿಂದೆ ಅಡಗಿದೆಯೇ ಮಹಾ ಪ್ಲಾನ್? 2029ರ ಯುದ್ಧಕ್ಕೆ ಈಗಲೇ ಸಿದ್ಧವಾಗ್ತಿದೆಯೇ ರಣತಂತ್ರ..?
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಅನುಭವಿಸಿದ ಅನಿರೀಕ್ಷಿತ ಸೋಲಿನ ನಂತರ, ರಾಷ್ಟ್ರ ರಾಜಕೀಯದ ಮಿತ್ರಪಕ್ಷಗಳು ಮಮತಾ ಬ್ಯಾನರ್ಜಿ ಪರವಾಗಿ ನಿಂತಿವೆ. ಗುರುವಾರ ಕೋಲ್ಕತ್ತಾಗೆ ಆಗಮಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav meets Didi), ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಅಖಿಲೇಶ್ ಆಡಿದ ಮಾತುಗಳು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
"ದೀದಿ, ನೀವು ಸೋತಿಲ್ಲ: ಮಮತಾ ಬೆನ್ನಿಗೆ ನಿಂತ ಅಖಿಲೇಶ್
ಸುಮಾರು 3:15ಕ್ಕೆ ಆರಂಭವಾದ ಈ ಮಹತ್ವದ ಸಭೆಯಲ್ಲಿ ಅಖಿಲೇಶ್ ಯಾದವ್ ಅತ್ಯಂತ ಆತ್ಮೀಯವಾಗಿ ಮಮತಾ ಬ್ಯಾನರ್ಜಿ ಅವರನ್ನು ಸ್ವಾಗತಿಸಿದರು. ಮೂಲಗಳ ಪ್ರಕಾರ, ಮಮತಾ ಅವರ ಕೈಹಿಡಿದು ಮಾತನಾಡಿದ ಅಖಿಲೇಶ್, ದೀದಿ, ನೀವು ಸೋತಿಲ್ಲ. ನೀವು ನಡೆಸಿದ ಹೋರಾಟ ಅದ್ವಿತೀಯ ಎಂದು ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಆಲಂಗಿಸಿಕೊಂಡ ಅಖಿಲೇಶ್, ನೀವೆಲ್ಲರೂ ಎದುರಿಸಿದ ಈ ರಾಜಕೀಯ ಯುದ್ಧ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವ ಹತ್ಯೆಯ ಗಂಭೀರ ಆರೋಪ!
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಬಂಗಾಳದ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಬಿಜೆಪಿಯಷ್ಟು ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಿದ ಪಕ್ಷ ಯಾವುದೂ ಇಲ್ಲ. ಮಹಿಳೆಯರು ರಾಜಕೀಯದಲ್ಲಿ ಬೆಳೆಯುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ. ಬಂಗಾಳದಲ್ಲಿ ಮತದಾರರ ಮೇಲೆ ಒತ್ತಡ ಹೇರಲಾಗಿದೆ. ಜನರು ಮುಕ್ತವಾಗಿ ಮತ ಚಲಾಯಿಸಲು ಬಿಟ್ಟಿಲ್ಲ ಎಂದು ಗುಡುಗಿದ್ದಾರೆ.
ಚುನಾವಣೆಯ ಸಮಯದಲ್ಲಿ ಕೇಂದ್ರೀಯ ಪಡೆಗಳ ಅತಿಯಾದ ನಿಯೋಜನೆಯನ್ನು ಟೀಕಿಸಿದ ಅಖಿಲೇಶ್, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಂದ ಸಿಬ್ಬಂದಿಗಳನ್ನು ಕರೆತಂದು ಒಂದು ಸಮಾಂತರ ವ್ಯವಸ್ಥೆ ನಿರ್ಮಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಹತೋಟಿಗೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರಕ್ಕೆ ಯಾರು ಹೊಣೆ..?
ಚುನಾವಣಾ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲಿನ ದಾಳಿ ಮತ್ತು ಕಚೇರಿಗಳ ಧ್ವಂಸದ ಬಗ್ಗೆ ಪ್ರಶ್ನಿಸಿದ ಅಖಿಲೇಶ್, ಇಷ್ಟೆಲ್ಲಾ ಭದ್ರತೆಯ ನಡುವೆಯೂ ಹಿಂಸಾಚಾರ ನಡೆದಿದೆ ಎಂದರೆ ಭದ್ರತಾ ಲೋಪಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
80 Vs 207: ಬಂಗಾಳದ ಹೊಸ ವಾಸ್ತವ
15 ವರ್ಷಗಳ ಕಾಲ ಬಂಗಾಳವನ್ನು ಆಳಿದ ಟಿಎಂಸಿ ಈ ಬಾರಿ ಕೇವಲ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಬಿಜೆಪಿ 207 ಸ್ಥಾನಗಳೊಂದಿಗೆ ಅಭೂತಪೂರ್ವ ಜಯಗಳಿಸಿದೆ. ಈ ಸೋಲಿನ ಆಘಾತದಲ್ಲಿರುವ ಟಿಎಂಸಿಗೆ ಅಖಿಲೇಶ್ ಯಾದವ್ ಅವರ ಭೇಟಿಯು ನೈತಿಕ ಬೆಂಬಲ ನೀಡಿದಂತಾಗಿದೆ. ದೆಹಲಿಯಲ್ಲಿ ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ರವಾನಿಸಲು ಈ ಭೇಟಿ ಸಾಕ್ಷಿಯಾಗಿದೆ.
ಮುಂಬರುವ ದಿನಗಳಲ್ಲಿ ಮಮತಾ ಬ್ಯಾನರ್ಜಿ ಈ ಸೋಲನ್ನು ಹೇಗೆ ಎದುರಿಸುತ್ತಾರೆ ಮತ್ತು ಅಖಿಲೇಶ್ ಅಂತಹ ಮಿತ್ರರ ಬೆಂಬಲದೊಂದಿಗೆ ಯಾವ ರೀತಿಯ ಹೋರಾಟ ರೂಪಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).