ಮೃತ ವ್ಯಕ್ತಿ ಅಜಯ್​ ಗಾರ್ಗ್​  
ದೇಶ

ಬಾಲ್ಕನಿಯಲ್ಲಿ ಮೊಬೈಲ್​ ನೆಟ್​ವರ್ಕ್ ಹುಡುಕುವಾಗ 17ನೇ ಮಹಡಿಯಿಂದ ಬಿದ್ದು ವ್ಯಕ್ತಿ ದುರಂತ ಸಾವು! Network

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್​ ನೆಟ್​ವರ್ಕ್ ಹುಡುಕುವಾಗ ಕಟ್ಟಡದಿಂದ ಕೆಳಗೆ ಬಿದ್ದು ವ್ಯಕ್ತಿ ದುರ್ಮರಣ
  • ನೋಯ್ಡಾದ ಎಟಿಎಸ್​ ಒನ್​ ಹ್ಯಾಮ್ಲೆಟ್​ ಸೊಸೈಟಿಯಲ್ಲಿ ನಡೆದ ಘಟನೆ
  • ಫ್ಲ್ಯಾಟ್​ ಒಳಗೆ ನೆಟ್​ವರ್ಕ್​ ಕೊರತೆ ಇದ್ದಿದ್ದರಿಂದ ಬಾಲ್ಕನಿಗೆ ಹೋದಾಗ ಈ ದುರಂತ ಸಂಭವಿಸಿದೆ
ನವದೆಹಲಿ: ಸರಿಯಾದ ಮೊಬೈಲ್​ ನೆಟ್​ವರ್ಕ್ ( Network ) ಹುಡುಕುತ್ತಾ ಬಾಲ್ಕನಿಗೆ ಬಂದ 55 ವರ್ಷದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬಹುಮಹಡಿ ಕಟ್ಟಡದ 17ನೇ ಅಂತಸ್ತಿನಿಂದ​ ಕೆಳಗೆ ಬಿದ್ದು, ಸಾವಿಗೀಡಾಗಿರುವ ದುರಂತ ಘಟನೆ ನೋಯ್ಡಾದ ಸೆಕ್ಟರ್​ 104ರಲ್ಲಿ ಶನಿವಾರ (ಜ.03) ನಡೆದಿದೆ.
ಮೃತ ವ್ಯಕ್ತಿಯನ್ನು ಅಜಯ್​ ಗಾರ್ಗ್​ ಎಂದು ಗುರುತಿಸಲಾಗಿದೆ. ಇವರು ದೆಹಲಿಯ ಇಂಡಿಯನ್​ ಆಯಿಲ್​ ಕಾರ್ಪೊರೇಷನ್​ (ಐಒಸಿ)ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನೋಯ್ಡಾದ ಎಟಿಎಸ್​ ಒನ್​ ಹ್ಯಾಮ್ಲೆಟ್​ ಸೊಸೈಟಿಯಲ್ಲಿ ತನ್ನ ಪತ್ನಿಯೊಂದಿಗೆ ವಾಸವಿದ್ದರು.
ಶನಿವಾರ ಬೆಳಗ್ಗೆ ತನ್ನ ಪತ್ನಿಯೊಂದಿಗೆ ಮಾತನಾಡಿದ ಬಳಿಕ, 10.20ರ ಸುಮಾರಿಗೆ ಅಜಯ್​ಗೆ ಒಂದು ಕರೆ ಬಂದಿತು. ಆದರೆ, ಫ್ಲ್ಯಾಟ್​ ಒಳಗೆ ನೆಟ್​ವರ್ಕ್​ ಕೊರತೆ ಇದ್ದಿದ್ದರಿಂದ ನೆಟ್​ವರ್ಕ್​ ಹುಡುಕಿಕೊಂಡು ಬಾಲ್ಕನಿಗೆ ಹೋದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ನೆಲದ ಮೇಲೆ ರಕ್ತದ ಮಡುವಿನಲ್ಲಿ ಚಲನರಹಿತವಾಗಿ ಬಿದ್ದಿದ್ದ ಅಜಯ್​ರನ್ನು ಸೊಸೈಟಿಯ ನಿವಾಸಿಗಳು, ಸೆಕ್ಟರ್ 110 ರಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಕಟ್ಟಡದಿಂದ ಬಿದ್ದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹಠಾತ್ ಕುಸಿತದಿಂದಾಗಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಆತ್ಮಹತ್ಯೆ ಸೇರಿದಂತೆ ಇತರ ಆಯಾಮಗಳಲ್ಲೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಸೊಸೈಟಿ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಜಯ್ ಮತ್ತು ಅವರ ಪತ್ನಿ ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಅವರ ಮಗ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅಜಯ್​ ಅವರ ಸಾವು ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ, (ಏಜೆನ್ಸೀಸ್​).