ಭಾರತದಲ್ಲಿ ಮತ್ತೆ ಸೀಪ್ಲೇನ್ ಸದ್ದು
ಅದು 2010ರ ಡಿಸೆಂಬರ್. ಮುಂಬೈನ ಜುಹು ವಿಮಾನ ನಿಲ್ದಾಣದಿಂದ ಎಂಟು ಆಸನಗಳ ‘ಸೆಸ್ನಾ 208 ಕ್ಯಾರವಾನ್’ ಮೂಲಕ ಪವನ್ ಹನ್ಸ್ ಹೆಲಿಕಾಪ್ಟರ್ಸ್ ಸಂಸ್ಥೆ ಭಾರತದ ಮೊದಲ ಸೀಪ್ಲೇನ್ ಸೇವೆ ಆರಂಭಿಸಿದ ಸಮಯ. ಸಾಮಾನ್ಯ ಜನರು ಆ ಕ್ಷಣವನ್ನು ಜೇಮ್ಸ್ ಬಾಂಡ್ ಸಿನಿಮಾದ ರೋಚಕ ದೃಶ್ಯದ ರೀತಿಯಲ್ಲಿ ನೋಡಿ ಆನಂದಿಸಿದ್ದರು. ನಾಗರಿಕ ವಿಮಾನಯಾನ ಸಚಿವಾಲಯದ ಆಗಿನ ಹೇಳಿಕೆಯೂ ಅದೇ ರೀತಿ ಇತ್ತು- ‘ಜೇಮ್ಸ್ ಬಾಂಡ್ ಸಿನಿಮಾಗಳ ಮೂಲಕ ಜನರ ಕಲ್ಪನೆಗೆ ರೆಕ್ಕೆಪುಕ್ಕ ಮೂಡಿಸಿದ್ದ ಸೀಪ್ಲೇನ್ ಕೊನೆಗೂ ಭಾರತಕ್ಕೆ ಬಂದಿದೆ!’ ಎಂದು ಅದರಲ್ಲಿ ಬರೆಯಲಾಗಿತ್ತು.
ಹದಿನೈದು ವರ್ಷಗಳ ನಂತರ ತಿರುಗಿ ನೋಡಿದರೆ, ಅಂಡಮಾನ್ ದ್ವೀಪಗಳಲ್ಲಿ ‘ಜಲ್ ಹನ್ಸ್’ ಹೆಸರಿನಲ್ಲಿ ಆರಂಭವಾದ ಆ ಕ್ರಾಂತಿಕಾರಿ ಯೋಜನೆ ನನಸಾಗದ ಒಂದು ಕನಸಿನಂತೆ ಕಾಣುತ್ತಿದೆ. ರೆಕ್ಕೆ ಕತ್ತರಿಸಿದ ಹಕ್ಕಿಯ ಹಾಗೆ ಆ ಮಹತ್ವಾಕಾಂಕ್ಷಿ ಯೋಜನೆ ಎಲ್ಲಿತ್ತೋ ಅಲ್ಲೇ ಉಳಿದಿದೆ. ಈ ಸಾಹಸಕ್ಕೆ ಕೈಹಾಕಿದವರು ನಿರಾಸೆ ಅನುಭವಿಸಿದ್ದಾರೆ. ಒಂದು ಉದಾಹರಣೆ ಹೇಳಬೇಕೆಂದರೆ, ಕೆಲವು ವರ್ಷಗಳ ಹಿಂದೆ ಕೊಚ್ಚಿಯ ಇಬ್ಬರು ಪೈಲಟ್ಗಳು ತಾವು ಸ್ಥಾಪಿಸಿದ ಉದ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ 9 ಆಸನಗಳ ‘ಕೋಡಿಯಾಕ್’ ಸೀಪ್ಲೇನ್ಅನ್ನು ಬಿಡಿಭಾಗಗಳಾಗಿ ಬೇರ್ಪಡಿಸಿ ಅಮೆರಿಕಕ್ಕೆ ವಾಪಸ್ ಕಳುಹಿಸಿದ್ದರು. ಇದನ್ನು ನೋಡಿದಾಗ, ಭಾರತದ ಸೀಪ್ಲೇನ್ ಕಥೆ ಜೇಮ್ಸ್ ಬಾಂಡ್ ಸಿನಿಮಾ ಆಗುವ ಬದಲಿಗೆ ಬಾಲಿವುಡ್ನ ಸೋತ ಚಿತ್ರದಂತೆ ಭಾಸವಾಗುತ್ತಿತ್ತು. ಆದರೆ ಕಥೆ ಅಲ್ಲಿಗೇ ಮುಗಿಯಲಿಲ್ಲ. ಕೇಂದ್ರ ಸರ್ಕಾರದ ಹೊಸ ಸಬ್ಸಿಡಿಗಳು ಮತ್ತು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ನೀತಿಗಳಿಂದಾಗಿ ಸೀಪ್ಲೇನ್ ಉದ್ಯಮ ಈಗ ಮತ್ತೆ ಗರಿಗೆದರಿಕೊಂಡು ಎದ್ದು ಕುಳಿತಿದೆ. ಸಮುದ್ರ ವಿಮಾನಗಳು ಈಗ ಮತ್ತೆ ಸುದ್ದಿ ಮಾಡತೊಡಗಿವೆ.
ಸದ್ಯದಲ್ಲೇ ಸೇವೆ ಶುರು
ಮುಂದಿನ ಕೆಲವೇ ವಾರಗಳಲ್ಲಿ ಕೊಚ್ಚಿಯಿಂದ ಲಕ್ಷದ್ವೀಪದ ಅಗಟ್ಟಿ, ಕವರಟ್ಟಿ, ಕಲ್ಪೇನಿ, ಕಿಲ್ಟನ್ ಮತ್ತು ಕದ್ಮತ್ ಎಂಬ ಐದು ದ್ವೀಪಗಳಿಗೆ 19 ಆಸನಗಳ ‘ಟ್ವಿನ್ ಆಟರ್’ ವಿಮಾನದ ಮೂಲಕ ಸೀಪ್ಲೇನ್ ಸೇವೆ ಆರಂಭಿಸಲು ‘ಸ್ಕೈಹಾಪ್ ಏವಿಯೇಷನ್’ ಸಂಸ್ಥೆ ಸಜ್ಜಾಗಿದೆ. ಲಕ್ಷದ್ವೀಪಕ್ಕೆ ಸೀಮಿತವಾಗದೆ ಅದರಾಚೆಗೂ, ಅಂದರೆ ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಈಶಾನ್ಯ ಭಾರತ ಮತ್ತು ಇತರ ಆಯಕಟ್ಟಿನ ಸ್ಥಳಗಳಿಗೆ ಸೇವೆ ಆರಂಭಿಸುವ ಉದ್ದೇಶವನ್ನೂ ಈ ಸಂಸ್ಥೆ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 500 ಸೀಪ್ಲೇನ್ಗಳ ಸೇವೆ ಲಭ್ಯವಿರುತ್ತದೆ ಎನ್ನುತ್ತಾರೆ ತಜ್ಞರು.
ಚಿಗುರಿದ ಭರವಸೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಇತ್ತೀಚಿನ ಬಜೆಟ್ನಲ್ಲಿ ಸೀಪ್ಲೇನ್ ವಲಯಕ್ಕೆ ಬೆಂಬಲ ನೀಡಲು ‘ವಯಬಿಲಿಟಿ ಗ್ಯಾಪ್ ಫಂಡಿಂಗ್’ (ವಿಜಿಎಫ್) ಯೋಜನೆಯನ್ನು ಘೊಷಿಸಿದ ನಂತರ ಈ ವಲಯದಲ್ಲಿ ಹೊಸ ಭರವಸೆ ಚಿಗುರಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಆರ್ಥಿಕವಾಗಿ ಲಾಭದಾಯಕವಲ್ಲದ, ಆದರೆ ಸಾರ್ವಜನಿಕ ಸೇವೆಯ ದೃಷ್ಟಿಯಿಂದ ಮುಖ್ಯವಾದ ಯೋಜನೆಗಳಿಗೆ ವಿಜಿಎಫ್ ನೆರವನ್ನು ನೀಡಲಾಗುತ್ತದೆ.
ಹೇಳಿ ಮಾಡಿಸಿದಂತಿದೆ!
ಸುಮಾರು 11,000 ಕಿ.ಮೀ. ಕರಾವಳಿ ತೀರ ಮತ್ತು ಅಸಂಖ್ಯಾತ ದ್ವೀಪಗಳನ್ನು ಹೊಂದಿರುವ ಭಾರತ ಸೀಪ್ಲೇನ್ಗಳಿಗಾಗಿಯೇ ಮಾಡಿದಂತಿದೆ. ರನ್ವೇ ನಿರ್ವಿುಸುವುದಕ್ಕೆ ಹೆಚ್ಚು ವೆಚ್ಚ ತಗಲುವ ಕಡೆಗಳಲ್ಲಿ ಸೀಪ್ಲೇನ್ಗಳು ಪರಿಣಾಮಕಾರಿ. ನಾಲ್ಕು ಗಂಟೆಗಳ ಬೋಟ್ ಪ್ರಯಾಣ ಮಾಡಬೇಕಾದ ದೂರವನ್ನು ಇವು 30 ನಿಮಿಷಗಳಲ್ಲಿ ಕ್ರಮಿಸುತ್ತವೆ. ಮಾಲ್ಡೀವ್ಸ್ ಮಾದರಿ ಇದಕ್ಕೆ ಅತ್ಯುತ್ತಮ ಉದಾಹರಣೆ.
32 ಸೀಪ್ಲೇನ್ ಮಾರ್ಗಗಳು
ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, 32 ಸೀಪ್ಲೇನ್ ಮಾರ್ಗಗಳನ್ನು ಮಂಜೂರು ಮಾಡಲಾಗಿದ್ದರೂ, ಸದ್ಯಕ್ಕೆ ಯಾವುದೇ ಮಾರ್ಗ ಕಾರ್ಯ ನಿರ್ವಹಿಸುತ್ತಿಲ್ಲ. ಈಗ ಎಲ್ಲರ ಗಮನ ಕೊಚ್ಚಿ-ಲಕ್ಷದ್ವೀಪ ಮಾರ್ಗದ ಮೇಲಿದೆ. ಪ್ರವಾಸಿಗರು ದೀರ್ಘ ಬೋಟ್ ಪ್ರಯಾಣದ ಬದಲಿಗೆ ನೇರವಾಗಿ ದ್ವೀಪಗಳ ಹತ್ತಿರದ ಸಮುದ್ರದಲ್ಲಿ ಇಳಿದು ರೆಸಾರ್ಟ್ಗಳಿಗೋ, ಮನೆಗಳಿಗೋ, ಆಫೀಸುಗಳಿಗೋ ತೆರಳುವ ದಿನಗಳು ಹತ್ತಿರದಲ್ಲಿವೆ.
ಭಾರತದಲ್ಲಿ ಉತ್ಪಾದನೆ ನಿರೀಕ್ಷೆ
ಒಂದು ಹೊಸ ಸೀ ಪ್ಲೇನ್ ಬೆಲೆ 8 ದಶಲಕ್ಷ ಡಾಲರ್ (ಸುಮಾರು 72 ಕೋಟಿ ರೂ.); ಜಾಗತಿಕ ಸೀಪ್ಲೇನ್ ಮಾರುಕಟ್ಟೆಯಲ್ಲಿ ಶೇ. 90ರಷ್ಟು ಪಾಲು ಹೊಂದಿರುವ ಕೆನಡಾದ ‘ಡಿ ಹ್ಯಾವಿಲ್ಯಾಂಡ್’ ಕಂಪನಿ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುವ ಸಾಧ್ಯತೆ ಇದೆ. ಮುಂದಿನ ದಶಕದಲ್ಲಿ ಭಾರತಕ್ಕೆ ಕನಿಷ್ಠ 50-70 ಸೀಪ್ಲೇನ್ಗಳ ಅಗತ್ಯವಿರುತ್ತದೆ. ಬೇಡಿಕೆ ಆಧರಿಸಿ ಈ ಕಂಪನಿ ಇಲ್ಲಿಯೇ ಸೀಪ್ಲೇನ್ ತಯಾರಿಸುವ ನಿರೀಕ್ಷೆ ಇದೆ.
ಪೈಲಟ್ಗಳ ಕೊರತೆ
ಮೂಲಸೌಕರ್ಯದ ಜತೆಗೆ ತರಬೇತಿ ಪಡೆದ ಪೈಲಟ್ಗಳ ಕೊರತೆಯೂ ಸೀಪ್ಲೇನ್ ವಲಯಕ್ಕೆ ದೊಡ್ಡ ಸವಾಲಾಗಿದೆ. ಇದಕ್ಕಾಗಿ ವಿದೇಶಿ ಪೈಲಟ್ಗಳ ಜತೆಗೆ ಭಾರತೀಯ ಪೈಲಟ್ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನಾಗರಿಕ ವಿಮಾನಯಾನದ ಜತೆಗೆ, ಈ ಸೀಪ್ಲೇನ್ಗಳು ಕಡಲ ಗಸ್ತು ಮತ್ತು ರಕ್ಷಣಾ ಕಾರ್ಯಾಚರಣೆಯಂತಹ ಸೇನಾ ಉದ್ದೇಶಗಳಿಗೂ ಸಹಕಾರಿಯಾಗಲಿವೆ ಎನ್ನುತ್ತಾರೆ ತಜ್ಞರು.
2010- ಪವನ್ ಹನ್ಸ್ನಿಂದ ‘ಜಲ್ ಹನ್ಸ್’ಗೆ ಚಾಲನೆ; ದೇಶದ ಮೊದಲ ವಾಣಿಜ್ಯ ಸೀಪ್ಲೇನ್ ಸೇವೆ
2011-2019 - ಮಹಾರಾಷ್ಟ್ರ, ಕೇರಳ, ಗೋವಾ, ಅಂಡಮಾನ್ನಲ್ಲಿ ಹಲವು ಪರೀಕ್ಷಾರ್ಥ ಪ್ರಯೋಗಗಳು
2020- ಅಹಮದಾಬಾದ್ (ಸಬರಮತಿ) - ಕೆವಾಡಿಯಾ ಮಾರ್ಗಕ್ಕೆ ಚಾಲನೆ. 2021ರ ಏಪ್ರಿಲ್ವರೆಗೆ ಕಾರ್ಯನಿರ್ವಹಣೆ
2021- ಸಾಗರಮಾಲಾ ಸೀಪ್ಲೇನ್ ಸೇವೆ ಘೊಷಣೆ; 25 ಜಲ ನಿಲ್ದಾಣಗಳಿಗೆ ಜಾಗ ಫಿಕ್ಸ್
2024- 32 ಮಾರ್ಗಗಳಿಗೆ ಮಂಜೂರಾತಿ, ಆದರೆ ಕಾರ್ಯಾಚರಣೆಯಲ್ಲಿ ಶೂನ್ಯ ಪ್ರಗತಿ
2026- ಕೊಚ್ಚಿ-ಲಕ್ಷದ್ವೀಪ ಸೇವೆ ಶೀಘ್ರ ಆರಂಭದ ನಿರೀಕ್ಷೆ; 19 ಆಸನಗಳ ಟ್ವಿನ್ ಆಟರ್ ಬಳಕೆ
(ಮಾಹಿತಿ: ನಾಗರಿಕ ವಿಮಾನಯಾನ ಸಚಿವಾಲಯ)
ನೀರ ಮೇಲೆ ಟೇಕ್ಆಫ್ ಲ್ಯಾಂಡಿಂಗ್ ಹೇಗೆ?
ಸೀಪ್ಲೇನ್ಗಳಲ್ಲಿ ಎರಡು ವಿಧಗಳಿವೆ. ಫ್ಲೋಟ್ ಪ್ಲೇನ್- ವಿಮಾನದ ಚಕ್ರಗಳ ಬದಲಿಗೆ ಉದ್ದನೆಯ ದೋಣಿಯಂತಹ ರಚನೆ (ಫ್ಲೋಟ್ಗಳು) ಇರುತ್ತವೆ. ಫ್ಲೈಯಿಂಗ್ ಬೋಟ್- ವಿಮಾನದ ಕೆಳಭಾಗವೇ (ಹಲ್) ಒಂದು ದೋಣಿಯಂತೆ ವಿನ್ಯಾಸಗೊಂಡಿರುತ್ತದೆ, ಇದು ನೇರವಾಗಿ ನೀರಿನ ಮೇಲೆ ತೇಲುತ್ತದೆ. ಟೇಕ್ಆಫ್ ಆಗುವ ವಿಧಾನವೂ ರೋಚಕ. ನೀರಿನ ಮೇಲ್ಮೈಯಲ್ಲಿ ಘರ್ಷಣೆ (ಫ್ರಿಕ್ಷನ್) ಹೆಚ್ಚಿರುವುದರಿಂದ, ಗಾಳಿಯಲ್ಲಿ ಏರಲು ವಿಮಾನಕ್ಕೆ ಹೆಚ್ಚಿನ ವೇಗದ ಅಗತ್ಯವಿರುತ್ತದೆ. ಮೊದಲು ಎಂಜಿನ್ ಸ್ಟಾರ್ಟ್ ಮಾಡಿ ನೀರಿನ ಮೇಲೆ ನಿಧಾನವಾಗಿ ಚಲಿಸುತ್ತದೆ (ಟ್ಯಾಕ್ಸಿಯಿಂಗ್). ವೇಗ ಹೆಚ್ಚಾದಂತೆ, ವಿಮಾನದ ಮುಂಭಾಗ ಸ್ವಲ್ಪ ಮೇಲೆ ಎದ್ದು, ಫ್ಲೋಟ್ಗಳ ಹಿಂಭಾಗ ಮಾತ್ರ ನೀರನ್ನು ರ್ಸ³ಸುತ್ತಿರುತ್ತದೆ. ಇದನ್ನು ‘ಆನ್ ದ ಸ್ಟೆಪ್’ (ಸ್ಟೆಪ್ ಪೊಜಿಷನ್) ಎನ್ನುತ್ತಾರೆ.
ಇದು ನೀರಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ವೇಗ (ಗಂಟೆಗೆ 80-100 ಕಿ.ಮೀ.ಗಿಂತ ಹೆಚ್ಚು) ದೊರೆತಾಗ, ರೆಕ್ಕೆಗಳ ಕೆಳಗೆ ಸೃಷ್ಟಿಯಾಗುವ ಗಾಳಿಯ ಒತ್ತಡದಿಂದ (ಲಿಫ್ಟ್) ವಿಮಾನ ನೀರನ್ನು ಬಿಟ್ಟು ಮೇಲೆ ಏರುತ್ತದೆ. ನೀರಿನ ಮೇಲೆ ಲ್ಯಾಂಡಿಂಗ್ ಮಾಡುವುದು ರನ್ವೇ ಮೇಲೆ ಇಳಿಯುವುದಕ್ಕಿಂತ ಸವಾಲಿನ ಕೆಲಸ. ಪೈಲಟ್ ಮೊದಲು ನೀರಿನ ಮೇಲ್ಮೈಯಲ್ಲಿ ಅಲೆಗಳು ಜಾಸ್ತಿ ಇವೆಯೇ ಎಂದು ಪರೀಕ್ಷಿಸುತ್ತಾರೆ. ಗಾಳಿಯ ದಿಕ್ಕಿಗೆ ವಿರುದ್ಧವಾಗಿ ವಿಮಾನವನ್ನು ತರುತ್ತಾರೆ. ನೀರನ್ನು ರ್ಸ³ಸುವ ಮೊದಲು ವಿಮಾನದ ಮೂತಿಯನ್ನು ಸ್ವಲ್ಪ ಮೇಲೆತ್ತಿ, ಫ್ಲೋಟ್ಗಳ ಹಿಂಭಾಗ ಮೊದಲು ನೀರನ್ನು ತಾಕುವಂತೆ ಮಾಡುತ್ತಾರೆ. ನೀರನ್ನು ರ್ಸ³ಸಿದ ತಕ್ಷಣ ನೀರಿನ ಪ್ರತಿರೋಧದಿಂದಾಗಿ ವಿಮಾನದ ವೇಗ ಕಡಿಮೆಯಾಗುತ್ತದೆ. ನಂತರ ಅದು ದೋಣಿಯಂತೆ ತೇಲುತ್ತಾ ದಡದತ್ತ ಸಾಗುತ್ತದೆ. ಇದರಲ್ಲಿ ಸವಾಲುಗಳೂ ಇವೆ. ನೀರು ಅತಿ ಶಾಂತವಾಗಿದ್ದಾಗ ಪೈಲಟ್ಗೆ
ನೀರಿನ ಆಳ ಮತ್ತು ಮೇಲ್ಮೈ ಸರಿಯಾಗಿ ಕಾಣಿಸುವುದಿಲ್ಲ, ಇದು ಅಪಾಯಕಾರಿ. ದೊಡ್ಡ ಅಲೆಗಳಿದ್ದರೆ ವಿಮಾನ ಪಲ್ಟಿಯಾಗುವ ಅಥವಾ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಕರ್ನಾಟಕಕ್ಕೂ ಬರುತ್ತಾ?
ಕೇಂದ್ರದ ಉಡಾನ್ ಯೋಜನೆಯಡಿ ಕರ್ನಾ ಟಕದ ಸಮುದ್ರತೀರ, ಜಲಾಶಯಗಳನ್ನು ಸೀಪ್ಲೇನ್ ಮಾರ್ಗಗಳಿಗಾಗಿ, ಜಲನಿಲ್ದಾಣಗಳಿಗಾಗಿ (ವಾಟರ್ ಏರೋಡ್ರೋಮ್ ಗುರುತಿಸಲಾಗಿದೆ. ಮಂಗಳೂರು, ಕಬಿನಿ ಜಲಾಶಯ, ಶರಾವತಿ ಹಿನ್ನೀರು, ಬೈಂದೂರು ಮತ್ತು ಮಲ್ಪೆ ಬೀಚ್ ಮುಂತಾದವು ಇದರಲ್ಲಿವೆ. ಕಾರವಾರದ ಕಾಳಿ ನದಿ ಮುಖಜ ಭೂಮಿ, ಉತ್ತರ ಕನ್ನಡದ ಗಣೇಶಗುಡಿ (ಸುಪಾ ಅಣೆಕಟ್ಟು), ಹಂಪಿಯ ತುಂಗಭದ್ರಾ ನದಿ, ಕೃಷ್ಣರಾಜ ಸಾಗರ (ಕೆಆರ್ಎಸ್), ಆಲಮಟ್ಟಿ ಅಣೆಕಟ್ಟು ಕೂಡ ಸಂಭಾವ್ಯ ಪಟ್ಟಿಯಲ್ಲಿವೆ. ಇತ್ತೀಚಿನ ಅಪ್ಡೇಟ್ ಪ್ರಕಾರ, ಮಂಗಳೂರು ಮತ್ತು ಕಬಿನಿ ಜಲಾಶಯಗಳಿಗೆ ಸೀಪ್ಲೇನ್ ಹಾರಾಟ ನಡೆಸಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ಪತ್ರಗಳನ್ನು (ಲೆಟರ್ ಆಫ್ ಇಂಟೆಂಟ್) ವಿತರಿಸಲಾಗಿದೆ. ಕೊಚ್ಚಿ-ಲಕ್ಷದ್ವೀಪ ಸೇವೆ ಯಶಸ್ವಿಯಾದರೆ, ಅದು ಕರ್ನಾಟಕದ ಮಾರ್ಗಗಳಿಗೂ ದೊಡ್ಡ ಪ್ರೇರಣೆ ನೀಡಲಿದೆ.