ನೀರಿನ ರಭಸಕ್ಕೆ ಕೊಚ್ಚಿಹೋದ ಸ್ಕಾರ್ಪಿಯೋ ಕಾರು
- ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ದಾದರ್ ನಾಲಾ
- ಹಳ್ಳ ದಾಟಲು ಮುಂದಾದ ಮಹೀಂದ್ರಾ ಸ್ಕಾರ್ಪಿಯೋ
- ನೀರಿನ ರಭಸಕ್ಕೆ ಕೊಚ್ಚಿಹೋದ ಸ್ಕಾರ್ಪಿಯೋ ಕಾರು
Chhattisgarh flood: ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಮುಂದಾದ ಮಹೀಂದ್ರಾ ಸ್ಕಾರ್ಪಿಯೋ ವಾಹನ ನೀರಿನ ರಭಸಕ್ಕೆ ಸಿಲುಕಿ ಮುಳುಗಿದ ವಿಡಿಯೋ ಈಗ ಸಾಮಾಜಿಕ ಘಟನೆ ವೈರಲ್ ಆಗಿದೆ.
ಇನ್ನು, ಈ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ದಾದರಖುರ್ದ್ ಗ್ರಾಮದ ಮಾಣಿಕ್‌ಪುರ ಪೊಲೀಸ್ ಚೌಕಿ ವ್ಯಾಪ್ತಿಯ ದಾದರ್ ನಾಲಾದಲ್ಲಿ ನಡೆದಿದೆ. ಭೀಕರ ಮಳೆಯಿಂದ ನಾಲಾದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಹೀಗಿದ್ದರೂ ಚಾಲಕ ವಾಹನವನ್ನು ಹಳ್ಳದ ಮೂಲಕ ಚಲಾಯಿಸಲು ಪ್ರಯತ್ನಿಸಿದ್ದಾನೆ. ಹಳ್ಳದ ಮಧ್ಯಭಾಗ ತಲುಪುತ್ತಿದ್ದಂತೆ ನೀರಿನ ರಭಸಕ್ಕೆ ವಾಹನ ನಿಯಂತ್ರಣ ಕಳೆದುಕೊಂಡಿದ್ದು, ಸ್ಕಾರ್ಪಿಯೋ ನೀರಿನಲ್ಲಿ ಕೊಚ್ಚಿಹೋಗುತ್ತಾ ಮುಳುಗಲು ಶುರುವಾಯಿತು.
ಈ ವೇಳೆ ಸ್ಥಳೀಯ ಗ್ರಾಮಸ್ಥರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಪ್ರಾಣವನ್ನು ಪಣಕ್ಕಿಟ್ಟು ಮುಳುಗುತ್ತಿದ್ದ ಚಾಲಕ ಹಾಗೂ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಚಾಲಕ ಹೆಚ್ಚು ಮದ್ಯಪಾನ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲೂ ಗ್ರಾಮಸ್ಥರು ಚಾಲಕ ಕುಡಿದಿದ್ದಾನೆ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಆದರೆ ಚಾಲಕ ನಿಜವಾಗಿಯೂ ಮದ್ಯಪಾನ ಮಾಡಿದ್ದನೇ ಎಂಬುದು ದೃಢಪಟ್ಟಿಲ್ಲ.
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಾಯದ ನಡುವೆಯೂ ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಾಲಕನ ಮದ್ಯಪಾನದ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.