ವಿದೇಶಾಂಗ ಸಚಿವ ಎಸ್. ಜೈಶಂಕರ್ External Affairs Minister S. Jaishankar 
ದೇಶ

SCO ಶೃಂಗಸಭೆ; ಭಾರತಕ್ಕೆ ಭಯೋತ್ಪಾದನೆಯಿಂದ ತನ್ನ ಜನರನ್ನು ರಕ್ಷಿಸುವ ಹಕ್ಕಿದೆ: ವಿದೇಶಾಂಗ ಸಚಿವ ಜೈಶಂಕರ್ | Jaishankar

ಮಾಸ್ಕೋ: ಭಾರತವು ತನ್ನ ಜನರನ್ನು ಭಯೋತ್ಪಾದನೆಯಿಂದ ರಕ್ಷಿಸುವ ಹಕ್ಕನ್ನು ಹೊಂದಿದೆ ಮತ್ತು ಅದನ್ನು ಚಲಾಯಿಸುತ್ತದೆ ಎಂದು ಮಂಗಳವಾರ (ನ.18) ರಷ್ಯಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar) ಹೇಳಿದ್ದಾರೆ.
ಈ ಬಗ್ಗೆ ಮಾಸ್ಕೋದಲ್ಲಿ ನಡೆದ SCO ಸರ್ಕಾರಿ ಮುಖ್ಯಸ್ಥರ ಶೃಂಗಸಭೆಯಲ್ಲಿ ಮಾತನಾಡಿದ ಜೈಶಂಕರ್​, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ಜಗತ್ತು ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕು ಎಂದು ಕರೆ ನೀಡಿದ್ದಾರೆ.
ಎಸ್ ಜೈಶಂಕರ್ ಹೇಳಿದ್ದೇನು?
ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಿಗೆ ಜಗತ್ತು ಶೂನ್ಯ ಸಹಿಷ್ಣುತೆಯನ್ನು ತೋರಿಸುವುದು ಅತ್ಯಗತ್ಯವಾಗಿದೆ. ಭಯೋತ್ಪಾದನೆ ವಿರುದ್ಧ ಯಾವುದೇ ಸಮರ್ಥನೆ, ಮನ್ನಣೆ ಮತ್ತು ಯಾವುದೇ ಮುಚ್ಚಿಡುವಿಕೆ ಇರಬಾರದು. ಅಲ್ಲದೆ, ನಾವು ಭಯೋತ್ಪಾದನೆಯ ವಿರುದ್ಧ ನಮ್ಮ ಜನರನ್ನು ರಕ್ಷಿಸುವ ಹಕ್ಕು ನಮಗಿದೆ. ಅಲ್ಲದೆ, ನಾವು ಅದನ್ನು ಚಲಾಯಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಸಂಬಂಧವನ್ನು ಯಾವಾಗಲೂ ಮುಕ್ತತೆಯೊಂದಿಗೆ ಸಂಕೀರ್ಣ ಜಾಗತಿಕ ಪರಿಸ್ಥಿತಿಯ ಬಗ್ಗೆಯೂ ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಯುಕ್ರೇನ್‌ನಲ್ಲಿನ ಯುದ್ಧ, ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳು ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕು ಎಂದು ವಿದೇಶಾಂಗ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಘರ್ಷಗಳಿಗೆ ಆರಂಭಿಕ ಅಂತ್ಯ ಮತ್ತು ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳುವುದು ಇಡೀ ಅಂತರಾಷ್ಟ್ರೀಯ ಸಮುದಾಯದ ಹಿತಾಸಕ್ತಿಯಾಗಿದೆ ಎಂದು ಜೈಶಂಕರ್​ ಪ್ರತಿಪಾದಿಸಿದ್ದಾರೆ.

ಜೈಶಂಕರ್ 3 ದಿನಗಳ ರಷ್ಯಾ ಭೇಟಿ

ಜೈಶಂಕರ್ ಮಂಗಳವಾರ ಬೆಳಿಗ್ಗೆ ಮೂರು ದಿನಗಳ ಭೇಟಿಗಾಗಿ ಮಾಸ್ಕೋಗೆ ತೆರಳಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ SCO ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ತಿಂಗಳು ಭಾರತಕ್ಕೆ ಬರಳಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರ ನಿರೀಕ್ಷಿತ ಭೇಟಿಗೂ ಮುನ್ನ ಹಲವಾರು ಉನ್ನತ ಮಟ್ಟದ ಸಭೆಗಳನ್ನು ಜೈಶಂಕರ್​ ನಡೆಸಲಿದ್ದಾರೆ. ಮಾಸ್ಕೋಗೆ ಹೋದ ಕೂಡಲೇ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಜೊತೆಗೆ SCO, BRICS, ವಿಶ್ವಸಂಸ್ಥೆ ಮತ್ತು G-20 ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದಾರೆ,(ಏಜೆನ್ಸೀಸ್).