Rajendra Chaudhary | ಸಮಾಜವಾದಿ ಪಕ್ಷದ ಶಾಸಕನಿಗೆ ಬಿಗ್ ಶಾಕ್ ಕೊಟ್ಟ ವಿದ್ಯಾರ್ಥಿಗಳು!
ಶಾಲಾ ಮಕ್ಕಳ ಗುಂಪೊಂದು ಸಮಾಜವಾದಿ ಪಕ್ಷದ ಶಾಸಕ ರಾಜೇಂದ್ರ ಚೌಧರಿ (Rajendra Chaudhary) ಅವರ ಬೆಂಗಾವಲು ವಾಹನವನ್ನು ತಡೆದು, ತಾವು ಶಾಲೆಗೆ ಹೋಗಲು ಬಳಸುವ ಕೆಸರುಮಯ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಶಾಲೆ ಮುಗಿದು ಮನೆಗೆ ಹಿಂತಿರುಗುತ್ತಿದ್ದಾಗ ಶಾಸಕರ ಬೆಂಗಾವಲು ಪಡೆಯನ್ನು ತಡೆದ ವಿದ್ಯಾರ್ಥಿಗಳು, ನಿರಂತರವಾಗಿ ನೀರು ನಿಲ್ಲುವುದರಿಂದ ರಸ್ತೆಯಲ್ಲಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ದೂರಿದರು. ಅಲ್ಲದೆ ಶಾಲೆಗೆ ಹೋಗುವಾಗ ಹಾಗೂ ಬರುವಾಗ ಕೆಲವು ಮಕ್ಕಳು ಜಾರಿ ಕೆಸರು ನೀರಿನಲ್ಲಿ ಬಿದ್ದಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸಮಸ್ಯೆ ಇದ್ದ ಸ್ಥಳಕ್ಕೆ ಶಾಸಕರನ್ನ ಕರೆದೊಯ್ದು ಮಕ್ಕಳು
ವಿದ್ಯಾರ್ಥಿಗಳ ಮಾತನ್ನು ಕೇಳಿದ ಶಾಸಕ ಚೌಧರಿ ತಮ್ಮ ವಾಹನದಿಂದ ಕೆಳಗಿಳಿದಾಗ, ಮಕ್ಕಳು ಅವರನ್ನು ಸಮಸ್ಯೆ ಇರುವ ಜಾಗಕ್ಕೇ ಕರೆದೊಯ್ದು ರಸ್ತೆಯ ದುಸ್ಥಿತಿಯನ್ನು ತೋರಿಸಿದರು. ತಾವು ಪ್ರತಿದಿನ ಈ ಕೆಸರು ರಸ್ತೆಯಲ್ಲೇ ಹೆಣಗಾಡುತ್ತಾ ಹೋಗಬೇಕಿದ್ದು, ಹಲವು ಬಾರಿ ಕೊಳಕು ಮತ್ತು ಒದ್ದೆಯಾದ ಯೂನಿಫಾರ್ಮ್ ಹಾಗೂ ಶೂಗಳೊಂದಿಗೆ ಶಾಲೆ ತಲುಪುವಂತಾಗಿದೆ ಎಂದು ವಿವರಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಶಾಸಕರಿಂದ ಸ್ಪಷ್ಟ ಭರವಸೆ ಸಿಕ್ಕ ನಂತರವಷ್ಟೇ ವಿದ್ಯಾರ್ಥಿಗಳು ಅವರ ವಾಹನಕ್ಕೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು ಎಂದು ತಿಳಿದುಬಂದಿದೆ.
ಬಸ್ತಿಯ ಈ ರಸ್ತೆಯು ಮುಡಾದಿಹಾ (ಭೋಪಾಲ್ಪುರ) ಮತ್ತು ಹನುಮಾನ್‌ಗಂಜ್ ಕಡೆಗೆ ಹೋಗುವ ಸರಯೂ ಕಾಲುವೆ ವಿಭಾಗ-4 ರ ಭಾಗವಾಗಿದೆ. ಇದಕ್ಕೆ ಇಟ್ಟಿಗೆಗಳನ್ನು ಹಾಸಲಾಗಿದ್ದರೂ, ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯುದ್ದಕ್ಕೂ ನೀರು ತುಂಬಿಕೊಂಡಿದೆ. ನಿರಂತರವಾಗಿ ನೀರು ನಿಲ್ಲುವುದರಿಂದ ರಸ್ತೆಯು ಕೆಸರುಗದ್ದೆಯಂತಾಗಿದ್ದು, ಪಾದಚಾರಿಗಳು ಹಾಗೂ ಶಾಲಾ ಮಕ್ಕಳು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹನುಮಾನ್‌ಗಂಜ್ ಕಾಲುವೆ ರಸ್ತೆಯನ್ನು ಪ್ರತಿದಿನ ಸುತ್ತಮುತ್ತಲಿನ ಇಂಟರ್ಮೀಡಿಯೇಟ್ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬಳಸುತ್ತಾರೆ. ಯೂನಿಫಾರ್ಮ್ ಮತ್ತು ಶೂಗಳನ್ನು ಧರಿಸಿಕೊಂಡೇ ಕೆಸರಿನಲ್ಲಿ ನಡೆಯಬೇಕಾದ ಅನಿವಾರ್ಯತೆ ಮಕ್ಕಳಿಗಿದ್ದು, ಆಯಾ ತಪ್ಪಿ ಕೆಸರು ನೀರಿಗೆ ಬೀಳುವ ಘಟನೆಗಳು ಮರುಕಳಿಸುತ್ತಿವೆ.
ಮಳೆಯಿಂದಾಗಿ ಪ್ರತಿದಿನ ಎದುರಾಗುತ್ತಿದ್ದ ಈ ಸಮಸ್ಯೆಯಿಂದ ಬೇಸತ್ತಿದ್ದ ವಿದ್ಯಾರ್ಥಿಗಳು, ಶಾಲೆ ಮುಗಿದ ನಂತರ ಅದೇ ಮಾರ್ಗವಾಗಿ ಶಾಸಕರ ಬೆಂಗಾವಲು ವಾಹನ ಸಾಗುತ್ತಿದ್ದಾಗ ನೇರವಾಗಿ ಅವರ ಗಮನಕ್ಕೆ ತರಲು ನಿರ್ಧರಿಸಿ ವಾಹನವನ್ನು ತಡೆದಿದ್ದರು. ವಿದ್ಯಾರ್ಥಿಗಳ ಈ ಧೈರ್ಯದ ನಿರ್ಧಾರ ಹಾಗೂ ಶಾಸಕರ ತಕ್ಷಣದ ಸ್ಪಂದನೆಯು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಮೂಡಿಸಿದೆ. ಅಲ್ಲದೆ, ತಮ್ಮ ದೈನಂದಿನ ಪ್ರಯಾಣದ ಗಂಭೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಶಾಸಕರ ವಾಹನವನ್ನೇ ತಡೆದು ಗಮನ ಸೆಳೆದ ಮಕ್ಕಳ ಈ ನಡೆ ಸ್ಥಳೀಯವಾಗಿ ಭಾರಿ ಮೆಚ್ಚಗೆಗೆ ಪಾತ್ರವಾಗಿದೆ(ಏಜೆನ್ಸೀಸ್).