ದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ(Bengal SIR) ಸಂಬಂಧಿಸಿದಂತೆ ಆರೋಪ ಮತ್ತು ಪ್ರತ್ಯಾರೋಪ ಜೋರಾಗಿದ್ದು, ಸದ್ಯ ಇದು ಸುಪ್ರೀಂ ಕೋರ್ಟ್ ಅಂಗಳಕ್ಕೂ ತಲುಪಿದೆ.
ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠವು ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಕೈಗೊಳ್ಳಲು ನೆರವಾಗುವಂತೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕೊಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಬಾಕಿ ಇರುವ ಆಕ್ಷೇಪಣೆಗಳನ್ನು ನಿರ್ಣಯಿಸಲು ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಹಾಲಿ ಮತ್ತು ಮಾಜಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಲಾಗಿದೆ.
ಎರಡೂ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯ ಬಗ್ಗೆ ಚರ್ಚಿಸುತ್ತಿದ್ದು, ಇದರಿಂದ ಸಂವಿಧಾನಾತ್ಮಕ ಕಾರ್ಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನ್ಯಾಯಾಲಯದ ಪ್ರಮುಖ ಆದ್ಯತೆಯಾಗಿದೆ ಎಂದು ಸುಪ್ರೀಂ ಕೋರ್ಟ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ಅಧಿಕಾರಿಗಳ ಯೋಜನೆಯ ಸೂಕ್ಷ್ಮ ವಿವರಗಳನ್ನು ರೂಪಿಸಲು, ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯುಕ್ತರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಮತ್ತು ಇತರ ಉನ್ನತ ಅಧಿಕಾರಿಗಳಿಗೆ ನಾಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಭೆ ನಡೆಸುವಂತೆ ನಿರ್ದೇಶಿಸಿದೆ.
ಒಂದು ಕಡೆ ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿಯನ್ನು ಹೇಳುತ್ತಿದೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ತನ್ನ ಮಿತಿಗಳನ್ನು ಹೇಳುತ್ತಿದೆ. ಇಂತಹ ಸಂದರ್ಭದಲ್ಲಿ, ಯಾವ ಅಧಿಕಾರಿ ಯಾವ ದರ್ಜೆಗೆ ಸೇರುತ್ತಾರೆ ಅಥವಾ ಯಾರನ್ನು ಎಲ್ಲಿ ನಿಯೋಜಿಸಬೇಕು ಎಂದು ನಿರ್ಧರಿಸುವುದು ನ್ಯಾಯಾಲಯಕ್ಕೆ ಬಹುತೇಕ ಅಸಾಧ್ಯ ಎನ್ನುವ ನಿಲುವಿಗೆ ನ್ಯಾಯಮೂರ್ತಿಗಳು ಬಂದಿದ್ದಾರೆ.
ಫೆಬ್ರವರಿ 21 ಅಂತಿಮ ಪ್ರಕಟಣೆ ದಿನಾಂಕವನ್ನು ಸ್ವಯಂಚಾಲಿತವಾಗಿ ನಿರ್ಣಾಯಕವೆಂದು ಪರಿಗಣಿಸಲಾಗುವುದಿಲ್ಲ, ತೀರ್ಪು ಫಲಿತಾಂಶಗಳಿಗೆ ಪರಿಷ್ಕರಣೆಗಳು ಅಗತ್ಯವಿದ್ದರೆ ಪೂರಕ ಪಟ್ಟಿಯನ್ನು ನೀಡುವ ಅಧಿಕಾರವನ್ನು ಇಸಿಐ ಉಳಿಸಿಕೊಂಡಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ(ಏಜೆನ್ಸೀಸ್).