Savita Pradhan IAS  
ದೇಶ

'ಮೂತ್ರ ಎರಚಿ ಹಲ್ಲೆ, ಮಕ್ಕಳ ಮುಂದೆಯೇ ಒಡೆಯುತ್ತಿದ್ದ ಪತಿ'; ಮಾನಸಿಕ, ದೈಹಿಕ ಕಿರುಕುಳ ಮಧ್ಯೆ IAS ಅಧಿಕಾರಿಯಾದ ಸವಿತಾ ಪ್ರಧಾನ್ ಕತೆ

ಪ್ರಮುಖ ಮುಖ್ಯಾಂಶಗಳು

  • ಬಡತನದಲ್ಲೇ ಬೆಳೆದ ಸವಿತಾ ಪ್ರಧಾನ್​ ಒಂದೇ ಅಟೆಮ್ಟ್​​ನಲ್ಲಿ ಯುಪಿಎಸ್ಸಿ ಪಾಸ್​​
  • ಗಂಡನಿಂದ ಮನಸ್ಸೋಇಚ್ಛೆ ಹಲ್ಲೆ, ಮೂತ್ರ ಎರಚಿ ಅವಮಾನ ಮಾಡಿಸಿಕೊಂಡಿದ್ದ ಸವಿತಾ
  • ಪಾಡ್​ಕಾಸ್ಟ್​ವೊಂದರಲ್ಲಿ ಜೀವನದ ಯಶೋಗಾಥೆ ಬಿಚ್ಚಿಟ್ಟ ಸವಿತಾ ಪ್ರಧಾನ್
ಹಗಲು ಇರುಳಿನ ಬಲೆಯೊಳಗೆ ಹಕ್ಕಿ ಸಿಲುಕಿದೆ
ಪಕ್ಕದಲ್ಲೇ ಬೇಟೆಗಾರನ ಒಲೆ ಉರಿಯುತ್ತಿದೆ. 
ಈಗ ಹಾಡಲೇಬೇಕು
ಈ ಪುಟ್ಟ ಕೊಕ್ಕಿನಲೇ ಬೇಟೆಗಾರರು ನಿದ್ರಿಸುವಂತೆ
ಈಗ ಈ ಪುಟ್ಟ ಕೊಕ್ಕನ್ನೇ ಖಡ್ಗವನ್ನಾಗಿಸಬೇಕು ಬಲೆ ಹರಿದುಬಯಲ ಸೇರುವಂತೆ
ಎಂದು ಎನ್ ಕೆ ಹನುಮಂತಯ್ಯ ಹೇಳ್ತಾರೆ
Savita Pradhan IAS Success Story: ಜೀವನದಲ್ಲಿ ಪ್ರತಿ ಕ್ಷಣ ಎದುರಾಗುವ ಕಷ್ಟ, ಅಪಾರ ನೋವುಗಳೇ ಹಾಗೆ ಒಂದು ನಮ್ಮನ್ನು ತೀರ ಒಂಟಿಯಾಗಿಸಿ, ಗಟ್ಟಿಗೊಳಿಸುತ್ತದೆ. ಇನ್ನೊಂದು ಜೀವನವನ್ನೇ ಕೊನೆಗಾಣಿಸಿಕೊಳ್ಳುವಂತೆ ಮಾಡುತ್ತದೆ. ಈ ಎರಡರಲ್ಲಿ   ಐಎಎಸ್ ಅಧಿಕಾರಿ ಸವಿತಾ ಪ್ರಧಾನ್ ಆರಿಸಿಕೊಂಡಿದ್ದು...ಗೆಲುವಿನ ಮೆಟ್ಟಿಲನ್ನು.
ಹೌದು,  ಬಡತನ, ಕೌಟುಂಬಿಕ ದೌರ್ಜನ್ಯ ಮತ್ತು ಗಂಡನಿಂದ ಆದ ಅವಮಾನಗಳನ್ನು ಎದುರಿಸಿದ ಸವಿತಾ ಪ್ರಧಾನ್​, ಮೊದಲ ಪ್ರಯತ್ನದಲ್ಲೇ 2017ರಲ್ಲಿ  Union Public Service Commission (UPSC) ಕ್ಲಿಯರ್​ ಮಾಡಿಕೊಂಡು, ಐಎಎಸ್ ಅಧಿಕಾರಿಯಾದರು. ಅವರ ಈ ಅಪ್ರತಿಮ ಸಾಧನೆ, ಇಂದು ಕಷ್ಟ ಎಂದ ಕೂಡಲೇ ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಸಾವಿರಾರು ಮಹಿಳೆಯರಿಗೆ ದಾರಿದೀಪವಾಗಿದೆ.

2017ರಲ್ಲಿ UPSC ಕ್ಲಿಯರ್

ಸವಿತಾ  ಪ್ರಧಾನ್​ ತಮ್ಮದೇ ಆದ ಯೂಟ್ಯೂಬ್​ ಚಾನೆಲ್​ನಲ್ಲಿ ರಿಲೀಸ್​ ಮಾಡಲಾಗಿರುವ ಪಾಡ್​ಕಾಸ್ಟ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸವಿತಾ ಪ್ರಧಾನ್​ ಅವರು 2017ರಲ್ಲಿ   ಒಂದೇ ಅಟೆಮ್ಟ್​ನಲ್ಲಿ ಯಪಿಎಸ್ಸಿ ಪಾಸ್​​ ಮಾಡಿಕೊಂಡರು. ಪ್ರಸ್ತುತ ಅವರು ಮಧ್ಯಪ್ರದೇಶದ ಚಂಬಲ್ ಮತ್ತು ಗ್ವಾಲಿಯರ್​ ವಿಭಾಗದ ನಗರ ಆಡಳಿತ ಜಂಟಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಮಾತನಾಡಿರುವ ಕೆಲವೊಂದು ವಿಡಿಯೋ ತುಣುಕುಗಳು  ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಯಾರೀ ಸವಿತಾ ಪ್ರಧಾನ್​?

ಮಧ್ಯಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ಸವಿತಾ, ಶಾಲಾ ಶುಲ್ಕ ಕಟ್ಟಲು ಪರದಾಡುತ್ತಿದ್ದರು. 2 ರೂಪಾಯಿ ಕೊಟ್ಟು ಬಸ್​ನಲ್ಲಿ ಓಡಾಡಲೂ ಸಾಧ್ಯವಾಗದೇ 7 ಕಿ.ಮೀ ದೂರದಲ್ಲಿರುವ ಶಾಲೆಗೆ ನಡೆದುಕೊಂಡೆ  ಹೋಗುತ್ತಿದ್ದರು. ಒಮ್ಮೆ ಅವರ ಪುಸ್ತಕದ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿತ್ತಂತೆ. ಬೇರೊಂದು ಪುಸ್ತಕ ಖರೀದಿ ಮಾಡಲಾಗದೇ ದುರ್ವಾಸನೆ ಭರಿತ ಪುಸ್ತಕದಲ್ಲೇ ಓದುಕೊಂಡಿದ್ದರಂತೆ. ಹೀಗೆ ಜೀವನ ಸಾಗುವಾದ ಅವರ ತಾಯಿಗೆ ಬೇರೊಂದು ಕಡೆ ಉದ್ಯೋಗ ಸಿಕ್ಕಿತ್ತು . ಇದರಿಂದ ಜೀವನ ಸ್ವಲ್ಪ ಸುಖದಾಯಕವಾಗಿತ್ತು ಎಂದು ಸವಿತಾ ಪ್ರಧಾನ್  ಹೇಳಿದ್ದಾರೆ.
ಜೊತೆಗೆ ಚಿಕ್ಕಂದಿನಲ್ಲಿ ಬೀಡಿ ಕಟ್ಟಲು, ಮಹುವಾ ಕುಯ್ಯಲು ಹೋಗುತ್ತಿದ್ದೆ ಎಂಬುದಾಗಿ ಪಾಡ್​ಕಾಸ್ಟ್​ವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮದುವೆ ನಂತ್ರ ನರಕಯಾತನೆ

ಸವಿತಾರನ್ನು ಮದುವೆ ಮಾಡಿಕೊಳ್ಳಲು ಶ್ರೀಮಂತ ಕುಟುಂಬದ ಸಂಬಂಧ ಬಂದಿತ್ತಂತೆ. ಆಕೆಗೆ ಇಷ್ಟವಿಲ್ಲದಿದ್ದರೂ ಮನೆಯ ಪರಿಸ್ಥಿತಿಯಿಂದಾಗಿ ಬಲವಂತವಾಗಿ ಪೋಷಕರು ಮದುವೆ ಮಾಡಿಕೊಟ್ಟಿದ್ದರಂತೆ. ತಂದೆ-ತಾಯಿಗಾಗಿ ಸಣ್ಣ ವಯಸ್ಸಿನಲ್ಲೇ ಮದುವೆಯಾಗಿ ನರಕಯಾತನೆ ಅನುಭವಿಸಿದ್ದೆ ಎಂದಿದ್ದಾರೆ ಸವಿತಾ.
 ಮನೆಯಲ್ಲಿ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಸ್ನಾನದ ಕೋಣೆಯಲ್ಲಿ ಅಡಗಿಸಿಟ್ಟ ಚಪಾತಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರು. ಪತಿ ಮಕ್ಕಳ ಮುಂದೆಯೇ ಮನಬಂದಂತೆ ಹೊಡೆಯುತ್ತಿದ್ದನು. ಒಂದು ಬಾರಿ ಬಕೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಸವಿತಾ ಮೇಲೆ ಸುರಿದಿದ್ದ. ಈ ಬಗ್ಗೆ ತಂದೆಗೆ ತಿಳಿಸಿ ಪತಿ ನನ್ನನ್ನು ಕೊಲ್ಲಬಹುದು ಕರೆದುಕೊಂಡು ಹೋಗಿ ಎಂದು ಹೇಳಿದ್ದರಂತೆ. ಸಂಜೆ ವಾಪಸ್​ ಬರುವುದಾಗಿ ಹೇಳಿ ಹೊರಟ ತಂದೆ ಮತ್ತೆ ಇತ್ತ ಮುಖವು ಹಾಕುತ್ತಿರಲಿಲ್ಲ ಎಂದು ಸವಿತಾ ವಿಷಾದ ವ್ಯಕ್ತಪಡಿಸಿದರು.
ಒಮ್ಮೆ ಆತ್ಮಹತ್ಯೆಗೆ ನಿರ್ಧರಿಸಿ ಫ್ಯಾನಿಗೆ ಸೀರೆಯೊಡ್ಡಿ ಮಕ್ಕಳೊಂದಿಗೆ ಸಾಯಲು ನಿರ್ಧರಿಸಿದ್ದಾಗ ಅವರ ಪತಿಯ ಅಮ್ಮ ಇಣುಕಿ ನೋಡಿದ್ದರಂತೆ. ಇಂತಹ ಜನಕ್ಕಾಗಿ ಯಾತಕ್ಕಾಗಿ ಸಾಯಬೇಕು ಎಂದು ದಿಟ್ಟ ನಿರ್ಧಾರ ಕೈಗೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.
ಪತಿಯ ಹೊಡಿ ಬಡಿ, ಮಾನಸಿಕ ಮತ್ತು ದೈಹಿಕ ಹಿಂಸಾಚಾರದ ಮಧ್ಯೆ ಸವಿತಾ ಅವರು ಎಂಎ ಪರೀಕ್ಷೆ ಕಟ್ಟಿ ಬರೆದುಕೊಂಡಿದ್ದರಂತೆ. ಪರೀಕ್ಷೆ ಬರೆಯಲು ತೆರಳುವ ದಿನ ಸವಿತಾ ಪತಿ ಅವರಿಗೆ ಹಿಂಸೆ ನೀಡಿದ್ದರು. ನೊಂದ ಮನಸ್ಸಲ್ಲೇ ಅಂದು ಪರೀಕ್ಷೆ ಬರೆದಿದ್ದಾಗಿ ಬೇಸರ ವ್ಯಕ್ತಪಡಿಸದ್ದಾರೆ. 

ಹೊಸ ಜೀವನ ಕಟ್ಟಿಕೊಂಡ ಸವಿತಾ

 ಪತಿಯ ಕಾಟ ಸಹಿಸುವಷ್ಟು ಸಹಿಸಿ, ಇನ್ನು ಆಗೋಲ್ಲ ಎಂದು ಮನೆಯಿಂದ ಇಬ್ಬರು ಮಕ್ಕಳೊಂದಿಗೆ ಓಡಿಬಂದ ಸವಿತಾ, ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾ, ಟ್ಯೂಷನ್ ಹೇಳಿಕೊಡುತ್ತಾ ಯುಪಿಎಸ್‌ಸಿ ಸಿದ್ಧತೆ ನಡೆಸಿ ಕೊಂಡರು. ಛಲದಿಂದ ಓದಿ ಮೊದಲ ಪ್ರಯತ್ನದಲ್ಲೇ ಐಎಎಸ್ ಅಧಿಕಾರಿಯಾದರು. ಅಧಿಕಾರಿಯಾದ ನಂತರವೂ ಪತಿ ಬಂದು ಹಣಕ್ಕಾಗಿ ಪೀಡಿಸಿ ಹಲ್ಲೆ ಮಾಡುತ್ತಿದ್ದನು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಆತನಿಗೆ ತಕ್ಕ ಪಾಠ ಕಲಿಸಿ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು.

ಸವಿತಾ ಏನ್​ ಹೇಳ್ತಾರೆ?

"ಯಾವುದೇ ಅನ್ಯಾಯ ಅಥವಾ ದೌರ್ಜನ್ಯವನ್ನು ಮೌನವಾಗಿ ಸಹಿಸುಕೊಂಡು ಬದುಕುವ ಅವಶ್ಯಕತೆಯೇ ಇಲ್ಲ. ಇದು ನಮ್ಮ ಬದುಕು ಅದನ್ನು ಸುಂದರವಾಗಿಸಿಕೊಳ್ಳಬೇಕು, ಅನ್ವೇಷಿಸಬೇಕು,. ಹಕ್ಕಿಗಳಂತೆ ಸ್ವಾತಂತ್ರ್ಯವಾಗಿ ಹಾರಾಡುತ್ತಾ ಬದುಕಬೇಕು. ಸಹಿಸಿಕೊಂಡು ತ್ಯಾಗಮಯಿ ಆಗೋದು ಒಳ್ಳೆ ಗುಣ ಅಲ್ಲ ಅದು ನಾವು ಮಾಡುವ ದೊಡ್ಡ ತಪ್ಪು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವಿದ್ದರೆ  ಯಾವ ಹಾವಿನ ಹುತ್ತದಲ್ಲಿದ್ದರು ನುಸುಳಿ ಹೊರಗೆ ಬರಬಹುದು" ಎಂದು ಸವಿತಾ ಪ್ರಧಾನ್​ ಸಲಹೆ ನೀಡಿದರು, (ಏಜೆನ್ಸೀಸ್​).