Saurav Das: ಕಳೆದ ಸುಮಾರು ಎರಡು ತಿಂಗಳುಗಳಿಂದ ಭಾರತದ ರಾಜಕೀಯ ಅಂಗಳದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರು ಭಾರಿ ಸಂಚಲನ ಮೂಡಿಸುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯೊಂದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಾತ್ಮಕವಾಗಿ ಆರಂಭವಾದ ಈ ಪ್ರಕ್ರಿಯೆಯು, ಇಂದು ದೇಶದ ಲಕ್ಷಾಂತರ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಯುವ ವೃತ್ತಿಪರರನ್ನು ಬೀದಿಗೆ ತಂದು ನಿಲ್ಲಿಸುವ ಮಟ್ಟಕ್ಕೆ ಬೃಹತ್ ರಾಷ್ಟ್ರೀಯ ಆಂದೋಲನವಾಗಿ ರೂಪುಗೊಂಡಿದೆ.
ಈ ಸಂಘಟನೆಯು ತನ್ನನ್ನು ಒಂದು ಕೂಡು ತಂಡದಿಂದ ನಡೆಸಲ್ಪಡುವ ಆಂದೋಲನ ಎಂದು ಕರೆದುಕೊಂಡಿದೆಯಾದರೂ, ಇದರ ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಂತ್ರಗಾರ ಅಶುತೋಷ್ ರಾಂಕಾ, ವಕೀಲರಾದ ರತ್ನಾ ಸಿಂಗ್ ಹಾಗೂ ವಕ್ತಾರ ಸೌರವ್ ದಾಸ್ ಈ ಚಳವಳಿಯ ಪ್ರಮುಖ ಮುಖಗಳಾಗಿ ಹೊರಹೊಮ್ಮಿದ್ದಾರೆ. ಇವರಲ್ಲಿ ಸೌರವ್ ದಾಸ್ ತಮ್ಮ ಆಕರ್ಷಕ ಭಾಷಣಗಳು, ಚುರುಕಿನ ಮಾತುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಸಕ್ರಿಯ ಉಪಸ್ಥಿತಿಯಿಂದಾಗಿ ದೇಶದ ಯುವಜನತೆಯ ಗಮನವನ್ನು ಬಹುವಾಗಿ ಸೆಳೆದಿದ್ದಾರೆ.
ವೃತ್ತಿಯಲ್ಲಿ ತನಿಖಾ ಪತ್ರಕರ್ತರಾಗಿರುವ ಸೌರವ್ ದಾಸ್, 2016 ರಿಂದ 2019 ರ ಅವಧಿಯಲ್ಲಿ ಅಮಿಟಿ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲೇ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುವ ಮೂಲಕ ನ್ಯೂಸ್ ಡೆಸ್ಕ್ ಅನುಭವ ಪಡೆದಿದ್ದ ಅವರು, ನಂತರ ವಿಡಿಯೋ ಪ್ರೊಡ್ಯೂಸರ್ ಹಾಗೂ ಕಂಟೆಂಟ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಿದ್ದರು. 2020 ರಿಂದ ಸ್ವತಂತ್ರ ತನಿಖಾ ಪತ್ರಕರ್ತರಾಗಿ ಸಕ್ರಿಯರಾಗಿರುವ ದಾಸ್, ತಮ್ಮ ವೈಯಕ್ತಿಕ ವೆಬ್‌ಸೈಟ್ ಹಾಗೂ ಲಿಂಕ್ಡ್‌ಇನ್ ಖಾತೆಯಲ್ಲಿ ಹಲವು ವಿಶ್ಲೇಷಣಾತ್ಮಕ ಲೇಖನಗಳು ಮತ್ತು ವರದಿಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ.
ಮಾಧ್ಯಮ ಕ್ಷೇತ್ರದ ಈ ಅನುಭವ ಹಾಗೂ ತನಿಖಾ ಶೈಲಿಯೇ ಪ್ರಸ್ತುತ ಚಳವಳಿಯಲ್ಲಿ ವಿಷಯಗಳನ್ನು ಸಾರ್ವಜನಿಕರ ಮುಂದೆ ಬಲವಾಗಿ ಮಂಡಿಸಲು ಅವರಿಗೆ ನೆರವಾಗಿದೆ. ಸಿಜೆಪಿ ಆಂದೋಲನ ಬೆಳೆದಂತೆ ಸೌರವ್ ದಾಸ್ ಸಾಮಾಜಿಕ ಜಾಲತಾಣದ ಜನಪ್ರಿಯತೆಯೂ ಕ್ಷಿಪ್ರವಾಗಿ ಏರಿಕೆಯಾಗಿದ್ದು, ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ 1.62 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಚಲೋ ಸಂಸದ್ ಪ್ರತಿಭಟನೆಯ ವಿಡಿಯೋಗಳು ಮತ್ತು ಸಂದರ್ಶನಗಳ ಮೂಲಕ ಅವರು ಈ ಯುವ ಚಳವಳಿಯ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ(ಏಜೆನ್ಸೀಸ್).